ಮಂಗಳವಾರ, ಆಗಸ್ಟ್ 3, 2021
27 °C
ಡಿಎಚ್‌ಒ ಡಾ.ಮಹೇಂದ್ರ ಕಾಪಸೆ ಸಲಹೆ

ಪ್ರಜಾವಾಣಿ ಫೋನ್‌ ಇನ್ | ಕೋವಿಡ್‌ ಭಯಂಕರ ಜಡ್ಡೇನಲ್ಲ, ಎಚ್ಚರ ಅಗತ್ಯ: ಡಾ.ಮಹೇಂದ್ರ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಭಯಂಕರ ಜಡ್ಡೇನಲ್ಲ; ಗಾಬರಿಯಾಗುವ ಅಗತ್ಯವಿಲ್ಲ, ಕೋವಿಡ್‌ ಪೀಡಿತರನ್ನು ತುಚ್ಛವಾಗಿ ನೋಡಬೇಡಿ; ಸ್ವಚ್ಛತೆಗೆ ಆದ್ಯತೆ ನೀಡಿ, ಎಲ್ಲಿಯೂ ಗುಂಪುಗೂಡಬೇಡಿ; ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ ಬಳಸಿ; ನಿಮ್ಮ ಊರು, ಕೇರಿ, ಓಣಿಯಲ್ಲಿ ಜಾಗೃತಿ ಮೂಡಿಸಿ.

‘ಪ್ರಜಾವಾಣಿ’ ವಿಜಯಪುರ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ ಅವರು, ಜಿಲ್ಲೆಯ ವಿವಿಧ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದ ಕರೆ ಮಾಡಿದವರಿಗೆ ಉತ್ತರಿಸುವ ಮೂಲಕ ಧೈರ್ಯ ತುಂಬಿದರು.

100ರಲ್ಲಿ ಶೇ 95 ರಷ್ಟು ಜನರಿಗೆ ಅರಿವಿಗೆ ಬಾರದಂತೆ ಕೆಮ್ಮು, ನೆಗಡಿ, ಜ್ವರದ ರೂಪದಲ್ಲಿ ಕೋವಿಡ್‌ ಬಂದು ಹೋಗಿರುತ್ತದೆ. ಆದರೆ, ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ಎಚ್ಚರವಹಿಸಬೇಕು. ಈಗಾಗಲೇ ತೀವ್ರತರ ಕಾಯಿಲೆಗಳಿಂದ ಬಳಲುತ್ತಿರುವವರು, ವಯೋವೃದ್ಧರು, ಮಕ್ಕಳು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಹೊರಗಡೆ ಬರಬಾರದು, ಕೋವಿಡ್‌ ನಿರ್ವಹಣೆ ಜವಾಬ್ದಾರಿಯನ್ನು ಕೇವಲ ಸರ್ಕಾರ, ವೈದ್ಯರ ಮೇಲೆ ಹೇರಬಾರದು ಸಮಾಜದ ಜವಾಬ್ದಾರಿಯೂ ಇದೆ ಎಂದು ತಿಳಿ ಹೇಳಿದರು.

ಫೋನ್‌ ಇನ್‌ ಕಾರ್ಯಕ್ರಮದ ಆಯ್ದ ಪ್ರಶ್ನೋತ್ತರಗಳು ಇಂತಿವೆ.

* ಶಿವಣ್ಣ ಹದಿಮೂರು, ಇಂಚಿಗೇರಿ, ಮಂಜುನಾಥ ರೂಗಿ, ಹೊರ್ತಿ: ಸದ್ಯ ಮಳೆಗಾಲ ಇದೆ. ಕೊರೊನಾ, ಮಲೇರಿಯಾ, ಡೆಂಗಿ ಲಕ್ಷಣಗಳು ಒಂದೇ ರೀತಿ ಇರುವುದರಿಂದ ಯಾವ ಕಾಯಿಲೆ ಎಂದು ತಿಳಿಯುವುದು ಹೇಗೆ?

–ನೆಗಡಿ, ಕೆಮ್ಮು, ಜ್ವರ, ಉಸಿರಾಟ ತೊಂದರೆ ಇರುವವರು ನಿರ್ಲಕ್ಷ್ಯ ಮಾಡದೇ ಸಮೀಪದ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರು ಯಾವ ಕಾಯಿಲೆ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಒಂದು ವೇಳೆ ಕೋವಿಡ್‌ ಆಗಿದ್ದರೆ ಅಂತವರಿಗೆ ಮುಂಜಾಗೃತವಾಗಿ ಚಿಕಿತ್ಸೆ ನೀಡುತ್ತಾರೆ. ಅಪಾಯದಿಂದ ಪಾರಾಗಬಹುದು. 

*ಬಸವರಾಜ ಸಾಹುಕಾರ, ಹೊರ್ತಿ: ನೆರೆಯ ಮಹಾರಾಷ್ಟ್ರದಿಂದ ಜನರು ಅಕ್ರಮವಾಗಿ ಗಡಿ ದಾಟಿ ಬರುತ್ತಿದ್ದು, ಸೂಕ್ತ ಕ್ರಮಕೈಗೊಳ್ಳಿ

–ಸೇವಾ ಸಿಂಧು ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ, ಅನುಮತಿ ಪಡೆದುಕೊಂಡು ಮಹಾರಾಷ್ಟ್ರದಿಂದ ಬರುವವರನ್ನು ತಪಾಸಣೆ ಮಾಡಿ, ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಹಳ್ಳ, ನದಿಯನ್ನು ದಾಟಿಕೊಂಡು ರಾತ್ರೋರಾತ್ರಿ ಅಕ್ರಮವಾಗಿ ಯಾರಾದರೂ ನಿಮ್ಮ ಊರಿಗೆ ಬಂದರೆ ಆರೋಗ್ಯ, ಪೊಲೀಸ್‌ ಅಥವಾ ತಾಲ್ಲೂಕು ಆಡಳಿತದ ಗಮನಕ್ಕೆ ತನ್ನಿ. ಅಂತವರನ್ನು ಪತ್ತೆಹಚ್ಚಿ ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಲಾಗುವುದು. ಈ ವಿಷಯದಲ್ಲಿ ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಬೇಕು.

*ಗುರು ಬಿರಾದಾರ, ದೇವರಹಿಪ್ಪರಗಿ: ಹೋಂ ಕ್ವಾರಂಟೈನ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ, ನಿರ್ವಾಹಕರು ಪಟ್ಟಣದಲ್ಲಿ ಅಡ್ಡಾಡುತ್ತಿದ್ದಾರೆ. ಜನ ಭಯಭೀತರಾಗಿದ್ದು, ಅವರನ್ನು ಹೋಂ ಕ್ವಾರಂಟೈನ್ ಕಟ್ಟುನಿಟ್ಟಾಗಿ ಮಾಡಿ?

–ಹೋಂ ಕ್ವಾರಂಟೈನ್‌ ಇರುವವರು ಯಾರಾದರೂ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕವಾಗಿ ತಿರುಗಾಡಿದರೆ ತಕ್ಷಣ ತಾಲ್ಲೂಕು ವೈದ್ಯಾಧಿಕಾರಿ ಅಥವಾ ಪೊಲೀಸರ ಗಮನಕ್ಕೆ ತನ್ನಿ. ಅಂತವರ ವಿರುದ್ಧ  ಶಿಸ್ತುಕ್ರಮಕೈಗೊಳ್ಳಲಾಗುವುದು.

*ಈರಣ್ಣ ದೇವರಗುಡಿ, ಮುತ್ತಗಿ; ಗ್ರಾಮದಲ್ಲಿ ಸೀಲ್‌ಡೌನ್‌ ಮಾಡಿ ವಾರವಾಯಿತು, ತೆರವು ಯಾವಾಗ?

–ತಹಶೀಲ್ದಾರ್‌ ನೇತೃತ್ವದಲ್ಲಿ ಸೀಲ್‌ಡೌನ್‌ ಮಾಡಲಾಗಿರುತ್ತದೆ. ನಿಯಮಾನುಸಾರ ಸಡಿಲಿಕೆ ಮಾಡುತ್ತಾರೆ.

*ಶರಣಬಸು ಡೋಣಗಿ, ಹೊರ್ತಿ; ಗಾಳಿಯಲ್ಲಿ ಕೊರೊನಾ ಹರಡುತ್ತದೆ ಎಂಬ ಸುದ್ದಿ ಹರಡಿದೆ, ನಿಜವೇ?

–ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿದ್ದಾರೆ. ಅಲ್ಲಿ ಅಧ್ಯಯನ ನಡೆಸಿ, ಗೈಡ್‌ಲೈನ್ಸ್‌ ನೀಡುವವರೆಗೂ ಅದರ ಬಗ್ಗೆ ಏನೂ ಹೇಳಲಾಗದು. 

*ಡಾ.ಶಾಂತವೀರ ಭೂಬಾಲಿ, ಬಿಎಎಂಎಸ್‌ ವೈದ್ಯ, ಹಲಸಂಗಿ; ಕೊರೊನಾ ಲಕ್ಷಣ ಇದ್ದವರಿಗೆ ಚಿಕಿತ್ಸೆ ನೀಡಬಹುದೇ?

ನೆಗಡಿ, ಕೆಮ್ಮು, ಜ್ವರ ಇದ್ದವರಿಗೆ ಬಿಎಎಂಎಸ್ ವೈದ್ಯರು ರಿಸ್ಕ್‌ ತೆಗೆದುಕೊಂಡು ಚಿಕಿತ್ಸೆ ನೀಡುವುದು ಬೇಡ. ಜಿಲ್ಲಾ ಆಸ್ಪತ್ರೆಗೆ ಅಥವಾ ಎಂಬಿಬಿಎಸ್‌ ವೈದ್ಯರಿಗೆ ರೆಪರ್‌ ಮಾಡಬಹುದು

*ವೀರೇಶ ಹೆಬ್ಬಾಳ, ತಂಗಡಗಿ: ಆಶಾ ಕಾರ್ಯಕರ್ತೆಯರಿಗೆ ಗುಣಮಟ್ಟದ ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌ ನೀಡದೇ ಇರುವುದರಿಂದ ಸಮಸ್ಯೆಯಾಗಿದೆ. ಗೌರವಧನಹೆಚ್ಚಳ ಮಾಡಿ.

–ಆಶಾ ಕಾರ್ಯಕರ್ತರಿಗೆ ಪಿಪಿಇ ಕಿಟ್‌ ನೀಡುವುದಿಲ್ಲ. ಅವರಿಗೆ ಎನ್‌ 95 ಮಾಸ್ಕ್‌, ಸ್ಯಾನಿಟೈಸರ್‌, ಗ್ಲೌಸ್‌ ನೀಡುತ್ತಿದ್ದೇವೆ. ಇವುಗಳನ್ನು ನಾವು ಖರೀದಿಸುತ್ತಿಲ್ಲ. ರಾಜ್ಯ ಸರ್ಕಾರವೇ ಇವುಗಳನ್ನು ಪೂರೈಸುತ್ತದೆ. ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ, ಅಗತ್ಯ ಮೂಲಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುವುದಾಗಿ ಆರೋಗ್ಯ ಸಚಿವರೇ ಭರವಸೆ ನೀಡಿದ್ದಾರೆ.

*ರವಿ ಹುಲ್ಲೂರು, ಕಣಕಾಲ, ಬಸವನ ಬಾಗೇವಾಡಿ:  ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಜಾಗೃತಿ ಮೂಡಿಸಲು ಬೀದಿ ನಾಟಕ ಏರ್ಪಡಿಸಿ?

–ಕೋವಿಡ್‌ ಹಿನ್ನೆಲೆಯಲ್ಲಿ ಜನರು ಎಲ್ಲಿಯೂ ಗುಂಪುಗೂಡುವಂತಿಲ್ಲ. ಹೀಗಾಗಿ ಬೀದಿ ನಾಟಕ ಏರ್ಪಡಿಸಲು ಸಾಧ್ಯವಿಲ್ಲ. ಗ್ರಾಮದ ಮತ್ತು ಸಮಾಜದ ಮುಖಂಡರು ಜನ ಜಾಗೃತಿ ಮೂಡಿಸಬೇಕು.

*ರಾಮಸಿಂಗ್‌ ಕನ್ನೊಳ್ಳಿ, ಇಂಡಿ: ಬಸ್‌ ನಿಲ್ದಾಣದಲ್ಲಿ ಅರೋಗ್ಯ ಸಿಬ್ಬಂದಿ ಇಲ್ಲ. ಯಾರನ್ನೂ ತಪಾಸಣೆ ಮಾಡುತ್ತಿಲ್ಲ.

–ಅನ್‌ಲಾಕ್‌ ಸಂದರ್ಭದ ಆರಂಭದಲ್ಲಿ ಮಾತ್ರ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿತ್ತು. ಈಗ ಇಲ್ಲ. ಮಹಾರಾಷ್ಟ್ರದಿಂದ ಬರುವವರನ್ನು ಮಾತ್ರ ಕಡ್ಡಾಯವಾಗಿ ತಪಾಸಣೆ ಮಾಡುತ್ತಿದ್ದೇವೆ. 

*ದಾನಮ್ಮ ಜೋಗುರ, ಶಂಕ್ರೆಮ್ಮ ಒಡಗೇರಿ, ಸಿಂದಗಿ; ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಐಸಿಯು ಸೇವೆ ಏಕೆ ದೊರೆಯುತ್ತಿಲ್ಲ? ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ?

ಪಿಜಿಷಿಯನ್‌ ಹುದ್ದೆ ಖಾಲಿ ಇರುವುದರಿಂದ ಐಸಿಯು ಸೇವೆ ಲಭ್ಯವಿಲ್ಲ. ಎಲುಬು, ಕೀಲು ತಜ್ಞರು ಅವಶ್ಯವಿದ್ದರೇ ಬಳಸುತ್ತಾರೆ. ಆಸ್ಪತ್ರೆ ವೈದ್ಯಾಧಿಕಾರಿ ಜೊತೆ ಚರ್ಚಿಸಿ ಶೀಘ್ರ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

*ಸಂತೋಷ ಪೂಜಾರಿ, ಸಿಂದಗಿ; ಎನ್‌ಸಿಡಿ ಕಾರ್ಯ ವ್ಯಾಪ್ತಿಯಲ್ಲಿ ಬಿಪಿ, ಶುಗರ್‌ ಜತೆ ಇತರೆ ಚಿಕಿತ್ಸೆ ಲಭ್ಯವಿದೆಯೇ?

ಬಿಪಿ, ಶುಗರ್‌ ಜತೆ ಕ್ಯಾನ್ಸರ್‌, ಪಾರ್ಶ್ವವಾಯು ಸೇರಿದಂತೆ ಮತ್ತಿತರ ಕಾಯಿಲೆಗಳಿಗೂ ಚಿಕಿತ್ಸೆ ಪಡೆದುಕೊಳ್ಳಬಹುದು

*ವಿಜಯಲಕ್ಷ್ಮೀ ಅಡಗಿ, ಸಿಂದಗಿ; ತಾಲ್ಲೂಕು ಆಸ್ಪತ್ರೆಯಲ್ಲಿ ಹೆರಿಗೆಗೆ ಸಿಜೇರಿಯನ್‌ ಸೌಲಭ್ಯ ಸಿಗುವಂತೆ ಮಾಡಿ?

ಸ್ರೀ ಮತ್ತು ಪ್ರಸೂತಿ ತಜ್ಞರ ಕೊರತೆಯಿದೆ. ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯವಿದ್ದು, ಸದುಪಯೋಗ ಪಡೆದುಕೊಳ್ಳಿ.

*ಎಂ.ಕೆ.ಮಠ, ದೇವರಹಿಪ್ಪರಗಿ; ಪಟ್ಟಣದ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಿ?

–ಈಗಾಗಲೇ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ.

*ಶಿವಾನಂದ ಆಲಮೇಲ: ಸಿಂದಗಿ ಆಸ್ಪತ್ರೆಯಲ್ಲಿ ಕ್ಯಾಂಟೀನ್‌ ಕಟ್ಟಿಸಿ ಒಂದೂವರೆ ವರ್ಷ ಆಯಿತು. ಇದುವರೆಗೂ ಆರಂಭವಾಗಿಲ್ಲ. ರೋಗಿಗಳಿಗೆ ಸಮಸ್ಯೆಯಾಗಿದೆ?

–ತಾಲ್ಲೂಕು ವೈದ್ಯಾಧಿಕಾರಿ ಇಂಗಳೆ ಅವರೊಂದಿಗೆ ಮಾತನಾಡುತ್ತೇನೆ. ಆದಷ್ಟು ಶೀಘ್ರ ಟೆಂಡರ್‌ ಕರೆದು, ಒಂದು ತಿಂಗಳ ಒಳಗೆ ಕ್ಯಾಂಟೀನ್‌ ಆರಂಭಿಸಲು ಕ್ರಮಕೈಗೊಳ್ಳುತ್ತೇನೆ.

ವೈದ್ಯರ ಕೊರತೆ ಶೀಘ್ರ ನಿವಾರಣೆ

*ದಿನೇಶ ಪಾಟೀಲ, ರಾಹುಲ್‌ ಮರಬಿ, ದೇವರಹಿಪ್ಪರಗಿ, ಬಸವರಾಜ ದಂಡಿನ್‌, ಬೇನಾಳ ಆರ್‌.ಸಿ, ಸಾಗರ್‌ ಘಾಟಗೆ, ಕೋರವಾರ, ಮಾದೇವಿ ಹಿರೇಮಠ, ಸಿಂದಗಿ, ಅಶೋಕ ವಾಲೀಕಾರ, ಆಲಮೇಲ, ಮಲ್ಲಿಕಾರ್ಜುನ ಗಡೇದ, ನಾಲತವಾಡ: ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಬಡ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ?

–ಜಿಲ್ಲೆಯಲ್ಲಿ ವೈದ್ಯರ ಕೊರತೆ ನಿವಾರಣೆಗೆ ಸರ್ಕಾರ ಈಗಾಗಲೇ ಕ್ರಮಕೈಗೊಂಡಿದೆ. ವೈದ್ಯರ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ ಅವರಿಗೆ ಅಧಿಕಾರ ನೀಡಿದೆ. ಈ ‍ಪ್ರಕಾರ ನಮ್ಮ ಜಿಲ್ಲೆಯಲ್ಲೂ ವೈದ್ಯ ಸಿಬ್ಬಂದಿ ನೇಮಕಕ್ಕೆ ಜುಲೈ 7ರಂದು ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಯಾರೂ ಅರ್ಜಿ ಸಲ್ಲಿಸಲು ಮುಂದೆ ಬರುತ್ತಿಲ್ಲ. ಸಮಸ್ಯೆಯಾಗಿದೆ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು.

****

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆಯುಷ್ಮಾನ್‌ ಭಾರತ ಕರ್ನಾಟಕದ ಜಿಲ್ಲಾ ನೋಡೆಲ್‌ ಅಧಿಕಾರಿ ಡಾ.ಸಂಪತ್‌ ಗುಣಾರಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಜೈಬುನ್ನಿಸಾ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಜಿಲ್ಲಾ ಸಂಯೋಜನಾಧಿಕಾರಿ ಅನಿಲ್‌ ಕುಮಾರ್‌ ಪಾಲ್ಗೊಂಡಿದ್ದರು.

–ಫೋನ್‌ ಇನ್‌ ಕಾರ್ಯಕ್ರಮ ನಿರ್ವಹಣೆ: ಬಸವರಾಜ್ ಸಂಪಳ್ಳಿ, ಬಾಬುಗೌಡ ರೋಡಗಿ, ಸಾಯಿಕುಮಾರ್‌ ಕೊಣ್ಣೂರಕರ್‌, ಬಸಪ್ಪ ಮುಗುದುಮ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು