ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ರಂಗಿನಾಟಕ್ಕೆ ನಿರ್ಬಂಧ: ಬರದ ವಿದೇಶಿ ಪ್ರವಾಸಿಗರು

ಹಂಪಿಯಲ್ಲಿಲ್ಲ ಹೋಳಿ ಸಂಭ್ರಮ; ಬರದ ವಿದೇಶಿ ಪ್ರವಾಸಿಗರು
Last Updated 28 ಮಾರ್ಚ್ 2021, 11:52 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ವರ್ಷ ಹೋಳಿ ಹಬ್ಬದ ಸಾಮೂಹಿಕ ರಂಗಿನಾಟದ ಮೇಲೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಪ್ರಮುಖ ರಸ್ತೆ, ವೃತ್ತ, ಮೈದಾನ ಹಾಗೂ ಉದ್ಯಾನಗಳಲ್ಲಿ ಸಾರ್ವಜನಿಕರು ಗುಂಪುಗೂಡಿ ಬಣ್ಣದಾಟ ಆಡುವುದರ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಒಂದುವೇಳೆ ಯಾರಾದರೂ ಕಾನೂನು ಮೀರಿ ರಂಗಿನಾಟ ಆಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ.

ಈ ಸಂಬಂಧ ಪೊಲೀಸ್‌ ಇಲಾಖೆಯು ಹೋಳಿ ಹಬ್ಬದ ನಿಮಿತ್ತ ಆಡುವ ರಂಗಿನಾಟದ ಮುನ್ನ ದಿನವಾದ ಭಾನುವಾರ ಧ್ವನಿವರ್ಧಕಗಳ ಮೂಲಕ ನಗರದಲ್ಲಿ ಪ್ರಚಾರ ಕೈಗೊಂಡಿತು. ‘ಹೋಳಿ ಹಬ್ಬ ಸೇರಿದಂತೆ ಮುಂಬರುವ ಎಲ್ಲ ಹಬ್ಬ ಹರಿದಿನಗಳನ್ನು ಮನೆಗಳಲ್ಲಿಯೇ ಆಚರಿಸಬೇಕು. ಯಾರು ಕೂಡ ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಿ ರಂಗಿನಾಟ ಆಡಬಾರದು’ ಎಂದು ಎಚ್ಚರಿಸಿದರು.

ಹಬ್ಬಕ್ಕೆ ಎರಡ್ಮೂರು ದಿನಗಳ ಮೊದಲೇ ವಿವಿಧ ಬಗೆಯ ರಂಗು, ಪಿಚಕಾರಿಗಳ ಮಾರಾಟ ನಗರದಲ್ಲಿ ಜೋರಾಗಿ ನಡೆಯುತ್ತಿತ್ತು. ಮಳಿಗೆಗಳ ಎದುರು ಬಣ್ಣಗಳನ್ನು ಮಾರಾಟಕ್ಕೆ ಇಡಲಾಗುತ್ತಿತ್ತು. ಆದರೆ, ಈ ಸಲ ನಗರದಲ್ಲಿ ಅಂತಹ ದೃಶ್ಯ ಕಂಡು ಬರಲಿಲ್ಲ. ಕೆಲ ಮಳಿಗೆಗಳಲ್ಲಿ ಗ್ರಾಹಕರು ಕೇಳಿದರಷ್ಟೇ ಬಣ್ಣ ಕೊಡುತ್ತಿದ್ದರು.

ಹಂಪಿಯಲ್ಲೂ ಇಲ್ಲ ಸಂಭ್ರಮ:

ಈ ವರ್ಷ ಹಂಪಿಯಲ್ಲೂ ಹೋಳಿ ಸಂಭ್ರಮ ಇಲ್ಲ. ಕೋವಿಡ್‌ ಲಾಕ್‌ಡೌನ್‌ನಿಂದ ಕೆಲ ತಿಂಗಳ ಹಿಂದೆಯಷ್ಟೇ ಅಲ್ಲಿನ ಮಳಿಗೆ, ಹೋಟೆಲ್‌ಗಳು ಬಾಗಿಲು ತೆರೆದಿದ್ದವು. ಇನ್ನೂ ನ್ಯಾಯಾಲಯದಲ್ಲಿ, ಜನತಾ ಪ್ಲಾಟ್‌ನಲ್ಲಿರುವವರನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಅದನ್ನು ಪ್ರತಿಭಟಿಸಿ ಅಲ್ಲಿನವರು ಎಲ್ಲ ರೀತಿಯ ವಹಿವಾಟು ಸ್ಥಗಿತಗೊಳಿಸಿದ್ದಾರೆ.

ನೆರೆ ಜಿಲ್ಲೆ, ನೆರೆ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದರಿಂದ ಪ್ರವಾಸೋದ್ಯಮ ಚೇತರಿಕೆಯ ಹಾದಿಯಲ್ಲಿತ್ತು. ಈಗ ಬಿಸಿಲು ಹೆಚ್ಚಿರುವುದು, ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದರಿಂದ ಪುನಃ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಜನರ ಓಡಾಟವಿಲ್ಲದ ಕಾರಣ ಹಂಪಿ ಪರಿಸರ ಬಿಕೋ ಎನ್ನುತ್ತಿದೆ.

ಇನ್ನು, ಹೋಳಿ ಹಬ್ಬದ ರಂಗಿನಾಟ ಆಡಲೆಂದೆ ವಿವಿಧ ದೇಶಗಳ ಪ್ರವಾಸಿಗರು ಹಂಪಿಗೆ ಬರುತ್ತಿದ್ದರು. ಅವರೊಂದಿಗೆ ಸ್ಥಳೀಯರು ಜತೆಯಾಗಿ ಬಣ್ಣದಾಟ ಆಡುತ್ತಿದ್ದರು. ಆದರೆ, ಈ ವರ್ಷ ಕೋವಿಡ್‌ನಿಂದ ಯಾರೊಬ್ಬರೂ ಬಂದಿಲ್ಲ. ಸಾಮೂಹಿಕವಾಗಿ ಗುಂಪುಗೂಡಿ ರಂಗಿನಾಟ ಆಡುವುದರ ಮೇಲೆ ನಿರ್ಬಂಧ ಹೇರಿರುವುದರಿಂದ ಸೋಮವಾರ (ಮಾ.29) ಹೋಳಿ ಸಂಭ್ರಮ ಕಂಡು ಬರುವ ಸಾಧ್ಯತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT