ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಚೆ ಲಕೋಟಿಯಲ್ಲಿ ಅರಳಿದ ‘ಹಡಗಲಿ ಮಲ್ಲಿಗೆ’; ಬದುಕು ಅರಳುವುದು ಯಾವಾಗ?

ಅಂಚೆ ಲಕೋಟಿಯಲ್ಲಿ ಅರಳಿದ ‘ಹಡಗಲಿ ಮಲ್ಲಿಗೆ’
Published : 1 ಸೆಪ್ಟೆಂಬರ್ 2021, 19:30 IST
ಫಾಲೋ ಮಾಡಿ
Comments

ಹೂವಿನಹಡಗಲಿ: ಅಂಚೆ ಇಲಾಖೆಯ ವಿಶೇಷ ಅಂಚೆ ಲಕೋಟೆಯಲ್ಲಿ ‘ಹಡಗಲಿ ಮಲ್ಲಿಗೆ’ ವಿಜೃಂಭಿಸಿ ಅದರ ಮಲ್ಲಿಗೆ ಪರಿಮಳ ಎಲ್ಲೆಡೆ ಪಸರಿಸಿದೆ.

ಇದು ಮಲ್ಲಿಗೆ ಬೆಳೆಗಾರರಿಗೆ ಹೆಮ್ಮೆ ಮೂಡಿಸಿದೆ. ವಿಶೇಷ ಸುವಾಸನೆಯಿಂದ ಕೂಡಿರುವ ಹಡಗಲಿಯ ಸೂಜಿ ಮಲ್ಲಿಗೆ ಎಂಟು ವರ್ಷಗಳ ಹಿಂದೆ ಭೌಗೋಳಿಕ ಬೆಳೆಯಾಗಿ ಗುರುತಿಸಿಕೊಂಡು ರಾಷ್ಟ್ರೀಯ ಮಾನ್ಯತೆ ಗಳಿಸಿದೆ. ಇದೀಗ ಅಂಚೆ ಲಕೋಟೆಯಲ್ಲಿಯೂ ಮಲ್ಲಿಗೆ ಮುದ್ರಿತಗೊಳ್ಳುತ್ತಿರುವುದು ಮಲ್ಲಿಗೆ ನಾಡಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.

ವಿಜಯನಗರ ಅರಸರ ಕಾಲದಿಂದಲೂ ಮಲ್ಲಿಗೆ ಬೆಳೆಗೆ ಹಡಗಲಿ ಪ್ರಸಿದ್ಧಿಯಾಗಿದೆ. ಹಂಪಿಯ ಅಧಿದೇವತೆ ವಿರೂಪಾಕ್ಷ, ಪಂಪಾಂಬಿಕೆಯರ ಪೂಜೆಗೆ ನಿತ್ಯವೂ ಮಲ್ಲಿಗೆ ಹೂವನ್ನು ಇಲ್ಲಿಂದ ತುಂಗಭದ್ರಾ ನದಿಯಲ್ಲಿ ತೆಪ್ಪಗಳ ಮೂಲಕ ಕಳಿಸಲಾಗುತ್ತಿತ್ತು ಎಂಬ ಉಲ್ಲೇಖ ಚರಿತ್ರೆಯಲ್ಲಿದೆ.

ಕೋವಿಡ್ನಿಂದ ಎರಡು ವರ್ಷಗಳಿಂದ ಮಲ್ಲಿಗೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೂ ಸುಗ್ಗಿಯಲ್ಲೇ ಮಹಾನಗರಗಳ ಮಾರುಕಟ್ಟೆಗಳು ಬಂದ್ ಆಗಿದ್ದರಿಂದ ಮಲ್ಲಿಗೆ ಕೃಷಿ ಅವಲಂಬಿತರೆಲ್ಲ ತೊಂದರೆ ಅನುಭವಿಸಿದ್ದಾರೆ.

ಹೂ ಬೆಳೆಗಾರರಿಗೆ ಸರ್ಕಾರ ಪ್ರತಿ ಹೆಕ್ಟೇರ್ ಗೆ ₹25 ಸಾವಿರ ಪರಿಹಾರ ಘೋಷಿಸಿದ್ದರೂ ನೆರವು ಸಿಕ್ಕಿರುವುದು ತಾಲ್ಲೂಕಿನ ಆರೇಳು ಜನರಿಗಷ್ಟೇ. ಕಠಿಣ ಷರತ್ತುಗಳಿಂದಾಗಿ ಬಹುಪಾಲು ರೈತರು ಪರಿಹಾರ ವಂಚಿತರಾಗಿದ್ದಾರೆ. ಮಲ್ಲಿಗೆ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯೂ ಎರಡು ವರ್ಷದಿಂದ ಸ್ಥಗಿತಗೊಂಡಿದೆ.

ಮಾರುಕಟ್ಟೆಯಲ್ಲಿ ಮಲ್ಲಿಗೆಗೆ ಸ್ಥಿರಬೆಲೆ ದೊರೆಯದಿರುವುದು, ಮಧ್ಯವರ್ತಿಗಳ ಶೋಷಣೆ, ಸಾಗಣೆ ಸಮಸ್ಯೆ, ಹೂ ಬಿಡಿಸುವ ಕೂಲಿಕಾರರ ಅಭಾವ ಸೇರಿದಂತೆ ಮಲ್ಲಿಗೆ ಕೃಷಿಗೆ ನಾನಾ ಸಮಸ್ಯೆಗಳು ಮುತ್ತಿಕೊಂಡಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ಮಲ್ಲಿಗೆ ತೋಟಗಳು ಕ್ಷೀಣಿಸುತ್ತಿವೆ. ಹಿಂದೆ ಸಾವಿರಾರು ಹೆಕ್ಟೇರ್ ನಲ್ಲಿದ್ದ ಮಲ್ಲಿಗೆ ಕೃಷಿ ಈಗ 250 ಹೆಕ್ಟೇರ್ ಗೆ ಕುಸಿದಿದೆ.

ಪಾರಂಪರಿಕ ಮಲ್ಲಿಗೆ ಕೃಷಿಯ ಸಂರಕ್ಷಣೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ವಿಶೇಷ ಯೋಜನೆಗಳನ್ನು ರೂಪಿಸಿಲ್ಲ. ಭೌಗೋಳಿಕ ಹಿನ್ನೆಲೆ ಹೊಂದಿರುವ ಹಡಗಲಿ ಮಲ್ಲಿಗೆ ಬರೀ ಅಂಚೆ ಲಕೋಟೆಯಲ್ಲಿ ಅರಳಿದರೆ ಸಾಕೇ, ಹೂ ಬೆಳೆಗಾರರ ಬದುಕು ಅರಳುವುದು ಬೇಡವೇ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT