ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಮಾಲವಿ ಜಲಾಶಯದ ಒಡಲು: ಕ್ರಸ್ಟ್ ಗೇಟ್‍ಗಳು, ಕಾಲುವೆಗಳಿಗೆ ಬೇಕಿದೆ ಕಾಯಕಲ್ಪ

Published 11 ಆಗಸ್ಟ್ 2023, 5:54 IST
Last Updated 11 ಆಗಸ್ಟ್ 2023, 5:54 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಹತ್ತು ಕ್ರಸ್ಟ್ ಗೇಟ್‍ಗಳ ದುರಸ್ತಿ ಮತ್ತು ಅಸಮರ್ಪಕ ನಿರ್ವಹಣೆ ಪರಿಣಾಮ ಭರ್ತಿಯಾದ ವೇಗದಲ್ಲೇ ತಾಲ್ಲೂಕಿನ ಮಾಲವಿ ಜಲಾಶಯದ ಒಡಲು ಬರಿದಾಗಿದೆ.

ಕಳೆದ ವರ್ಷ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಹಾಗೂ ತುಂಗಭದ್ರಾ ಹಿನ್ನೀರಿನಿಂದ ಶಾಶ್ವತ ನೀರು ಒದಗಿಸುವ ಯೋಜನೆಯಡಿ ನೀರು ಹರಿಸಿದ ಪರಿಣಾಮ ಜಲಾಶಯ 13 ವರ್ಷಗಳ ಬಳಿಕ ಭರ್ತಿಯಾಗಿತ್ತು. ಕಾಲುವೆ ಮೂಲಕ ಬ್ಯಾಲಾಳು ಕೆರೆಗೆ ನೀರು ಹರಿಸಲಾಗಿತ್ತು.

ಜೆಸಿಬಿ ಸಹಾಯದಿಂದ ಗೇಟ್‍ಗಳು ಹಾಳಾಗಿದ್ದರಿಂದ ತೆರೆಯುವುದು ಮತ್ತು ಮುಚ್ಚುವ ಕಾರ್ಯಕ್ಕೆ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಈಗ ಜಲಾಶಯ ಸಂಪೂರ್ಣ ಖಾಲಿಯಾಗಿದೆ.

ಶಾಶ್ವತ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಹೂವಿನಹಡಗಲಿ ತಾಲ್ಲೂಕಿನ ರಾಜವಾಳದಿಂದ ತುಂಗಭದ್ರಾ ಜಲಾಶಯದ ಹಿನ್ನೀರಿನ ಮೂಲಕ ಮಾಲವಿ ಜಲಾಶಯಕ್ಕೆ ನೀರು ಹರಿಸುವ ₹150 ಕೋಟಿ ವೆಚ್ಚದ ಕಾಮಗಾರಿ 2017ರಲ್ಲಿ ಆರಂಭಗೊಂಡಿತ್ತು. ಪರಿಣಾಮವಾಗಿ ಕಳೆದ ವರ್ಷ ಸತತ ಒಂದು ತಿಂಗಳು ನೀರು ಹರಿಸಲಾಗಿತ್ತು.

2 ಟಿ.ಎಂ.ಸಿ. ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಿಂದ ನೇರವಾಗಿ 10 ಸಾವಿರ ಎಕರೆಗೆ ನೀರಾವರಿ ಆಗುತ್ತದೆ. ಸಾವಿರಾರು ಕೊಳವೆಬಾವಿಗಳಲ್ಲಿನ ಅಂತರ್ಜಲ ಹೆಚ್ಚಾಗುತ್ತದೆ. ಜಲಾಶಯದ ಅಚ್ಚುಕಟ್ಟು ಪ್ರದೇಶದ ಮಾಲವಿ, ಹರೇಗೊಂಡನಹಳ್ಳಿ, ಚಿಂತ್ರಪಳ್ಳಿ, ಕಡಲಬಾಳು, ಬಾಚಿಗೊಂಡನಹಳ್ಳಿ, ಬ್ಯಾಸಿಗಿದೇರಿ, ಹಿರೇಸೊಬಟಿ ಸಹಿತ 10 ಗ್ರಾಮಗಳ ಸಾವಿರಾರು ಕುಟುಂಬಗಳಿಗೆ ಆಸರೆಯಾಗುತ್ತದೆ.

ಈ ಬಾರಿ ತುಂಗಭದ್ರೆಗೆ ನೀರು ಹರಿದು ಬಂದಿದ್ದರೂ ಜಲಾಶಯಕ್ಕೆ ನೀರು ಹರಿಸಲಾಗಿಲ್ಲ. ಹರಿಸಿದ್ದರೂ ಕ್ರಸ್ಟ್‌ಗೇಟ್‍ಗಳು ಸುಸ್ಥಿತಿಯಲ್ಲಿಲ್ಲ. ಎಡ ಮತ್ತು ಬಲದಂಡೆಗಳು ವರ್ಷವಾದರೂ ದುರಸ್ತಿಗೊಂಡಿಲ್ಲ. ಕಾಲುವೆ ಉದ್ದಕ್ಕೂ ಜಾಲಿ ಗಿಡಗಳು, ತ್ಯಾಜ್ಯದಿಂದ ತುಂಬಿಹೋಗಿವೆ.

ಜಲಾಶಯದ 10 ಕ್ರಸ್ಟ್ ಗೇಟ್‍ಗಳು ಮತ್ತು ಎರಡು ಕಾಲುವೆಗಳನ್ನು ದುರಸ್ತಿಗೊಳಿಸಲು ಅನುದಾನ ಬಿಡುಗಡೆ ಮಾಡಿಸುವಂತೆ ಕೋರಿ ಈಚೆಗೆ ನಂದಿಪುರದ ಮಹೇಶ್ವರ ಸ್ವಾಮೀಜಿ ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.

‘ದುರಸ್ತಿಗೆ ₹4.5ಕೋಟಿ ಅಗತ್ಯವಿದೆ, ಈ ಕುರಿತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸುವುದಾಗಿ ಎಂದು ಭೀಮನಾಯ್ಕ ತಿಳಿಸಿದ್ದಾರೆ’ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಮಳೆ ತಡವಾಗಿ ಆರಂಭವಾಗಿದೆ. ತುಂಗಭದ್ರಾ ಜಲಾಶಯದ ಒಳ ಹರಿವು 20 ಕ್ಯುಸೆಕ್ ಇದ್ದಾಗ ಮಾತ್ರ ಮಾಲವಿ ಜಲಾಶಯಕ್ಕೆ ನೀರು ಹರಿಸಲಾಗುವುದು
ಐಗೋಳ ಪ್ರಕಾಶ್ ಕಾರ್ಯನಿರ್ವಾಹಕ ಎಂಜಿನಿಯರ್ ಜಲಸಂಪನ್ಮೂಲ ಇಲಾಖೆ ಹೂವಿನ ಹಡಗಲಿ
ಮೀನುಗಾರಿಕೆಗೆ ವರದಾನ
‘ಜಲಾಶಯದ ಅಂಗಳದಲ್ಲಿ ಐದು ಗ್ರಾಮ ಪಂಚಾಯ್ತಿಗಳಿಂದ ಈ ಹಿಂದೆ ನರೇಗಾ ಯೋಜನೆ ಅಡಿಯಲ್ಲಿ ಹೂಳು ತೆಗೆಸಲಾಗಿತ್ತು. ಆ ಸ್ಥಳದಲ್ಲಿ ಅಳಿದುಳಿದಿರುವ ನೀರಿನಲ್ಲಿ ಮೀನುಗಾರಿಕೆ ನಡೆದಿದೆ. ಒಂದು ತಿಂಗಳಿಂದ ಮೀನುಗಾರರ ಬದುಕಿಗೆ ಭದ್ರತೆ ಒದಗಿಸಿದೆ. ನೀರು ಪೋಲಾಗಿ ಹೋಗದಿದ್ದರೆ ಮೂರ್ನಾಲ್ಕು ತಿಂಗಳು ಮೀನುಗಾರಿಕೆಗೆ ಅನುಕೂಲ ಆಗುತ್ತಿತ್ತು’ ಎನ್ನುತ್ತಾರೆ ಬಸರಕೋಡು ತಾಂಡಾದ ಮೀನುಗಾರ ಮಂಜುನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT