ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ: ಸೋತವರಿಗೆ ಮಣೆ, ನಿಷ್ಠರಿಗೆ ಸಿಗದ ಮನ್ನಣೆ

ವಿಜಯನಗರ ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಹಲವು ಕಾರಣ
Published 7 ಜೂನ್ 2024, 6:45 IST
Last Updated 7 ಜೂನ್ 2024, 6:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದ್ದು, ಕಾಂಗ್ರೆಸ್‌ ಗೆದ್ದು ಬೀಗಿದೆ. ಕ್ಷೇತ್ರದ ಭಾಗವಾಗಿರುವ ವಿಜಯನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣ ಏನು ಎಂಬ ಬಗ್ಗೆ ಅತ್ಮವಿಮರ್ಶೆ ಪಕ್ಷದ ವಲಯದಲ್ಲಿ ಆರಂಭವಾಗಿದೆ.

ಹಲವೆಡೆ ಹೊಸ ಮುಖಗಳಿಗೆ ಅವಕಾಶ ಕೊಟ್ಟ ಪಕ್ಷದ ವರಿಷ್ಠರು ಬಳ್ಳಾರಿ ಕ್ಷೇತ್ರದಲ್ಲಿ ಹಳೆಯ ಮುಖಕ್ಕೆ ಆದ್ಯತೆ ನೀಡಿ ಬಿ.ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಿದರು. ಪಕ್ಷದ ಮಾಡಿದ ಮೊದಲ ತಪ್ಪು ಇದೇ ಆಗಿರಬಹುದು ಎಂದು ಪಕ್ಷದ ಕೆಲವು ಮುಖಂಡರು ಹೇಳುತ್ತಿದ್ದಾರೆ.

‘ಬಳ್ಳಾರಿ ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ಬಿಟ್ಟರೆ ಪ್ರಭಾವಿ ನಾಯಕರು ಇರಲಿಲ್ಲ. ಈ ಹಿಂದೆ ಅವರು ಸಂಸದರಾಗಿದ್ದವರು, ಸಚಿವರಾಗಿದ್ದವರು. ಎರಡೂ ಜಿಲ್ಲೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅವರ ಮೇಲೆ ಮತ್ತೊಮ್ಮೆ ಭರವಸೆ ಇಟ್ಟು ಟಿಕೆಟ್ ನೀಡಲಾಗಿತ್ತು’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್‌ಎಸ್‌ಎಸ್‌ ಸಕ್ರಿಯ ಇರಲಿಲ್ಲ?: ಪ್ರತಿ ಬಾರಿ ಆರ್‌ಎಸ್‌ಎಸ್ ನೇರವಾಗಿ ಆಗಲ್ಲದಿದ್ದರೂ ತನ್ನದೇ ಆದ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿತ್ತು. ಈ ಬಾರಿ ಅಂತಹ  ಯಾವ ಬೆಳವಣಿಗೆಯೂ ಆಗಲಿಲ್ಲ. ಕೇವಲ ಮನೆಗಳಲ್ಲಿ ಬೈಠಕ್‌ ಮಾಡುವುದಕ್ಕಷ್ಟೇ ಅವರ ಪ್ರಚಾರ ಸೀಮಿತವಾಗಿಬಿಟ್ಟಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಸೋತವರಿಗೆ ಮಣೆ: ‘ಪಕ್ಷದಲ್ಲಿ ಸೋತ ನಾಯಕರಿಗೆ ಮಣೆ ಹಾಕಿ, ಅವರಿಗೆ ಕೆಲವೊಂದು ಪ್ರದೇಶಗಳಲ್ಲಿ ಪ್ರಚಾರದ, ಗೆಲ್ಲಿಸುವ ಹೊಣೆಗಾರಿಕೆ ನೀಡಲಾಯಿತು. ಆದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು, ನಿಜವಾಗಿಯೂ ಮನೆ ಮನೆಗೆ ಹೋಗಿ ಕೆಲಸ ಮಾಡುವಂತಹ  ಉತ್ಸಾಹಿಗಳನ್ನು ಕಡೆಗಣಿಸಲಾಯಿತು ಎಂದು ಇನ್ನೊಬ್ಬ ಮುಖಂಡ ಅಬಿಪ್ರಾಯಪಟ್ಟರು.

ಅನಂತಕುಮಾರ್ ಮಾತು ತಂದ ಕೇಡು: ಚುನಾವಣೆಯ ವರೆಗೆ ಸುಮ್ಮನಿದ್ದ ಕೆನರಾ ಸಂಸದ ಅನಂತಕುಮಾರ್‌ ಹೆಗಡೆ, ಚುನಾವಣೆ ಹೊಸ್ತಿಲಲ್ಲಿ ಮತ್ತೆ ತಮ್ಮ ಇರುವಿಕೆಯನ್ನು ತೋರಿಸಿಬಿಟ್ಟಿದ್ದರು. ಹಂಪಿ, ಅಂಜನಾದ್ರಿಗಳಿಗೂ ಭೇಟಿ ನೀಡಿದ್ದರು. ಆ ಬಳಿಕ ಅವರು ‘ಕೇಂದ್ರದಲ್ಲಿ ಮತ್ತೆ ಬಿಜೆಪಿ 400 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಾಗುವುದು’ ಎಂಬ ಹೇಳಿಕೆ ನೀಡಿದ್ದರು. ಇದು ರಾಜ್ಯ  ಮಾತ್ರವಲ್ಲ, ದೇಶದೆಲ್ಲೆಡೆ ಭಾರಿ ಸಂಚಲನ ಮೂಡಿಸಿದ್ದಲ್ಲದೆ, ವಿರೋಧ ಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು. ಇದರ ಪ್ರಭಾವ ಜಿಲ್ಲೆಯಲ್ಲೂ ಆಗಿದೆ ಎಂದು ಹೆಸರು ಹೇಳಲು ಬಯಸದ ನಾಯಕರೊಬ್ಬರು ಹೇಳಿದರು.

‘ಹಿಂದುತ್ವ ಕಾರ್ಯಸೂಚಿ ಒಪ್ಪುವುದಿಲ್ಲ’

‘ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಸ್ವತಃ ಹಿಂದೂಗಳೇ ಒಪ್ಪುವುದಿಲ್ಲ ಎಂಬುದು ಈ ಬಾರಿಯ ಚುನಾವಣೆಯಿಂದ ಸಾಬೀತಾಗಿದೆ.  ಇದಕ್ಕೆ ಅಯೋಧ್ಯೆಯಲ್ಲಿ  ಬಿಜೆಪಿ ಅಭ್ಯರ್ಥಿ ಸೋತದ್ದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ. ನಮ್ಮ ಕ್ಷೇತ್ರದಲ್ಲೂ ಅಂತಹದೇ ಚಿತ್ರಣ ಇತ್ತು. ಮೋದಿ ಅಲೆಯೇ ಜಿಲ್ಲೆಯಲ್ಲಿ ಇರಲಿಲ್ಲ. ರೈತರಿಗೆ ಅಗತ್ಯವಾದ ರಸಗೊಬ್ಬರ ಬೆಲೆ ಏರಿಕೆ ಆಗಿದ್ದರ ಪರಿಣಾಮವೂ ಫಲಿತಾಂಶದಲ್ಲಿ ಪ್ರತಿಫಲಿಸಿದೆ. ಗ್ಯಾರಂಟಿ ಯೋಜನೆಗಳ ಪ್ರಭಾವವಂತೂ ದೊಡ್ಡದಾಗಿಯೇ ಇದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ನಿಂಬಗಲ್‌ ಅಭಿಪ್ರಾಯಪಟ್ಟರು.

‘ಮನೆಗೆ ತೆರಳಿ ಪ್ರಚಾರವನ್ನೇ ಮಾಡಿಲ್ಲ’

‘ಮನೆ ಮನೆಗೆ ತೆರಳಿ ಪ್ರಚಾರ ಮಾಡಲಾಗಿದೆ ಎಂದು ಬಿಜೆಪಿಯ ಹಲವು ಪ್ರಮುಖರು ಹೇಳಿಕೊಂಡರು. ಆದರೆ ಅವರ ಹೇಳಿಕೆ ಮಾಧ್ಯಮ ವರದಿ/ ಫೋಟೊ ಪ್ರಕಟವಾಗುವ ಮಟ್ಟಿಗೆ ಮಾತ್ರ ಸೀಮಿತವಾಗಿತ್ತು. ಯಾರೂ ಮನೆ ಮನೆಗೆ ತೆರಳಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ ಎಂಬುದನ್ನೂ ಮನೆ ಮನೆಗೆ ತೆರಳಿ ತಿಳಿಸುವ ಕೆಲಸ ನಡೆಯಲಿಲ್ಲ. ಅಯೋಧ್ಯೆಯಿಂದ ಬಂದ ಅಕ್ಷತೆ ಪ್ರಸಾದವನ್ನು ಸಾಮೂಹಿಕವಾಗಿ ವಿತರಿಸುವ ಕೆಲಸವಷ್ಟೇ ನಡೆಯಿತು. ಇಂತಹ ಸಣ್ಣಪುಟ್ಟ ಅವಕಾಶವನ್ನು ಕೈಚೆಲ್ಲಿ ಗೆಲುವಿನ ಅವಕಾಶವನ್ನೂ ಬಿಜೆಪಿ ತಪ್ಪಿಸಿಕೊಂಡಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT