ಎ.ಎಂ. ಸೋಮಶೇಖರಯ್ಯ
ಕೂಡ್ಲಿಗಿ: ಕಳೆದ ಒಂದು ವಾರದಿಂದ ತಾಲ್ಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಬಿತ್ತನೆ ಮಾಡಿರುವ ಬೆಳೆಗಳು ನಳನಳಿಸುತ್ತಿವೆ.
ಮುಂಗಾರು ಆರಂಭವಾದಾಗಿನಿಂದಲೂ ದೊಡ್ಡ ಮಳೆಯೇನು ಬಂದಿಲ್ಲವಾದರೂ, ಬಿದ್ದ ಅಲ್ಪಸ್ವಲ್ಪ ಮಳೆಗೆ ರೈತರು ಬಿತ್ತನೆ ಮಾಡಿದ್ದಾರೆ. ಇದೀಗ ಬೀಳುತ್ತಿರುವ ತುಂತುರು ಮಳೆಯೇ ಬೆಳೆಯುತ್ತಿರುವ ಬೆಳೆಗಳಿಗೆ ಜೀವಾಳವಾಗಿದೆ. ಮಳೆ ಬಿಡುವು ನೀಡಿರುವುದರಿಂದ ಕಳೆ ಕೀಳುವ, ಗೊಬ್ಬರ ಹಾಕುವ ಕೆಲಸದಲ್ಲಿ ರೈತರು ತೊಡಗಿದ್ದಾರೆ.
ಈ ವರ್ಷ ಮುಂಗಾರು ಆರಂಭದಲ್ಲಿ ತಾಲ್ಲೂಕಿನ ಕೆಲ ಭಾಗದಲ್ಲಿ ಮಾತ್ರ ಉತ್ತಮ ಮಳೆಯಾಗಿತ್ತಾದರೂ, ಸಕಾಲದಲ್ಲಿ ಮಳೆ ಬಾರದೆ 1,635 ಹೆಕ್ಟೇರ್ ಬಿತ್ತನೆಯಾಗಬೇಕಾಗಿದ್ದ ಜೋಳ 360 ಹೆಕ್ಟೇರ್ ಮಾತ್ರ ಬಿತ್ತನೆಯಗಿದೆ. ಆದರೆ ನಂತರ ಬಿದ್ದ ಮಳೆಯಿಂದ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಹಾಗೂ ಶೇಂಗಾ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಚುರುಕುಗೊಂಡಿದೆ. ಮೋಡ ಮುಸುಕಿದ ವಾತಾವರಣ ನಡುವೆ ಸಣ್ಣದಾಗಿ ಬೀಳುತ್ತಿರುವ ಮಳೆಯಿಂದ ಬೆಳೆಗಳು ನಳನಳಿಸುತ್ತಿವೆ. ಬಿಸಿಲಿನ ತಾಪ ಇಲ್ಲದ ಕಾರಣ ಸಮರ್ಪಕ ಮಳೆ ಸುರಿಯದಿದ್ದರೂ ಬೆಳೆಗಳು ಹಚ್ಚ ಹಸಿರಾಗಿವೆ.
ತಾಲ್ಲೂಕಿನಲ್ಲಿ ಯೂರಿಯಾ ಅಭಾವವಿಲ್ಲ. ನಿಗದಿಪಡಿಸಿದಷ್ಟೇ ಗೊಬ್ಬರ ಬಳಸಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು.ಸುನಿಲ್ ಕುಮಾರ್, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಕೂಡ್ಲಿಗಿ
30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿದ್ದು, 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ. ಶೇಂಗಾ ಬಿತ್ತನೆಗೆ ಇನ್ನು ಕಾಲಾವಕಾಶ ಇದ್ದು, ಹದ ಮಳೆಯಾಗಿರುವುದರಿಂದ ಈ ವಾರದಲ್ಲಿ ಬಿತ್ತನೆ ಕಾರ್ಯ ಮುಗಿಯಬಹುದು ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.
ತಾಲ್ಲೂಕಿನಲ್ಲಿ ಜುಲೈ ಅಂತ್ಯಕ್ಕೆ 22.2 ಸೆಂ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, ಈವರೆಗೆ 21.7 ಸೆಂ.ಮೀ ಮಳೆಯಾಗಿದೆ. ಇದರಿಂದ ಅತಿವೃಷ್ಟಿ ಅಥವಾ ಅನಾವೃಷ್ಟಿ ಇಲ್ಲ. ತಾಲ್ಲೂಕಿನ 59,410 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಇದ್ದು, 44,650 ಹೆಕ್ಟೇರ್ ಬಿತ್ತನೆಯಾಗಿದೆ. ಜೋಳ-360 ಹೆಕ್ಟೇರ್(1,635 ಗುರಿ), ಮೆಕ್ಕೆಜೋಳ-19,190ಹೆಕ್ಟೇರ್(18,635 ಗುರಿ), ರಾಗಿ-2,284 ಹೆಕ್ಟೇರ್(2,925 ಗುರಿ), ತೊಗರಿ 1,240ಹೆಕ್ಟೇರ್(1,240), ಸೂರ್ಯಕಾಂತಿ-1,365ಹೆಕ್ಟೇರ್(1,382) ಹೆಕ್ಟೇರ್ ಹಾಗೂ ಉಳಿದ ಪ್ರದೇಶದಲ್ಲಿ ದ್ವಿದಳ, ಹತ್ತಿ, ನವಣೆ ಸೇರಿದಂತೆ ಇತರೆ ಬೆಳೆ ಬಿತ್ತನೆಯಾಗಿದೆ. ಹತ್ತಿ ಗಿಡದಲ್ಲಿ ಅರಳಿರುವ ಹತ್ತಿಯಲ್ಲಿನ ಬೀಜಗಳು ಮಳೆ ಹಾಗೂ ತೇವಾಂಶ ಹೆಚ್ಚಳ್ಳದಿಂದ ಮೊಳಕೆ ಬಂದಿದೆ. ಇದರಿಂದ ತಾಲ್ಲೂಕಿನಲ್ಲಿ ಸುಮಾರು 6 ಹೆಕ್ಟೇರ್ ಹತ್ತಿ ನಷ್ಟವಾಗಿದೆ.
ಯೂರಿಯಾ ಬಳಕೆ ಸಲಹೆ
ಸಣ್ಣ ಹರಳು ಹಾಗೂ ದೊಡ್ಡ ಹರಳಿನ ಯೂರಿಯಾ ಗೊಬ್ಬರ ಒಂದೇ ಅಗಿದ್ದು ಎರಡರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅದ್ದರಿಂದ ರೈತರು ಯಾವುದನ್ನು ಬೇಕಾದರೂ ಉಪಯೋಗಿಸಬಹುದು. ನಿರಂತರ ಮಳೆಯಿಂದ ಮೆಕ್ಕೆ ಜೋಳ ಹಳದಿ ಬಣ್ಣಕ್ಕೆ ತಿರುಗಿದ್ದು ಪ್ರತಿ ಎಕರೆ ನೀರಾವರಿಗೆ 60 ಕೆಜಿ ಮಳೆಯಾಶ್ರಿತಕ್ಕೆ 40ಕೆಜಿಯಂತೆ ಯೂರಿಯಾ ಗೊಬ್ಬರ ಬಳಕೆ ಮಾಡಬೇಕು. ಇಲ್ಲವೆ ನ್ಯಾನೋ ಯೂರಿಯಾವನ್ನು ಸಿಂಪರಣೆ ಮಾಡಬೇಕು ಎಂದು ಕೃಷಿ ತಾಂತ್ರಿಕ ಅಧಿಕಾರಿ ನೀಲಾ ನಾಯ್ಕ್ ಸಲಹೆ ನೀಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.