ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ: ಕೆಲಸ ಬಿಟ್ಟು ನೀರಿಗಾಗಿ ಅಲೆದಾಟ

ಕೂಡ್ಲಿಗಿ ತಾಲ್ಲೂಕಿನಲ್ಲಿ ತೀವ್ರಗೊಂಡ ಕುಡಿಯುವ ನೀರಿನ ಸಮಸ್ಯೆ
Published 15 ಮಾರ್ಚ್ 2024, 5:04 IST
Last Updated 15 ಮಾರ್ಚ್ 2024, 5:04 IST
ಅಕ್ಷರ ಗಾತ್ರ

ಕೂಡ್ಲಿಗಿ: ಬರದ ಪರಿಣಾಮವಾಗಿ ಬೇಸಿಗೆ ಅರಂಭದಲ್ಲಿಯೇ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದರಿಂದ ಕೆಲ ಗ್ರಾಮಗಳಲ್ಲಿ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನೀರಿಗಾಗಿ ಅಲೆಯುವ ಸ್ಥಿತಿ ಬಂದಿದೆ.

ಈ ವರ್ಷ ತಾಲ್ಲೂಕಿನಲ್ಲಿ ಸಂಪೂರ್ಣ ಮಳೆ ಕೈಕೊಟ್ಟಿದ್ದರಿಂದ ಬರ ಅವರಿಸಿದೆ. ತಾಲ್ಲೂಕಿನ ಬಹುತೇಕ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ ಅಂತರ್ಜಲ ಕುಸಿತ ಕಂಡಿದೆ. ಇದರಿಂದಾಗಿ 600 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗಂದಂತಾಗಿದ್ದು, ಈಗಾಗಲೇ ತಾಲ್ಲೂಕಿನ 8 ಪಂಚಾಯ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರಿದ್ದು, ಕೆಲ ಹಳ್ಳಿಗಳಲ್ಲಂತೂ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ. ಜಾನುವಾರು, ಕುರಿ, ಮೇಕೆಗಳಿಗೂ ಸಮಸ್ಯೆಯ ಬಿಸಿ ತಟ್ಟುತ್ತಿದೆ.

ತಾಲ್ಲೂಕಿನ ಬಡೇಲಡಕು, ಅಲೂರು, ಕಾತ್ರಿಕೆಹಟ್ಟಿ, ಗುಡೇಕೋಟೆ, ನಾಗರಹುಣಸೆ, ಕಾನಮಡುಗು, ಮಾಲೂರು, ಆಲೂರು ಗೊಲ್ಲರಹಟ್ಟಿ, ಸಂಕ್ಲಾಪುರ ಗೊಲ್ಲರಹಟ್ಟಿ, ಸಕಲಾಪುರದಹಟ್ಟಿ, ಯರಗುಂಡ್ಲಹಟ್ಟಿ, ಬೆಳೆಕಟ್ಟೆ, ತಾಯಕನಹಳ್ಳಿ, ಮೊರಬಾನಹಳ್ಳಿ, ಮೊರಬ, ಬೀರಲಗುಡ್ಡ ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಈ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಜನರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.

ಬಡೇಲಡಕು ಗ್ರಾಮವೊಂದರಲ್ಲಿಯೇ 5 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ. ಆಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದಲೂ ಬಾಡಿಗೆ ಕೊಳವೆ ಬಾವಿಯಿಂದಲೇ ನೀರು ಪೂರೈಸಲಾಗುತ್ತಿದೆ. 2023ರ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ 31 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಕೇವಲ 10ರಲ್ಲಿ ನೀರು ಸಿಕ್ಕಿದೆ. ಇದರಿಂದ ಹೊಸ ಕೊಳವೆ ಬಾವಿ ಕೊರೆಸುವ ಬದಲು ಗ್ರಾಮಗಳ ಪಕ್ಕದಲ್ಲಿನ ರೈತರ ಕೊಳವೆ ಬಾವಿಗಳನ್ನೇ ಬಾಡಿಗೆ ಪಡೆದು ನೀರು ಪೂರೈಕೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಒಟ್ಟು 132 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ 121 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ನೀರಿನ ಕೊರತೆಯಿಂದ ಅನೇಕ ಕಡೆ ಶುದ್ಧ ನೀರು ಸಿಗುತ್ತಿಲ್ಲ. ವಿವಿಧ ಕಾರಣಗಳಿಂದ 11 ಘಟಕಗಳು ಸ್ಥಗಿತಗೊಂಡಿವೆ.

ತುಂಗಭದ್ರಾ ನದಿಯಿಂದ ಉಜ್ಜನಿ ಸೇರಿದಂತೆ ತಾಲ್ಲೂಕಿನ 217 ಹಳ್ಳಿಗಳಿಗೆ ಫ್ಲೋರೈಡ್‍ಮುಕ್ತ ಹಾಗೂ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಯೋಜನೆ ಬದಲಾದ ಹಿನ್ನೆಲೆಯಲ್ಲಿ ಕಾಮಗಾರಿ ಕುಂಟುತ್ತ ಸಾಗಿದೆ. ಯೋಜನೆ ಪೂರ್ಣಗೊಂಡರೂ ಮಳೆ ಇಲ್ಲದೆ ತುಂಗಭದ್ರಾ ಜಲಾಶಯ ಬರಿದಾದರೆ ನೀರು ಎಲ್ಲಿಂದ ಬರಬೇಕು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ತಾಲ್ಲೂಕಿನಲ್ಲಿ ಬರ ನಿರ್ವಹಣೆಗೆ 45 ಲಕ್ಷ ರೂ. ಮಂಜೂರಾಗಿದ್ದು ಕುಡಿಯುವ ನೀರು ಸರಬರಾಜು ಸೇರಿದಂತೆ ಯಾವುದಕ್ಕೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು
-ರಾಜು ಪಿರಂಗಿ, ತಹಶೀಲ್ದಾರ್ ಕೂಡ್ಲಿಗಿ
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 29 ರೈತರ ಮನವೊಲಿಸಿ ಅವರ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ
-ವೈ. ರವಿಕುಮಾರ್, ಕಾರ್ಯನಿರ್ವಹಣಾಧಿಕಾರಿ ತಾಲ್ಲೂಕು ಪಂಚಾಯ್ತಿ. ಕೂಡ್ಲಿಗಿ
ತಾಲ್ಲೂಕಿನಲ್ಲಿ ಬರಗಾಲವಿರುವುದರಿಂದ ಮೇವು ನೀರಿನ ಕೊರತೆ ಉಂಟಾಗಿದೆ. ಅದ್ದರಿಂದ ದನ ಕರುಗಳಿಗೆ ನೀರು ಮೇವು ಪೂರೈಕೆ ಮಾಡಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.
-ಕೆ. ಪ್ರದೀಪ್ ಎಂ.ಬಿ. ಅಯ್ಯನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT