ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Tungabhadra Dam | ಭೋರ್ಗರೆತ ಮರೆತ ಜಲಾಶಯ; ರೈತರ ಮರುಕ

ಲಕ್ಷಾಂತರ ಕ್ಯುಸೆಕ್‌ ನೀರು ನದಿ ಸೇರುತ್ತಿರುವುದನ್ನು ಅಸಹಾಯಕತೆಯಿಂದ ನೋಡುವ ದೌರ್ಭಾಗ್ಯ
Published : 14 ಆಗಸ್ಟ್ 2024, 5:37 IST
Last Updated : 14 ಆಗಸ್ಟ್ 2024, 5:37 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಕೇವಲ ಮೂರು ದಿನಗಳ ಹಿಂದೆ ಭೋರ್ಗರೆಯುತ್ತ, ಗೇಟುಗಳನ್ನು ಮೀರಿ ನದಿಗೆ ಧುಮ್ಮಿಕ್ಕಲು ಯತ್ನಿಸುತ್ತಿದ್ದ ತುಂಗಭದ್ರಾ ಜಲಾಶಯ ಈಗ ‘ಕೂಲ್‌ ಕೂಲ್’ ಆಗಿದ್ದು, ನೀರು ಬಸಿದುಕೊಳ್ಳುತ್ತ ತನ್ನ ಒಡಲನ್ನು ಬರಿದು ಮಾಡಿಕೊಳ್ಳುತ್ತಿದೆ. ಇದನ್ನು ಕಂಡ ರೈತರು ಮಮ್ಮಲ ಮರುಗುತ್ತಿದ್ದಾರೆ.

ಸದ್ಯ ಜಲಾಶಯದಿಂದ ಪ್ರತಿದಿನ ಸರಾಸರಿ 10 ಟಿಎಂಸಿ ಅಡಿಯಷ್ಟು ನೀರು ನದಿಗೆ ಹರಿಯುತ್ತಿದ್ದು, ಮೈದುಂಬಿದ್ದ ಜಲಾಶಯ ಸೊರಗಿದ್ದ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದು ವೇಳೆ ಗೇಟ್ ಕೊಚ್ಚಿಕೊಂಡು ಹೋಗದೆ ಇರುತ್ತಿದ್ದರೆ ಹಲವು ದಿನಗಳ ಕಾಲ ಅಣೆಕಟ್ಟೆ ಗರಿಷ್ಠ ಮಟ್ಟದಲ್ಲಿ ತುಂಬಿಯೇ ಇರುತ್ತಿತ್ತು ಮತ್ತು ಸ್ವಾತಂತ್ರ್ಯೋತ್ಸವ ದಿನದಂದು ಸಾವಿರಾರು ಪ್ರವಾಸಿಗರಿಗೆ ತನ್ನ ನಿಜ ಸೌಂದರ್ಯವನ್ನು ತೋರಿಸುತ್ತಿತ್ತು. ಅದನ್ನು ಹೊಸಕಿ ಹಾಕಿರುವ ಗೇಟ್‌ ದುರಂತ, ರೈತರ ಪಾಲಿಗೆ ದೊಡ್ಡ ಆಘಾತವನ್ನೇ ತಂದಿಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಅಣೆಕಟ್ಟೆಗೆ ಬಂದಾಗ ರೈತರನ್ನು, ಸಮಾಜದ ವಿವಿಧ ವರ್ಗದ ಜನರನ್ನು ಡ್ಯಾಂ ಸಮೀಪಕ್ಕೆ ಬಿಟ್ಟುಕೊಡಲಿಲ್ಲ. ಹೀಗಾಗಿ ಹಲವರು ಸಿಎಂ ಅವರನ್ನು ಕಾಣಲು ಬಂದವರು ವಾಪಸ್ ತೆರಳಿದರು. ಸಿಪಿಎಂ ಸಹಿತ ಕೆಲವು ಸಂಘಟನೆಗಳು  ತಾವು ಸಿದ್ಧಪಡಿಸಿದ್ದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿಗೆ ಸಲ್ಲಿಸಿ ತೃಪ್ತಿಪಟ್ಟುಕೊಂಡವು.

‘ಗೇಟ್‌ ಕೊಚ್ಚಿಕೊಂಡು ಹೋಗಿದ್ದಕ್ಕೆ ನಾನು ಯಾರನ್ನೂ ಹೊಣೆಗಾರರನ್ನಾಗಿ ಹೆಸರಿಸುವುದಿಲ್ಲ. ಕೇಂದ್ರ ಸರ್ಕಾರ ನೇಮಿಸಿದ ತುಂಗಭದ್ರ ಮಂಡಳಿ ಅಸ್ತಿತ್ವದಲ್ಲಿದ್ದು, ಇದರಲ್ಲಿ ಕೇಂದ್ರ ಜಲ ಆಯೋಗ ಹಾಗೂ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ರಾಜ್ಯದ ಸದಸ್ಯರೂ ಇದರಲ್ಲಿದ್ದಾರೆ. ಇಂತಹ ಘಟನೆಗಳಿಗೆ ಕಾರಣವೇನು ಎಂಬುದರ ಬಗ್ಗೆ ವಿಶ್ಲೇಷಣೆ ಅಗತ್ಯ, ರೈತರ ಹಿತದೃಷ್ಟಿಯಿಂದ ಶೀಘ್ರದಲ್ಲೇ ಗೇಟ್ ಅಳವಡಿಸುವುದೇ ನಮ್ಮ ಆದ್ಯತೆ’ ಎಂದು ಮುಖ್ಯಮಂತ್ರಿ ಹೇಳುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ಬಹತೇಕ ಸಂಶಯವೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಗೋಪ್ಯ ಸಮಾಲೋಚನೆ: ಅಣೆಕಟ್ಟೆಗೆ ಬಂದ ಮುಖ್ಯಮಂತ್ರಿ ಅವರು ಅಣೆಕಟ್ಟೆಯ ಮೇಲೆಯೇ ಸ್ಥಳೀಯ ಶಾಸಕರು, ಹಲವು ಅಧಿಕಾರಿಗಳನ್ನು ದೂರ ಇಟ್ಟು, ಕೆಲವೇ ಕೆಲವು ಅಧಿಕಾರಿಗಳು, ತಜ್ಞರೊಂದಿಗೆ ಗೋಪ್ಯ ಸಮಾಲೋಚನೆಯನ್ನು ಕೆಲವು ನಿಮಿಷಗಳ ಕಾಲ ನಡೆಸಿದ್ದು, ಹಲವರಲ್ಲಿ ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಅವರು ವೈಕುಂಠ ಅತಿಥಿಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಾರೆ ಎಂಬ ಮಾಹಿತಿ ಮೊದಲು ಲಭಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ರದ್ದಾಯಿತು. ಇದಕ್ಕೆ ಕಾರಣ ಬಹಿರಂಗವಾಗಿಲ್ಲ.

ದಿನಕ್ಕೆ ಸರಾಸರಿ 10 ಟಿಎಂಸಿ ಅಡಿಯಷ್ಟು ನೀರು ಖಾಲಿ ಗೇಟ್ ಅಳವಡಿಕೆಯತ್ತಲೇ ಎಲ್ಲರ ಚಿತ್ತ ಗೇಟ್ ಅಳವಡಿಸಿದ ಬಳಿಕ ಮಳೆ ಬರಲಿ ಎಂಬ ಹಾರೈಕೆ

‘ವಾರ ಬಿಟ್ಟು ಬರಲಿ ಮಳೆ’

ಮಲೆನಾಡು ಭಾಗದಲ್ಲಿ ಈಗ ಮಳೆ ಬಿರುಸಾಗಿ ಸುರಿದರೆ ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ನೀರು ಹೆಚ್ಚುವರಿಯಾಗಿ ಹರಿದು ಜಲಾಶಯದ ಒಳಹರಿವು ಚೆಚ್ಚುತ್ತದೆ ಅದರಿಂದ ಅಣೆಕಟ್ಟೆ ಬರಿದು ಮಾಡುವ ಕೆಲಸ ವಿಳಂಬವಾಗುತ್ತದೆ. ಹೀಗಾಗಿ ಒಂದು ವಾರ ಮಳೆ ಬಾರದೆ ಬಳಿಕ ಉತ್ತಮವಾಗಿ ಸುರಿಯಲಿ ಜಲಾಶಯ ತುಂಬಲಿ ಎಂದು ರೈತರು ಹಾರೈಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT