ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ಸಿಎಂ ಬೆಂಬಲಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

Published : 19 ಆಗಸ್ಟ್ 2024, 8:55 IST
Last Updated : 19 ಆಗಸ್ಟ್ 2024, 8:55 IST
ಫಾಲೋ ಮಾಡಿ
Comments

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಖಂಡಿಸಿ ಸೋಮವಾರ ಇಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶ ನಡೆಯಿತು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್‌ ಶೇಖ್‌, ಸಂಸದ ಇ.ತುಕಾರಾಂ ನೇತೃತ್ವದಲ್ಲಿ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಿಂದ ಆರಂಭವಾದ ಮೆರವಣಿಗೆ, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ, ಡಾ.ಪುನೀತ್ ರಾಜಕುಮಾರ್ ವೃತ್ತ, ತಾಲ್ಲೂಕು ಕಚೇರಿ ಮೂಲಕ ತೆರಳಿ, ಡಾ.ಬಿ. ಆರ್. ಅಂಬೇಡ್ಕರ್ ವೃತ್ತದವರೆಗೆ ಸಾಗಿತು.

ಇ.ತುಕಾರಾಂ ಮಾತನಾಡಿ, ಕೇಂದ್ರ ಸರ್ಕಾರವು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ  ಕಾಣಿಸುತ್ತಿದ್ದು, ಇದರ ವಿರುದ್ಧ ಪಕ್ಷದ ಹೋರಾಟ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು..

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್ ಶೇಖ್‌ ಮಾತನಾಡಿ, ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವ ತನ್ನ ಚಾಳಿಯನ್ನು ಎನ್‌ಡಿಎ ನಿಲ್ಲಿಸಬೇಕು, ಇಲ್ಲವಾದರೆ ಹೊಸಪೇಟೆ ಬಂದ್, ಜಿಲ್ಲಾ ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶಾಸಕಿ ಎಂ.ಪಿ.ಲತಾ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್‌, ‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್‌.ಮೊಹಮ್ಮದ್‌ ಇಮಾಮ್‌ ನಿಯಾಜಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕುರಿ ಶಿವಕುಮಾರ್‌, ಪಕ್ಷದ ಮುಖಂಡರಾದ ರಾಣಿ ಸಂಯುಕ್ತಾ, ನಿಂಬಗಲ್‌ ರಾಮಕೃಷ್ಣ, ಕವಿತಾ ಈಶ್ವರ ಸಿಂಗ್‌, ಕೆ.ಎಂ.ಹಾಲಪ್ಪ, ವಿ.ಅಂಜನಪ್ಪ ಇತರರು ಪಾಲ್ಗೊಂಡಿದ್ದರು.

ಶಾಸಕ ಗವಿಯಪ್ಪ ಗೈರು

ಜಿಲ್ಲಾ ಮಟ್ಟದ ಪ್ರತಿಭಟನೆ ಇದಾಗಿತ್ತು ಮತ್ತು ಹೊಸಪೇಟೆಯಲ್ಲಿ ಪಕ್ಷದ ಶಕ್ತಿಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆಯಾಗಿತ್ತು. ಜಿಲ್ಲೆಯಾದ್ಯಂತದಿಂದ ಕಾರ್ಯಕರ್ತರು, ನಾಯಕರು ಬಂದಿದ್ದರು. ಆದರೆ ಸ್ಥಳೀಯ ಕಾಂಗ್ರೆಸ್ ಶಾಸಕ ಎಚ್‌.ಆರ್.ಗವಿಯಪ್ಪ ಅವರು ಮಾತ್ರ ಹಾಜರಾಗಲಿಲ್ಲ ಅಥವಾ ಬೇರೆ ಕೆಲವೊಂದು ಕಡೆ ಮಾಡುವಂತೆ ತಮ್ಮ ಪುತ್ರನನ್ನೂ ಕಳುಹಿಸಿಕೊಡಲಿಲ್ಲ.

‘ಶಾಸಕರಿಗ ತುರ್ತು ಕೆಲಸ ಇದ್ದರೆ ಅವರಿಗೆ ರಿಯಾಯಿತಿ ಕೊಡೋಣ, ಪಕ್ಷದ ಟಿಕೆಟ್‌ನಿಂದ ಗೆದ್ದ ಅವರಿಗೆ ಪ್ರತಿಭಟನೆಗೆ ಒಂದಿಷ್ಟು ಕಾರ್ಯಕರ್ತರನ್ನು ಕರೆಸುವ ಹೊಣೆಗಾರಿಕೆ ಇಲ್ಲವೇ? ಅವರ ಕ್ಷೇತ್ರದಿಂದ ಪ್ರತಿಭಟನೆಗೆ ಬಂದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಪಕ್ಷ, ಪಕ್ಷದ ಸಂಘಟನೆಗೆ ಅವರಿಗೆ ಮನಸ್ಸಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ ಇದ್ದಂತಿದೆ. ಇದನ್ನು ಕೆಪಿಸಿಸಿ ಗಮನಕ್ಕೆ ತರಲಾಗುವುದು’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT