ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕೃಷಿ ಸಾಲ ವಸೂಲಾತಿ ಪದ್ಧತಿಗೆ ವಿರೋಧ, ಕರ್ನಾಟಕ ಬ್ಯಾಂಕ್‌ಗೆ ಮುತ್ತಿಗೆ

Last Updated 14 ಏಪ್ರಿಲ್ 2022, 5:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಕೃಷಿ ಸಾಲ ವಸೂಲಾತಿ ಪದ್ಧತಿಯನ್ನು ವಿರೋಧಿಸಿ ಬಳ್ಳಾರಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಗೆ ಏ. 18ರಂದು ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಆರ್‌. ಮಾಧವರೆಡ್ಡಿ ಕರೂರು ತಿಳಿಸಿದರು.

‘ಅಂದು ಬಳ್ಳಾರಿಯ ನಾರಾಯಣರಾವ್‌ ಪಾರ್ಕ್‌ನಿಂದ ಬ್ಯಾಂಕಿನ ಕಚೇರಿ ವರೆಗೆ ರ್‍ಯಾಲಿ ನಡೆಸಲಾಗುವುದು. ರಾಜ್ಯದ ವಿವಿಧ ಭಾಗಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು’ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಕೋವಿಡ್‌ನಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಇದರ ಪರಿಣಾಮ ಅವರು ಬ್ಯಾಂಕಿನಲ್ಲಿ ಸಾಲ ಪಡೆಯುವುದು ಅನಿವಾರ್ಯವಾಗಿದೆ. ಆದರೆ, ಗ್ರಾಮೀಣ ಬ್ಯಾಂಕ್‌ ಆರ್‌ಬಿಐ ನಿಯಮ ಮೀರಿ ಬಡ್ಡಿ ವಸೂಲಾತಿ ಮಾಡುತ್ತಿದೆ. ಕೊಪ್ಪಳದ ಅಸುಂಡಿಯ ರೈತರೊಬ್ಬರು ಪಡೆದ ₹30,000 ಸಾಲದ ಮೇಲೆ ₹1.50 ಲಕ್ಷ ಬಡ್ಡಿ ವಿಧಿಸಲಾಗಿದೆ. ಇದೇ ರೀತಿ ರಾಜ್ಯದಾದ್ಯಂತ ಶೋಷಿಸಲಾಗುತ್ತಿದೆ. ಅದರ ವಿರುದ್ಧ ಧ್ವನಿ ಎತ್ತಲು ಈ ಹೋರಾಟ ಎಂದು ವಿವರಿಸಿದರು.

ರಾಜ್ಯದಲ್ಲಿ ರೈತರ ಒಟ್ಟು ಸಾಲ ₹43,000 ಕೋಟಿ ಇದೆ. ರೈತರ ಸಾಲ ಮನ್ನಾ ಮಾಡಲು ಸರ್ಕಾರ ನೂರೆಂಟು ನೆಪ ಹೇಳುತ್ತಿದೆ. ಆದರೆ, ಜಿಂದಾಲ್‌ ಕಂಪನಿಯೊಂದರ ₹58,000 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಇಡೀ ದೇಶದಲ್ಲಿ 7 ಜನಕ್ಕೆ 11 ಲಕ್ಷ ಕೋಟಿ ಸಾಲ ನೀಡಲಾಗಿದೆ. ಅಂಬಾನಿ, ಅದಾನಿ ಸೇರಿದಂತೆ ಅನೇಕ ಬಿಲಿಯನೇರ್‌ಗಳು ರೈತರೆಂದು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದಾರೆ. ಇದಕ್ಕೆ ಪರೋಕ್ಷವಾಗಿ ಕೇಂದ್ರ, ರಾಜ್ಯ ಸರ್ಕಾರಗಳ ಬೆಂಬಲವೂ ಇದೆ. ರೈತರನ್ನು ಅಸಡ್ಡೆ ಮಾಡಿರುವುದರಿಂದಲೇ ಕಾಂಗ್ರೆಸ್‌ಗೆ ಇಂದು ಈ ದುರ್ಗತಿ ಬಂದಿದೆ. ಬರುವ ದಿನಗಳಲ್ಲಿ ಬಿಜೆಪಿಯವರಿಗೂ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದರು.

ಕೋಲಾರದ ರೈತ ಮುಖಂಡ ಸಾ. ರಘುನಾಥ್‌ ಮಾತನಾಡಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಹಳೆ ಮೈಸೂರು ರೈತರೆಂದು ಸರ್ಕಾರ ವ್ಯವಸ್ಥಿತವಾಗಿ ರೈತರನ್ನು ವಿಘಟನೆ ಮಾಡಿದೆ. ನಮ್ಮ ಒಗ್ಗಟ್ಟು ಮುರಿದರೆ ಪ್ರಶ್ನಿಸುವವರು ಯಾರೂ ಇರುವುದಿಲ್ಲ ಎಂಬ ಕಾರಣಕ್ಕಾಗಿ ಹೀಗೆ ಮಾಡಲಾಗುತ್ತಿದೆ. ಈ ಕುರಿತು ರಾಜ್ಯದಾದ್ಯಂತ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ರೈತ ಮುಖಂಡ ಪ್ರವೀಣ್‌ ರೆಡ್ಡಿ ಇದ್ದರು.

‘ಮೃತ ರೈತರ ಮನೆಗೆ ಭೇಟಿ ನೀಡುವ ಸೌಜನ್ಯ ಮಂತ್ರಿಗಿಲ್ಲ’
‘ಅಕಾಲಿಕ ಮಳೆಯಿಂದ ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದ್ದರಿಂದ ಹತ್ತು ರೈತರು ವಿಜಯನಗರ–ಬಳ್ಳಾರಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸಚಿವ ಆನಂದ್‌ ಸಿಂಗ್‌ ಕನಿಷ್ಠ ಮೃತ ರೈತರ ಮನೆಗೆ ಭೇಟಿ ಕೊಡುವ ಸೌಜನ್ಯ ತೋರಿಲ್ಲ. ಸಾಂತ್ವನ ಹೇಳಿಲ್ಲ. ವಿಜಯನಗರ ಕಾಲುವೆಗಳನ್ನು ಮುಚ್ಚಿದ ಇವರಿಂದ ಬೇರೇನೂ ನಿರೀಕ್ಷಿಸಲು ಸಾಧ್ಯ’ ಎಂದು ಮಾಧವರೆಡ್ಡಿ ಟೀಕಿಸಿದರು.

‘ಕೋಡಿಹಳ್ಳಿ ಸಮಾವೇಶಕ್ಕಿಲ್ಲ ಬೆಂಬಲ’
‘ಪರ್ಯಾಯ ರಾಜಕಾರಣಕ್ಕಾಗಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹಮ್ಮಿಕೊಂಡಿರುವ ರೈತ ಸಮಾವೇಶಕ್ಕೆ ತಮ್ಮ ಬೆಂಬಲವಿಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಮಾಧವರೆಡ್ಡಿ ತಿಳಿಸಿದರು.

‘ಸಮಾವೇಶ ಸಂಘಟಿಸುತ್ತಿರುವವರು ನಮ್ಮನ್ನು ಸಂಪರ್ಕಿಸಿಲ್ಲ. ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ ತೊರೆಯಲು ನಿರ್ಧಾರ’
‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಧೋರಣೆ ಖಂಡಿಸಿ ಆ ಪಕ್ಷ ತೊರೆಯಲು ನಿರ್ಧರಿಸಿರುವೆ’ ಎಂದು ಹಿರಿಯ ರೈತ ಮುಖಂಡ ಜೆ.ಎನ್‌. ಕಾಳಿದಾಸ್‌ ತಿಳಿಸಿದರು.

‘ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದ ಧೋರಣೆ ಸರಿಯಿಲ್ಲ. ಹೊಂದಿಕೊಂಡು ಹೋಗುವ ಸ್ವಭಾವ ಪಕ್ಷದ ಮುಖಂಡರಲ್ಲಿದೆ. ಅದಕ್ಕೆ ಬೇಸತ್ತು ಪಕ್ಷದಿಂದ ಹೊರಬರಲು ನಿರ್ಧರಿಸಿರುವೆ’ ಎಂದು ತೀರ್ಮಾನ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT