ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರು ಉದ್ಯಮಿಯಾಗಿ, ಉದ್ಯೋಗ ಕೊಡಬೇಕು: ಎಸ್‌ಬಿಐ ಡಿಜಿಎಂ ಪ್ರದೀಪ್‌ ನಾಯರ್‌

ಎರಡು ದಿನಗಳ ಎಂಎಸ್‌ಎಂಇ ಸಮಾವೇಶ
Last Updated 20 ಜನವರಿ 2023, 8:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಭಾರತೀಯ ಚಾರ್ಟರ್ಡ್‌ ಅಕೌಂಟೆಂಟ್‌ ಸಂಸ್ಥೆ ದಕ್ಷಿಣ ಭಾರತ ಪ್ರಾಂತೀಯ ಶಾಖೆಗಳಾದ ಬಳ್ಳಾರಿ, ಬೆಳಗಾವಿ ಹಾಗೂ ಹುಬ್ಬಳ್ಳಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಮಾವೇಶ–2023ಕ್ಕೆ ಶುಕ್ರವಾರ ನಗರದ ಮಲ್ಲಿಗಿ ಹೋಟೆಲ್‌ನಲ್ಲಿ ಚಾಲನೆ ನೀಡಲಾಯಿತು.

ಸಮಾವೇಶ ಉದ್ಘಾಟಿಸಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಪ್ರದೀಪ್‌ ನಾಯರ್‌ ಮಾತನಾಡಿ, ದೇಶದ ಯುವಕರು ನೌಕರಿಗಾಗಿ ಹುಡುಕಾಟ ನಡೆಸದೇ ಸ್ವಂತ ಉದ್ದಿಮೆ ಆರಂಭಿಸಿ ನೂರಾರು ಜನರಿಗೆ ಉದ್ಯೋಗ ಕೊಡುವಂತಾಗಬೇಕು. ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಕೆಲವೇ ವರ್ಷಗಳಲ್ಲಿ ಜರ್ಮನಿ, ಜಪಾನ್‌ ದೇಶಗಳನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಬರಲಿದೆ. ಬರಲಿರುವ ವರ್ಷಗಳಲ್ಲಿ ಸಾಕಷ್ಟು ಅವಕಾಶಗಳು ಒದಗಿ ಬರಲಿದ್ದು, ಅವುಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಉದ್ದಿಮೆ ಆರಂಭಿಸಲು ಈಗ ಸಕಾಲ. 2047ರಲ್ಲಿ ಭಾರತದ ಜಿಡಿಪಿ ಹತ್ತು ಪಟ್ಟು ಹೆಚ್ಚಾಗಲಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ನಮ್ಮದು. ಆದರೆ, ಅದು ಸಂತೋಷದ ಸಂಗತಿಯೇನಲ್ಲ. ಆರ್ಥಿಕತೆಯಲ್ಲಿ ಮೊದಲ ಸ್ಥಾನಕ್ಕೆ ಬರಬೇಕು. ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಸರ್ಕಾರ ಎಂಎಸ್‌ಎಂಇ ಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ.
ರಿಲಯನ್ಸ್‌, ಟಾಟಾದಂತಹ ದೊಡ್ಡ ಕಂಪನಿಗಳಿವೆ. ಅವುಗಳ ವ್ಯವಹಾರವೂ ಹೆಚ್ಚಿದೆ. ಆದರೆ, ಎಂಎಸ್‌ಎಂಇಗಳಷ್ಟು ಉದ್ಯೋಗ ಸೃಷ್ಟಿಸಲು ಅವುಗಳಿಂದ ಆಗುವುದಿಲ್ಲ ಎಂದರು.

ಎಂಎಸ್‌ಎಂಇಗಳಿಂದ ಸಂಪತ್ತು ಸೃಷ್ಟಿಸುವ ಕೆಲಸವಾಗಬೇಕಿದೆ. ಆದರೆ, ಅದು ಮಹಾನಗರಗಳಿಗೆ ಸೀಮಿತವಾಗಬಾರದು. ಪ್ರತಿಯೊಂದು ಸಣ್ಣ ನಗರಗಳಲ್ಲಿ ಅವುಗಳು ತಲೆ ಎತ್ತಬೇಕು. ಎಂಎಸ್‌ಎಂಇಗಳು ಬೆಳೆದರೆ ಬ್ಯಾಂಕುಗಳ ವಹಿವಾಟು ಕೂಡ ಹೆಚ್ಚಾಗುತ್ತದೆ. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಪ್ರಯೋಜನ ಪಡೆಯಬೇಕು.
ಮುದ್ರಾ ಯೋಜನೆಯಡಿ ₹10 ಲಕ್ಷದ ವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಸಾಲ ಕೊಡಲಾಗುತ್ತದೆ. ಎಷ್ಟೇ ಸಾಲ ಬೇಕಿದ್ದರೂ ಬ್ಯಾಂಕುಗಳು ಕೊಡಲು ಸಿದ್ಧ ಇವೆ ಎಂದು ತಿಳಿಸಿದರು.

ಭಾರತೀಯ ಚಾರ್ಟರ್ಡ್‌ ಅಕೌಂಟೆಂಟ್‌ ಸಂಸ್ಥೆ ದಕ್ಷಿಣ ಭಾರತ ಪ್ರಾಂತೀಯ ಬಳ್ಳಾರಿ ಶಾಖೆ ಸದಸ್ಯ ಪನ್ನರಾಜು ಎಸ್‌. ಮಾತನಾಡಿ, ದೇಶದ ಒಟ್ಟು ಜಿಎಸ್‌ಟಿಯಲ್ಲಿ ಪರೋಕ್ಷ ಹಾಗೂ ಅಪರೋಕ್ಷವಾಗಿ ಬಡವರು ಹಾಗೂ ಮಧ್ಯಮ ವರ್ಗದವರ ಪಾಲು ಶೇ 63ರಷ್ಟಿದೆ. ತೆರಿಗೆ ನೀತಿ ಸರಿಯಿಲ್ಲದ ಕಾರಣ ಹೀಗಾಗುತ್ತಿದೆ. ಸಮಗ್ರ ಅಭಿವೃದ್ಧಿಯ ಅಗತ್ಯವಿದೆ. ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾಲುದಾರಿಕೆ ಇರಬೇಕು ಎಂದು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಅಶ್ವಿನ್‌ ಕೋತಂಬರಿ ಮಾತನಾಡಿ, ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪ ಹೊಸ ಕೈಗಾರಿಕೆ ಪ್ರದೇಶ ಸ್ಥಾಪನೆಗೆ 50 ಎಕರೆ ಜಾಗ ಮಂಜೂರಾಗಿದೆ. ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ ಎಂದರು.
‘ಅಟಲ್‌ ಇನ್‌ಕ್ಯುಬೇಷನ್‌’ ಸಿಇಒ ಎ.ಪಿ. ಆಚಾರ, ಚಾರ್ಟರ್ಡ್‌ ಅಕೌಂಟೆಂಟ್‌ ಸಂಸ್ಥೆ ಮಂಗಳೂರು ಶಾಖೆಯ ಮಾಜಿ ಅಧ್ಯಕ್ಷ ಎಸ್‌.ಎಸ್‌. ನಾಯಕ, ಬಳ್ಳಾರಿ ಶಾಖೆಯ ಅಧ್ಯಕ್ಷ ವಿನೋದ ಭಾಗರೇಚ, ಬೆಂಗಳೂರು ಶಾಖೆಯ ಅನಿಲ್‌ ಭಾರದ್ವಾಜ್‌, ಕಾರ್ಯದರ್ಶಿ ಗಜರಾಜ, ಖಜಾಂಚಿ ಪುರುಷೋತ್ತಮ್‌ ರೆಡ್ಡಿ, ಸದಸ್ಯರಾದ ಮಂಜುನಾಥ, ಮಹೇಂದ್ರ ಸೋನಿ, ಗವಿಸಿದ್ದಪ್ಪ ಹಿಟ್ನಾಳ್‌, ಅಜ ಸಾಬ್‌ ಇತರರಿದ್ದರು. ಚಾರ್ಟರ್ಡ್‌ ಅಕೌಂಟೆಂಟ್‌ಗಳು, ಎಂಬಿಎ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

‘ಶ್ರೀಮಂತರು–ಬಡವರ ನಡುವೆ ಅಂತರ ಸತತ ಹೆಚ್ಚಳ’
‘ಸೂಪರ್‌ ರಿಚ್‌’ ಇರುವ ಬಡವರ ದೇಶ ಭಾರತ. ದಿನೇ ದಿನೇ ಶ್ರೀಮಂತರು–ಬಡವರ ನಡುವೆ ಅಂತರ ಹೆಚ್ಚಾಗುತ್ತಲೇ ಇದೆ. ಎಂಎಸ್‌ಎಂಇಗಳಿಂದ ಈ ಅಂತರ ತಗ್ಗಿಸಬಹುದು. ದೇಶದ ಒಟ್ಟು ಜಿಡಿಪಿಯಲ್ಲಿ ಶೇ 40ರಷ್ಟು ಎಂಎಸ್‌ಎಂಇಗಳ ಪಾಲು ಇದೆ. ಅಲ್ಲದೇ ಶೇ 60ರಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ನವೋದ್ಯಮಿಗಳು, ಉದ್ಯಮಿಗಳು ಹಾಗೂ ಬ್ಯಾಂಕುಗಳ ನಡುವೆ ಚಾರ್ಟರ್ಡ್‌ ಅಕೌಂಟೆಂಟ್‌ಗಳು ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಭಾರತೀಯ ಚಾರ್ಟರ್ಡ್‌ ಅಕೌಂಟೆಂಟ್‌ ಸಂಸ್ಥೆ ದಕ್ಷಿಣ ಭಾರತ ಪ್ರಾಂತೀಯ ಬಳ್ಳಾರಿ ಶಾಖೆ ಸದಸ್ಯ ಪನ್ನರಾಜು ಎಸ್‌. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT