ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರಾಡುವ ಭಾಷೆ ದೈವ ಭಾಷೆ ಮಾಡಿದ್ದು ಶರಣರು’

ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಹೇಳಿಕೆ
Last Updated 14 ಮಾರ್ಚ್ 2023, 5:22 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಜನರಾಡುವ ಭಾಷೆಯನ್ನು ದೈವ ಭಾಷೆ ಮಾಡಿದವರು ಹನ್ನೆರಡನೇ ಶತಮಾನದ ಶರಣರು. ವಚನಗಳನ್ನು ಹೇಳುವುದರ ಮೂಲಕ, ಹಾಡುವುದರ ಮುಖೇನ ಅವುಗಳ ಅರ್ಥ ಉಣಬಡಿಸಿದರು’ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿನ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಜನಪದ ಗೀತ ಸಂಭ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಾದಿ ಶರಣರು ಸಮಾಜದ ಪ್ರತಿಯೊಂದರ ಬಗ್ಗೆ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಹೀಗಾಗಿಯೇ ಅವುಗಳು ಸದಾಕಾಲ ಪ್ರಸ್ತುತ ಎಂದರು.

ಸಹಜವಾಗಿ ಬಂದ ಮಾತುಗಳು ಅರ್ಥವಾಗದಿದ್ದರೂ ತಲೆದೂಗುವಂತೆ ಮಾಡುತ್ತವೆ. ಅದು ಜನಪದರಲ್ಲಿನ ಮಾಂತ್ರಿಕ ಶಕ್ತಿ. ಬೀಸುವವರು, ಕುಟ್ಟುವವರು, ಕಸ ಗೂಡಿಸುವವರು ವಚನಗಳನ್ನು ಬರೆದಿದ್ದಾರೆ. ಅವುಗಳೆಲ್ಲ ಅವರ ಅನುಭವದಿಂದ ರಚನೆಯಾಗಿದ್ದು. ಅವರಿಗೆ ಲೋಕ ಜ್ಞಾನ ಇತ್ತು. ಜನಪದ ಸಾಹಿತ್ಯದ ಒಂದೊಂದು ಪದಗಳ ಮೇಲೆ ಇಂದು ಪಿಎಚ್‌.ಡಿ. ಸಂಶೋಧನೆಗಳಾಗುತ್ತಿವೆ. ಅದರ ಮಹತ್ವ ಇದರಿಂದ ಅರಿಯಬಹುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಧಾರವಾಡದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಶ್ರೀಶೈಲ ಹುದ್ದಾರ ಹಾಗೂ ತಂಡದವರು ಗಂಟೆಗೂ ಹೆಚ್ಚು ಕಾಲ ಜನಪದ ಗೀತ ಸಂಭ್ರಮ ಕಾರ್ಯಕ್ರಮ ನಡೆಸಿಕೊಟ್ಟರು. ಅನಂತರ ಭಕ್ತರು ಸಾಮೂಹಿಕವಾಗಿ ದೀಪ ಬೆಳಗಿಸಿದರು.

ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಂಪಸಾಗರದ ಶಿವಲಿಂಗರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ದರೂರಿನ ಕೊಟ್ಟೂರು ಸ್ವಾಮೀಜಿ, ಕುರುಗೋಡು–ನಾಗಲಾಪುರದ ನಿರಂಜನಪ್ರಭು ದೇವರು, ಸೋಮಸಮುದ್ರದ ಸಿದ್ಧಲಿಂದ ದೇವರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇವರು, ಬೂದಗುಂಪದ ಸಿದ್ದೇಶ್ವರ ದೇವರು, ಶಿವಯೋಗ ಮಂದಿರದ ವಿಶ್ವೇಶ್ವರ ದೇವರು, ಮುಖಂಡರಾದ ರಾಜಶೇಖರ್‌ ಹಿಟ್ನಾಳ್‌, ವಿಶ್ವನಾಥ ಚ. ಹಿರೇಮಠ, ಬಿ.ಎಂ. ಸೋಮಶೇಖರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT