ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಭಾರಿ ಗಾಳಿ, ಮಳೆ: ನೂರಾರು ಎಕರೆ ಬಾಳೆ ತೋಟ, ಭತ್ತದ ಗದ್ದೆ ನಾಶ

Published 12 ಮೇ 2024, 8:05 IST
Last Updated 12 ಮೇ 2024, 8:05 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ ಮತ್ತು ತಾಲ್ಲೂಕಿನ ವಿವಿಧೆಡೆ ಶನಿವಾರ ರಾತ್ರಿ ಭಾರಿ ಗಾಳಿಯೊಂದಿಗೆ ಸುರಿದ ಮಳೆಯಿಂದ ಇಡೀ ವಾತಾವರಣದಲ್ಲಿ ಸ್ವಲ್ಪ ತಂಪು ಆವರಿಸಿದ್ದು, ಬಿಸಿಲಿನ ಝಳದಿಂದ ಬೆಂದಿದ್ದ ಜನ ವರ್ಷದ ಮೊದಲ ದೊಡ್ಡ ಮಳೆಯಿಂದ ಸ್ವಲ್ಪ ನೆಮ್ಮದಿ ಅನುಭವಿಸಿದರು.

ಶನಿವಾರ ರಾತ್ರಿ ಮುಕ್ಕಾಲು ತಾಸು ಗಾಳಿ ಸಹಿತ ಬಿರುಸಿನ ಮಳೆ ಸುರಿದಿತ್ತು. ವಿವಿಧೆಡೆ ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಕೆಲವೆಡೆ ಮನೆಗಳಿಗೆ ಚರಂಡಿ ನೀರು ನುಗ್ಗಿ ಸ್ವಲ್ಪ ಹೊತ್ತು ತೊಂದರೆ ಉಂಟಾಯಿತು. ವಿದ್ಯುತ್ ಕಡಿತ ಬಿಟ್ಟರೆ ಬೇರೇನೂ ಹಾನಿ ಆಗಲಿಲ್ಲ.

ಬಾಳೆ ತೋಟ ನಾಶ

ತಾಲ್ಲೂಕಿನ ಚಿತ್ತವಾಡ್ಗಿ, ಹೊಸೂರು, ಬಸವನದುರ್ಗ, ಹಾನಗಲ್ಲ್, ಇಪ್ಪತೇರಿ, ಕರೆಕಲ್ಲ್, ನರಸಾಪುರ ಪ್ರದೇಶದಲ್ಲಿ ವ್ಯಾಪಕ ಗಾಳಿ ಬೀಸಿದ್ದರಿಂದ ರೈತರ ನೂರಾರು ಏಕರೆ ಪ್ರದೇಶದ ಬಾಳೆ, ಕಬ್ಬು ಮತ್ತು ಭತ್ತದ ಬಳೆ ಸೇರಿದಂತೆ ಅನೇಕ ಬೆಳೆಗಳು ಹಾನಿಗೊಂಡಿವೆ. ಫಸಲು ಬಿಡುವ ಹಂತದ ಬಾಳೆಗಿಡಗಳು ದೊಡ್ಡ ಪ್ರಮಾಣದಲ್ಲಿ ನೆಲಕಚ್ಚಿವೆ.

ರಾಯ, ಬಸವ ಕಾಲುವೆಗಳು ಈ ಭಾಗದ ಪ್ರಾಚೀನ ಕಾಲುವೆಗಳಾಗಿದ್ದು, ಅದನ್ನೇ ನಂಬಿ ಇಲ್ಲಿ ಬಾಳೆ, ಕಬ್ಬು, ಭತ್ತ ಬೆಳೆಯಲಾಗುತ್ತಿದೆ. ಇಲ್ಲಿನ ಸುಗಂಧಿ ಬಾಳೆ ಭೌಗೋಳಿಕ ಮಾನ್ಯತೆ ಪಡೆದ ತಳಿಯಾಗಿದ್ದು, ಏಲಕ್ಕಿ, ಸಕ್ಕರೆ ಬಾಳೆಯನ್ನೂ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಭಾರಿ ಗಾಳಿಗೆ ಇಂತಹ ಸಾವಿರಾರು ಗಿಡಗಳು ನೆಲಕಚ್ಚಿವೆ.

ಎರಡು ದಿನದ ಹಿಂದೆ ತಾಲ್ಲೂಕಿನ ಬುಕ್ಕಸಾಗರ ಪ್ರದೇಶದಲ್ಲಿ ನೂರಾರು ಎಕರೆ ಬಾಳೆ ತೋಟ ನಾಶವಾಗಿತ್ತು. ಅಂದು ರಭಸವಾಗಿ ಗಾಳಿ ಬೀಸಿತ್ತು, ಮಳೆ ಕಡಿಮೆ ಇತ್ತು. ಆದರೆ ಶನಿವಾರ ಗಾಳಿಯೊಂದಿಗೆ ಮಳೆಯ ಅಬ್ಬರವೂ ಜೋರಾಗಿತ್ತು. ಬುಕ್ಕಸಾಗರ, ಕಮಲಾಪುರ ಕಡೆಗಳಲ್ಲಿ ಶನಿವಾರ ಅಂತಹ ಹಾನಿ ಸಂಭವಿಸಿಲ್ಲ.

ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರು

ಶನಿವಾರದ ಗಾಳಿ, ಮಳೆಯಿಂದಾಗಿ ನಗರದ ಎಂ.ಜೆ.ನಗರ, 100 ಹಾಸಿಗೆ ಆಸ್ಪತ್ರೆಯ ರಸ್ತೆ, ಮೇನ್ ಬಜಾರ್ ಬಳ್ಳಾರಿ ರಸ್ತೆಯ ಹಲವುಕಡೆಗಳಲ್ಲಿ ಮರಗಳು ನೆಲಕಚ್ಚಿವೆ. ಈ ಭಾಗದಲ್ಲಿ ಕೆಲವೆಡೆ ಚರಂಡಿಗಳು ತುಂಬಿ  ಮನೆಗಳಿಗೆ ನೀರು ನುಗ್ಗಿದವು. 

ರಾಜೀವ್‍ನಗರ, ಬಸವೇಶ್ವರ ಬಡಾವಣೆ, ಎಸ್‍.ಎಲ್. ಚೌಕಿ, ರಾಮಾಟಾಕೀಸ್ ಹಿಂದುಗಡೆ, ಮೇನ್ಚ ಬಜಾರ್‌ಗಳಲ್ಲಿ  ಮರಗಳು ನೆಲಕ್ಕುರುಳಿದ್ದರಿಂದ ಸಣ್ಣಪುಟ್ಟ ತೊಂದರೆ ಸೇರಿದಂತೆ ಸ್ಪಲ್ಪ ಮಟ್ಟಿನ ಹಾನಿಯಾಯಿತು. ಹೀಗಾಗಿ ನಗರದ ಹಲವು ಕಡೆಗಳಲ್ಲಿ ರಾತ್ರಿ ಇಡೀ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.

ನಗರಸಭೆ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ, ಚರಂಡಿ ದುರಸ್ತಿಯಂತಹ ಕೆಲಸವನ್ನು ಮಾಡಿ ಜನರಿಗೆ ಎದುರಾಗಿದ್ದ ತೊಂದರೆ ನಿವಾರಿಸಿದ್ದಾರೆ ಎಂದು ಆಯುಕ್ತ ಚಂದ್ರಪ್ಪ ತಿಳಿಸಿದರು.

ಶಾಸಕರ ಭೇಟಿ

ಶಾಸಕ ಎಚ್.ಆರ್.ಗವಿಯಪ್ಪ ಅವರು ಭಾನುವಾರ ಹೊಸೂರು, ಬಸವನದುರ್ಗ, ಹಾನಗಲ್ಲ್, ಇಪ್ಪತೇರಿ, ಕರೆಕಲ್ಲ್, ನರಸಾಪುರ ಕಡೆಗಳಿಗೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದರು. ಅವರ ಜತೆಗೆ ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳೂ ಇದ್ದರು.

ಕಟಾವಿಗೆ ಬಂದಿದ್ದ ಭತ್ತ ನಾಶ

‘ಇಪ್ಪಿತೇರಿ ಮಾಗಣಿ, ನರಸಾಪುರ ಸಹಿತ ಹಲವೆಡೆ ಕಾಲುವೆ ನೀರಿನಿಂದ ಭತ್ತ ಬೆಳೆಯಲಾಗಿತ್ತು. ಇನ್ನು ಹತ್ತು ದಿನದಲ್ಲಿ ಕಟಾವು ಮಾಡುವ ಹಂತಕ್ಕೆ ಬಂದಿದ್ದವು. ಆದರೆ ಶನಿವಾರ ಬೀಸಿದ ಬಲವಾದ ಗಾಳಿಗೆ ಭತ್ತರ ಪೈರುಗಳು ನೆಲಕಚ್ಚಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದ ಸ್ಥಿತಿ ಉಂಟಾಗಿದೆ. ಸರ್ಕಾರ ತಕ್ಷಣ ಪರಿಹಾರ ನೀಡಬೇಕು’ ಎಂದು ರೈತ ಮುಖಂಡ ಸಣ್ಣಕ್ಕಿ ರುದ್ರಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT