ಶುಕ್ರವಾರ, ಆಗಸ್ಟ್ 12, 2022
23 °C
32 ಫಲಾನುಭವಿಗಳಿಗೆ ಸಾಗುವಳಿ ಪಟ್ಟಾ, 44 ಸಂಘಗಳಿಗೆ ತಲಾ ₹1 ಲಕ್ಷ

ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ: ಆನಂದ್‌ ಸಿಂಗ್‌​​​​​​​

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): 32 ಫಲಾನುಭವಿಗಳಿಗೆ ಸಾಗುವಳಿ ಪಟ್ಟಾ ಹಾಗೂ 44 ಮಹಿಳಾ ಸ್ವಸಹಾಯ ಸಂಘಗಳಿಗೆ ತಲಾ ₹1 ಲಕ್ಷ ಚೆಕ್‌ ಅನ್ನು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಿದರು.

1956ರ ಕಾಯ್ದೆ ಅಡಿ ಇನಾಂ ಜಮೀನು ಪಡೆದವರಿಗೆ ಸಾಗುವಳಿ ಪಟ್ಟಾ ಅನ್ನು ಕಂದಾಯ ಇಲಾಖೆಯಿಂದ ವಿತರಿಸಲಾಯಿತು. 10 ವರ್ಷ ಪೂರೈಸಿದ ಸ್ವಸಹಾಯ ಸಂಘಗಳಿಗೆ ಕಿರು ಉದ್ಯಮ ನಡೆಸಲು ₹1 ಲಕ್ಷ ಬೀಜಧನ ನೆರವಿನ ಚೆಕ್‌ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿತರಿಸಲಾಯಿತು.

‘ನಾನು ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷನಾಗಿದ್ದು, ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ಕೊಡುವ ಯೋಚನೆ ಇದೆ. ಹೆಚ್ಚಿನ ಸ್ವಸಹಾಯ ಸಂಘಗಳು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿವೆ. ಮಹಿಳೆಯರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ’ ಎಂದು ಆನಂದ್‌ ಸಿಂಗ್‌ ಹೇಳಿದರು.

‘ಸರ್ಕಾರ ಸದ್ಯ ಮಹಿಳಾ ಸ್ವಸಹಾಯ ಸಂಘಗಳಿಗೆ ₹ 1 ಲಕ್ಷ ಕೊಡುತ್ತಿದೆ. ನಾನು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಈ ಮೊತ್ತ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ತಿಳಿಸಿದ್ದೇವೆ. ಬಗರ್‌ ಹುಕುಂ ಸಾಗುವಳಿ ಮಾಡುವವರಿಗೆ ಜಮೀನು ಕೊಡುವ ಕೆಲಸ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಸಾಗುವಳಿ ಮಾಡುತ್ತಿದ್ದ ರೈತರಿಗೆ ಒಕ್ಕಲೇಳುವ ಆತಂಕವಿತ್ತು. ಅಧಿಕಾರಿಗಳು ಬಂದು ಯಾವಾಗ ತಮ್ಮನ್ನು ಜಮೀನಿನಿಂದ ದೂರ ಕಳಿಸುತ್ತಾರೆ ಎಂಬ ಭಯದಲ್ಲೇ ಉಳುಮೆ ಮಾಡುತ್ತಿದ್ದರು. ಆದರೆ, ನಮ್ಮ ಸರ್ಕಾರ ಅಂತಹವರ ನೆರವಿಗೆ ಬಂದಿದೆ. ಇದುವರೆಗೆ ತಾಲ್ಲೂಕಿನ 69 ರೈತರಿಗೆ 135 ಎಕರೆ ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಬಗರ್‌ ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಅರ್ಜಿ ಸಲ್ಲಿಸಿ ಪಟ್ಟಾ ಪಡೆಯಲು ಸರ್ಕಾರವು 2023ರ ಜನವರಿ ವರೆಗೆ ಕಾಲಾವಕಾಶ ವಿಸ್ತರಿಸಿದೆ. ಹೆಚ್ಚಿನವರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳು ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಕುರಿತು ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಬೇಕು. ಇನಾಂ ಜಮೀನು ಸಿಕ್ಕ ನಂತರ ಏನೆಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದರೆ ಆ ಜಮೀನಿಗೆ ಅವರು ಒಡೆಯರಾಗುತ್ತಾರೆ ಎನ್ನುವುದನ್ನು ತಿಳಿಸಬೇಕು’ ಎಂದು ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೀರನಗೌಡ, ಹುಡಾ ಅಧ್ಯಕ್ಷ ಅಶೋಕ ಜೀರೆ, ಬಗರ್‌ ಹುಕುಂ ಸಮಿತಿ ಸದಸ್ಯರಾದ ಭರಮನಗೌಡ, ನಾಗರಾಜ ನಾಯ್ಕ, ತಾಲ್ಲೂಕು ಸ್ವಸಹಾಯ ಗುಂಪಿನ ಅಧ್ಯಕ್ಷೆ ಜಯಪದ್ಮಾ, ಸಿಡಿಪಿಒ ಸಿಂಧು ಯಲಿಗಾರ್‌ ಇದ್ದರು.

ಆಯಾ ತಪ್ಪಿ ಬಿದ್ದ ಮಹಿಳೆ
ಗುಂಡಮ್ಮ ಸ್ವಸಹಾಯ ಸಂಘದವರಿಗೆ ಸಚಿವ ಆನಂದ್‌ ಸಿಂಗ್‌ ಅವರು ವೇದಿಕೆಯ ಮೇಲೆ ಚೆಕ್‌ ವಿತರಿಸುವಾಗ ಬುಕ್ಕಸಾಗರದ ಹಂಪಮ್ಮ ಎಂಬುವರು ಆಯಾತಪ್ಪಿ ಕೆಳಗೆ ಬಿದ್ದರು.

ಇದನ್ನು ಗಮನಿಸಿದ ಆನಂದ್‌ ಸಿಂಗ್‌ ವೇದಿಕೆಯಿಂದ ಕೆಳಗಿಳಿದು ಮಹಿಳೆಯ ಕೈಹಿಡಿದು ಮೇಲೆ ಕೂರಿಸಿ, ಕುಡಿಯಲು ನೀರು ಕೊಟ್ಟು ಉಪಚರಿಸಿದರು. ತಲೆ ಮತ್ತು ಕಾಲಿಗೆ ಗಾಯವಾಗಿದ್ದರಿಂದ ಆಂಬುಲೆನ್ಸ್‌ ವ್ಯವಸ್ಥೆ ಮಾಡಿ, ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಘಟನೆಯಿಂದಾಗಿ ಕಾರ್ಯಕ್ರಮ ಕೆಲಕಾಲ ನಿಂತಿತ್ತು.

*

ತಹಶೀಲ್ದಾರ್‌ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಚೇಂಬರ್‌ ಬಿಟ್ಟು ಹೊರಗೆ ಹೋಗಬೇಕು. ಜನರ ಸಮಸ್ಯೆ ಅರಿತು ಕೆಲಸ ಮಾಡಬೇಕು.
–ಆನಂದ್‌ ಸಿಂಗ್, ಪ್ರವಾಸೋದ್ಯಮ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು