ಶುಕ್ರವಾರ, ಮಾರ್ಚ್ 31, 2023
32 °C

ಹೂವಿನಹಡಗಲಿ: ಸಂಗೀತದ ಬಾಲ ಪ್ರತಿಭೆಗಳು

ಕೆ. ಸೋಮಶೇಖರ್ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: 14 ವರ್ಷದ ಈ ಪೋರ ಹಾರ್ಮೋನಿಯಂ, ಕ್ಯಾಷಿಯೋ ವಾದ್ಯ ನುಡಿಸುತ್ತಾ ಹಾಡಲು ಶುರು ಮಾಡಿದರೆ ಎಂತಹವರೂ ತಲೆದೂಗುತ್ತಾರೆ. 10 ವರ್ಷದ ಇನ್ನೊಬ್ಬ ಸಹೋದರ ಅಣ್ಣನ ರಾಗ, ಸ್ವರಗಳಿಗೆ ಅದ್ಭುತವಾಗಿ ತಬಲ ಸಾಥ್ ನೀಡುತ್ತಾರೆ. ಇಬ್ಬರು ಬಾಲ ಪ್ರತಿಭೆಗಳ ನಡುವಿನ ಸಂಗೀತ ಜುಗಲ್ ಬಂದಿ ನೋಡುವುದು, ಕೇಳಿಸಿಕೊಳ್ಳುವುದೇ ಸಂಗೀತ ರಸಿಕರಿಗೆ ಹಬ್ಬ.

ಪಟ್ಟಣದ ದಂತ ವೈದ್ಯ ಎಲ್.ಪಿ. ಕಠಾರಿ ನಾಯ್ಕ, ಆಶಾ ದಂಪತಿ ಪುತ್ರರಾಗಿರುವ ಎಂಟನೇ ತರಗತಿಯ ನೀರಜ್ ಕಠಾರಿ, ಐದನೇ ತರಗತಿಯ ನಿಶಾಂತ್ ಕಠಾರಿ ಸಂಗೀತ ಕ್ಷೇತ್ರದಲ್ಲಿ ಅರಳುತ್ತಿರುವ ಬಾಲ ಪ್ರತಿಭೆಗಳು. ಪಟ್ಟಣದ ಜೆ.ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ ಅಭ್ಯಾಸ ಮಾಡುವ ಇವರು ಓದಿನ ಜತೆಗೆ ಶ್ರದ್ಧೆಯಿಂದ ಸಂಗೀತಾಭ್ಯಾಸ ಮಾಡುತ್ತಾರೆ.

ಸಂಗೀತ ಕಲೆ ಇವರಿಗೆ ರಕ್ತಗತವಾಗಿ ಬೆಳೆದು ಬಂದಿದೆ. ಅಜ್ಜಿ ಪೀಕಮ್ಮ ಲಂಬಾಣಿ ಪದಗಳ ಹಾಡುಗಾರ್ತಿ. ತಂದೆ ಎಲ್.ಪಿ.ನಾಯ್ಕ ದಂತ ವೈದ್ಯರಾಗಿದ್ದರೂ ಸಂಗೀತದ ಅಭಿರುಚಿ ಬೆಳೆಸಿಕೊಂಡು, ಹಾರ್ಮೋನಿಯಂ ನುಡಿಸುತ್ತಾ ಸ್ವತಃ ಹಾಡುತ್ತಾರೆ.

ಎಳವೆಯಲ್ಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಈ ಬಾಲಕರ ಸಂಗೀತ ಕಲಿಕೆಯ ಆಕಾಂಕ್ಷೆಗೆ ಇವರ ತಂದೆ ನೀರೆರೆದು ಪೋಷಿಸಿದ್ದಾರೆ. ಕೊಪ್ಪಳದ ಸಂಗೀತ ಶಿಕ್ಷಕ ಮಾರುತಿ ಬಿನ್ನಾಳ ಅವರಲ್ಲಿ ನೀರಜ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದರೆ, ಮತ್ತೊಬ್ಬ ಬಾಲಕ ನಿಶಾಂತ್ ಅದೇ ಗುರುವಿನ ಬಳಿ ತಬಲ ನುಡಿಸುವುದನ್ನು ಕಲಿತಿದ್ದಾರೆ. ಇಬ್ಬರು ಬಾಲಕರು ವಯಸ್ಸಿಗೂ ಮೀರಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.

ಭಾವಗೀತೆ, ಭಕ್ತಿಗೀತೆ, ತತ್ವಪದ, ವಚನ ಗಾಯನ, ಮರಾಠಿ ಪದಗಳನ್ನು ನೀರಜ್ ಸುಶ್ರಾವ್ಯವಾಗಿ ಹಾಡುತ್ತಾರೆ. ಹಂಪಿ ಉತ್ಸವ, ಸುತ್ತೂರು ಜಾತ್ರೆ, ಹೂವಿನಹಡಗಲಿ ಗವಿಸಿದ್ದೇಶ್ವರ ಜಾತ್ರೆ ಸೇರಿದಂತೆ ಹಲವೆಡೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

‘ಲಾಕ್ ಡೌನ್ ಜಾರಿಯ ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಸೇರಿ ಕೆಲವೊತ್ತು ವಾದ್ಯ ಪರಿಕರದೊಂದಿಗೆ ಸಂಗೀತಾಭ್ಯಾಸ ಮಾಡಿದರೆ ಮನಸ್ಸಿನ ಎಲ್ಲ ದುಗುಡಗಳು ಮರೆಯಾಗುತ್ತವೆ. ಪರಿಸರದಲ್ಲಿನ ಸಾಂಕ್ರಾಮಿಕ ಭೀತಿಯಾಗಲಿ, ದೃಶ್ಯ ಮಾಧ್ಯಮಗಳು ಸೃಷ್ಟಿಸುವ ಭಯದ ವಾತಾವರಣವನ್ನು ನಾವು ಸಂಗೀತದ ಮೂಲಕ ಮರೆಯುತ್ತೇವೆ’ ಎಂದು ಡಾ. ಎಲ್.ಪಿ.ನಾಯ್ಕ ಕಠಾರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು