ಗುರುವಾರ , ಸೆಪ್ಟೆಂಬರ್ 23, 2021
24 °C

ವಿದ್ಯುತ್‌ ಕ್ಷೇತ್ರದ ಖಾಸಗೀಕರಣಕ್ಕೆ ವಿರೋಧ; ರೈತರಿಂದ ರಸ್ತೆತಡೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ರಸ್ತೆತಡೆ ಚಳವಳಿ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ನೂರಾರು ರೈತರು ಅಲ್ಲಿಂದ ಪ್ರಮುಖ ಮಾರ್ಗಗಳ ಮೂಲಕ ರೋಟರಿ ವೃತ್ತಕ್ಕೆ ಬಂದು ಸೇರಿದರು. ಬಳಿಕ ತಹಶೀಲ್ದಾರ್‌ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಕುಳಿತು ರಸ್ತೆತಡೆ ನಡೆಸಿದರು. ‘ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ದಿಕ್ಕಾರ, ‘ವಿದ್ಯುತ್‌ ಕ್ಷೇತ್ರದ ಖಾಸಗೀಕರಣ, ಬೇಡವೇ ಬೇಡ’ ಎಂದು ಘೋಷಣೆಗಳನ್ನು ಕೂಗಿದರು.

ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌, ‘ಕೇಂದ್ರ ಸರ್ಕಾರವು ಈಗಾಗಲೇ ಮೂರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರಿಗೆ ಮರಣ ಶಾಸನ ಬರೆದಿದೆ. ಈಗ ವಿದ್ಯುತ್‌ ವಲಯವನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ನೂರಾರು ನೌಕರರು ಬೀದಿಗೆ ಬೀಳಲಿದ್ದಾರೆ. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಿ, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಹುನ್ನಾರ ಇದರಲ್ಲಿ ಅಡಗಿದೆ’ ಎಂದು ಆರೋಪಿಸಿದರು.

‘ಒಂದುವೇಳೆ ವಿದ್ಯುತ್‌ ಕ್ಷೇತ್ರ ಖಾಸಗೀಕರಣಗೊಂಡರೆ ರೈತರಷ್ಟೇ ಅಲ್ಲ, ಬಡವರು, ಮಧ್ಯಮ ವರ್ಗದವರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಪ್ರತಿಯೊಬ್ಬರೂ ಮೊಬೈಲ್‌ ರಿಚಾರ್ಜ್‌ ಮಾಡಿಸಿಕೊಳ್ಳುವ ರೀತಿಯಲ್ಲಿ ವಿದ್ಯುತ್‌ಗೆ  ರಿಚಾರ್ಜ್‌ ಮಾಡಿಸಿಕೊಳ್ಳಬೇಕಾಗುತ್ತದೆ. ದೇಶದ ಪ್ರಮುಖ ವಲಯವನ್ನು ಕಾರ್ಪೊರೇಟ್‌ ಕಂಪನಿಗಳಿಗೆ ವಹಿಸುವ ಹುನ್ನಾರ ಇದರಲ್ಲಿ ಅಡಗಿದೆ’ ಎಂದು ಆರೋಪ ಮಾಡಿದರು.

‘ಮೂರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಈಗಾಗಲೇ ರೈತರು ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವುದರ ಬದಲು ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಆದರೆ, ರೈತರು ಕೇಂದ್ರ ಸರ್ಕಾರದ ಒತ್ತಡಕ್ಕೆ ಕುಗ್ಗಿಲ್ಲ. ಮಳೆ, ಗಾಳಿ, ಚಳಿಯೆನ್ನದೆ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ದೇಶದ ಇತರೆ ಭಾಗಗಳಿಗೂ ವ್ಯಾಪಿಸುತ್ತಿದೆ. ರೈತರ ಆಕ್ರೋಷದ ಕಟ್ಟೆ ಒಡೆಯುವುದಕ್ಕೂ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.

‘ರೈತರ ಪಂಪ್‌ಸೆಟ್‌ಗಳಿಗೆ 12 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಸಬೇಕು. ತುಂಗಭದ್ರಾ ಜಲಾಶಯದ ನೀರಿನಿಂದ ಜಿಲ್ಲೆಯ ಎಲ್ಲ ಕೆರೆ, ಕಟ್ಟೆಗಳನ್ನು ತುಂಬಿಸಬೇಕು. ತಾಲ್ಲೂಕಿನ ನಲ್ಲಾಪುರ ಸಮೀಪದ ಕೆರೆ–ಕೆರೆ ಮೂಲೆ ಕೆರೆ ಅಭಿವೃದ್ಧಿಪಡಿಸಿದರೆ ಎರಡು ಟಿಎಂಸಿ ನೀರು ಸಂಗ್ರಹಿಸಬಹುದು. ಅದೇ ರೀತಿ ವಿಜಯನಗರ ಕಾಲದ ಕಮಲಾಪುರ ಕೆರೆ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆದು ಅಭಿವೃದ್ಧಿ ಮಾಡಬೇಕು. ತಲೆತಲಾಂತರದಿಂದ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು’ ಎಂದು ಹಕ್ಕೊತ್ತಾಯ ಮಾಡಿದರು.

‘ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ರೈತರು, ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಬೆಲೆ ಏರಿಕೆ ನಿಯಂತ್ರಣಕ್ಕೆ ರಾಜ್ಯ, ಕೇಂದ್ರ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಕಾರ್ಯದರ್ಶಿ ಎಚ್‌.ಜಿ. ಮಲ್ಲಿಕಾರ್ಜುನ, ನಗರ ಘಟಕದ ಅಧ್ಯಕ್ಷ ಟಿ. ನಾಗರಾಜ, ಕಂಬಳಿ ಸುರೇಶ್‌, ಅಯ್ಯಣ್ಣ, ಸಂಗಪ್ಪ ಜೀರ್‌, ಎಲ್‌. ನಾಗೇಶ್‌, ಹೇಮರೆಡ್ಡಿ, ರೇವಣಸಿದ್ದಪ್ಪ ಇದ್ದರು.


ರೈತರ ಪ್ರತಿಭಟನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು