ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಕ್‌ ಟರ್ಮಿನಲ್: ಸ್ಥಳೀಯರಿಗೂ ಸ್ಥಳ

ಟೆಂಡರ್‌ನಲ್ಲಿ ಪಾಲ್ಗೊಂಡು ಅವಕಾಶ ಪಡೆಯಲು ಗವಿಯಪ್ಪ ಸೂಚನೆ
Published 29 ಆಗಸ್ಟ್ 2024, 14:30 IST
Last Updated 29 ಆಗಸ್ಟ್ 2024, 14:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ನಲ್ಲಿ ಸ್ಥಳೀಯ ಲಾರಿ ತಂತ್ರಜ್ಞರು ಸಹ ಟೆಂಡರ್ ಹಾಕಿ ಅವಕಾಶ ಪಡೆಯಬೇಕು, ಅಲ್ಲಿ ಖಾಲಿ ಇರುವ 23 ಎಕರೆ ಸ್ಥಳವನ್ನು ತಾತ್ಕಾಲಿಕವಾಗಿ ಬಳಕೆಗೆ ಅನುಮತಿ ಪಡೆಯಲು ಯತ್ನಿಸಲಾಗುವುದು’ ಎಂದು ಶಾಸಕ ಎಚ್‌.ಆರ್‌. ಗವಿಯಪ್ಪ ಹೇಳಿದರು.

ಅವರು ಗುರುವಾರ ಇಲ್ಲಿ ವಿಜಯನಗರ ಮೆಕ್ಯಾನಿಕ್ಸ್ ಟೆಕ್ನಿಶಿಯನ್‌ ವೆಲ್‌ಫೇರ್‌ ಅಸೋಸಿಯೇಷನ್‌ನ ಮೊದಲ ವಾರ್ಷಿಕೋತ್ಸವ ಹಾಗೂ ಮೆಕ್ಯಾನಿಕ್ ಪರಿವಾರ ಸುರಕ್ಷತಾ ಬಾಂಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜಂಬುನಾಥ ಹಳ್ಳಿಯಲ್ಲಿನ 50 ಎಕರೆ ನಿವೇಶನದಲ್ಲಿ ಜಿ+2 ವಸತಿ ಗೃಹಗಳನ್ನು ನಿರ್ಮಿಸುವ ಯೋಜನೆ ಇದೆ, ಅದರಲ್ಲಿ ಮೆಕ್ಯಾನಿಕ್‌ಗಳಿಗೂ ಅವಕಾಶ ನೀಡಲಾಗುವುದು. ಐದಾರು ತಿಂಗಳೊಳಗೆ ತೋರಣಗಲ್‌ವರೆಗಿನ ಹೆದ್ದಾರಿ ಕಾಮಗಾರಿ ಕೊನೆಗೊಳ್ಳಲಿದ್ದು, ಬಳಿಕ ಸಾವಿರಾರು ಗಣಿಗಾರಿಕೆ ಟ್ರಕ್‌ಗಳು, ಟಿಪ್ಪರ್‌ಗಳು ಹೊಸಪೇಟೆ ಮೂಲಕವೇ ಸಂಚರಿಸಲಿವೆ. ಮೆಕ್ಯಾನಿಕ್‌ಗಳಿಗೆ ಮತ್ತೆ ಕೈತುಂಬ ಕೆಲಸ ಸಿಗಲಿದೆ. ಹಾಗಿದ್ದರೂ ಟ್ರಕ್‌ ಟರ್ಮಿನಲ್‌ನಲ್ಲಿ ಸ್ಥಳೀಯರಿಗೇ ಅವಕಾಶ ಸಿಗಬೇಕಿದ್ದು, ಈಗ ಎಷ್ಟೇ ಕಷ್ಟವಾದರೂ ಟೆಂಡರ್‌ನಲ್ಲಿ ಪಾಲ್ಗೊಂಡು ಅವಕಾಶ ಗಿಟ್ಟಿಸಿಕೊಳ್ಳಬೇಕು’ ಎಂದು ಶಾಸಕರು ಸಲಹೆ ನೀಡಿದರು.

‘ಹೊಸಪೇಟೆ ಸುತ್ತಮುತ್ತಲೂ ಸ್ಟೀಲ್‌ ಪಾರ್ಕ್‌ ಅಭಿವೃದ್ಧಿ ಹೊಂದುವ ಅಗತ್ಯ ಇದೆ. ಸದ್ಯ ಇಲ್ಲಿ 2–3 ಸ್ಟೀಲ್ ಕಂಪನಿಗಳಷ್ಟೇ ಇವೆ. ಬಳ್ಳಾರಿ, ಕೊಪ್ಪಳದಲ್ಲಿ ಇಂತಹ ಸ್ಟೀಲ್‌ ಪಾರ್ಕ್‌ಗಳಿಂದ ಬಹಳಷ್ಟು ಉದ್ಯೋಗ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲೂ ಪ್ರಯತ್ನ ನಡೆಯಲಿದೆ’ ಎಂದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್. ಮಣಿ, ‘ಹೆದ್ದಾರಿ ಟೋಲ್‌ಗಳ ಬಳಿ ಹಳೆಯ ಕಾಲದ, ಕೇವಲ 30 ಟನ್‌ ಸಾಮರ್ಥ್ಯದ ಕ್ರೇನ್ ಗಳನ್ನು ಅಗತ್ಯಕ್ಕೆ ಇಟ್ಟಿರುತ್ತಾರೆ. ಅಲ್ಲಿ 100 ಟನ್ ಸಾಮರ್ಥ್ಯದ ಕ್ರೇನ್‌ಗಳು ಸಜ್ಜಾಗಿ ಇರಬೇಕು, ಬ್ಯಾಂಕ್‌ ಸಾಲಕ್ಕಾಗಿ ಬೇರೆಡೆ ವಾಹನ ಮುಟ್ಟುಗೋಲು ಹಾಕುವುದನ್ನು ನಿಲ್ಲಿಸಬೇಕು’ ಎಂಬ ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು.

ಇದೇ ವೇಳೆ ಅಂಚೆ ಇಲಾಖೆ ಸಹಯೋಗದೊಂದಿಗೆ ಲಾರಿ ಚಾಲಕರು, ಮೆಕ್ಯಾನಿಕ್‌ಗಳಿಗೆ ನೀಡಲಾದ ಮೆಕ್ಯಾನಿಕ್‌ ಪರಿವಾರ ಸುರಕ್ಷಾ ಬಾಂಡ್‌ಗಳನ್ನು ಹಸ್ತಾಂತರಿಸಲಾಯಿತು.

ಆರ್‌ಟಿಒ ವಸಂತ ಚವಾಣ್‌, ಬಳ್ಳಾರಿ ಅಂಚೆ ವಿಭಾಗದ ಚಿದಾನಂದ, ಮೆಕ್ಯಾನಿಕ್ ಸಂಘದ ಅಬುಜಾರ್, ಮುಖಂಡರಾದ ಸಂಗೀತಾ ಸಿಂಗ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT