ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಗೆ ಬೇಕಿದೆ ‘ಗ್ಯಾರಂಟಿ’

Published 2 ಸೆಪ್ಟೆಂಬರ್ 2023, 5:35 IST
Last Updated 2 ಸೆಪ್ಟೆಂಬರ್ 2023, 5:35 IST
ಅಕ್ಷರ ಗಾತ್ರ

ಬಸವರಾಜ್‌ ಸಂಪಳ್ಳಿ

ವಿಜಯಪುರ: ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ಹತ್ತು, ಹಲವು ಸವಾಲುಗಳ ನಡುವೆ ದಶಕಗಳಿಂದ ಕುಂಟುತ್ತಾ ಸಾಗಿದ್ದು, ಯೋಜನೆ ಪೂರ್ಣಗೊಳಿಸುವ ‘ಗ್ಯಾರಂಟಿ’ ರಾಜ್ಯ ಕಾಂಗ್ರೆಸ್‌ ಸರ್ಕಾರ ನೀಡುವುದೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಪ್ರತಿ ವರ್ಷ ರಾಜ್ಯದ ನೀರಾವರಿಗೆ ₹ 40 ಸಾವಿರ ಕೋಟಿಯಂತೆ ಐದು ವರ್ಷದಲ್ಲಿ ₹ 2 ಲಕ್ಷ ಕೋಟಿಯನ್ನು ನೀಡಿ, ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರದಲ್ಲೇ ಘೋಷಣೆ ಮಾಡಿ ಹೋಗಿದ್ದರು. ಆದರೆ, ಅವರು ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ನಗಣ್ಯ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳ ಜೊತೆ ಆರನೇ ಗ್ಯಾರಂಟಿ ಯುಕೆಪಿ ಆಗಬೇಕಿದೆ ಎಂಬುದು ಈ ಭಾಗದ ಜನತೆಯ ಒಕ್ಕೊರಲ ಆಗ್ರಹವಾಗಿದೆ.

ಅನುಷ್ಠಾನಕ್ಕೆ ಎದುರಾಗಿರುವ ಸವಾಲುಗಳು

2010ರಲ್ಲಿ ಯುಕೆಪಿ ಮೂರನೇ ಹಂತದ ಅನುಷ್ಠಾನದ ಮೌಲ್ಯ ₹17 ಸಾವಿರ ಕೋಟಿ ಇತ್ತು. ಆದರೆ, ಹೊಸ ಭೂಸ್ವಾಧೀನ ಕಾಯ್ದೆ ಜಾರಿಯಾದಾಗ 2016ರಲ್ಲಿ ಇಡೀ ಯೋಜನೆಯ ವೆಚ್ಚ ₹ 54 ಸಾವಿರ ಕೋಟಿಗೆ ಏರಿತು. ಆದರೆ, ಬಿಜೆಪಿ ಸರ್ಕಾರವು ಕೊನೆ ಹಂತದಲ್ಲಿ ಜಾರಿಗೆ ತಂದ ಭೂಮಿಯ ಮೌಲ್ಯ ಹೆಚ್ಚಿದ್ದರಿಂದ ಈಗ ಯೋಜನಾ ವೆಚ್ಚ ಕನಿಷ್ಠ ₹78 ಸಾವಿರ ಕೋಟಿಗೆ ಏರಲಿದೆ. 

ಸುಪ್ರಿಂಕೋರ್ಟ್ ನಲ್ಲಿ ಕೃಷ್ಣೆಯ ಜಲವಿವಾದ ಪೂರ್ಣಗೊಳಿಸಿ, ಕೃಷ್ಣಾ ನದಿ ನೀರಿನ ಬ್ರಿಜೇಶ್ ಮಿಶ್ರಾ ನೇತೃತ್ವದ ಎರಡನೇ ಪ್ರಾಧಿಕಾರ ನೀಡಿರುವ ಆದೇಶವನ್ನು ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಮಾಡಿಸಬೇಕು, ಅತ್ತ ಯಾವುದೇ ಸರ್ಕಾರಗಳು ವಿಶೇಷ ಪ್ರಯತ್ನ ಮಾಡಿಲ್ಲ. ಇದರಿಂದಾಗಿ ಯುಕೆಪಿ-3 ನೇ ಹಂತ ಆರಂಭಿಸಲು ಕಾನೂನಿನ ತೊಡಕು ಉಂಟಾಗಿದೆ. ಗೆಜೆಟ್ ನೋಟಿಫಿಕೇಶನ್ ಆದರೆ ಎಲ್ಲ ಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣ ಮಧ್ಯದ ನೀರಿನ ಹಂಚಿಕೆಯ ಸಮಸ್ಯೆಯ ಸಲುವಾಗಿ ಸುಪ್ರಿಂಕೋರ್ಟ್ ತೀರ್ಪು ಬಾಕಿ ಇದೆ. ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಇಚ್ಛಾಶಕ್ತಿ ವ್ಯಕ್ತಪಡಿಸಬೇಕಿದೆ.

ಭೂಸ್ವಾಧೀನವೇ ದೊಡ್ಡ ತೊಡಕು

ಯುಕೆಪಿ-3 ಅನುಷ್ಠಾನಗೊಳಿಸಲು ಮುಖ್ಯ ತೊಡಕು ಭೂಸ್ವಾಧೀನ. ಇದು ಯಾವುದೇ ಸರ್ಕಾರವಿರಲಿ ಕಬ್ಬಿಣದ ಕಡಲೆಯೆ. 20 ಗ್ರಾಮಗಳು ಹಾಗೂ ಸುಮಾರು 75,563 ಎಕರೆಯಷ್ಟು ಪ್ರದೇಶ ಜಲಾವೃತಗೊಳ್ಳುತ್ತದೆ. ಇನ್ನೂ ಕಾಲುವೆಗಳ, ಪುನರ್ವಸತಿ ಕೇಂದ್ರಗಳ ನಿರ್ಮಾಣಕ್ಕಾಗಿ ಇನ್ನೂ 57 ಸಾವಿರ ಎಕರೆಯಷ್ಟು ಭೂಮಿ ಅಗತ್ಯ. ಒಟ್ಟಾರೇ ಭೂಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನು 1,33,867 ಎಕರೆ. ಅದಕ್ಕಾಗಿ ಹೊಸ ಭೂಸ್ವಾಧೀನ ಕಾಯ್ದೆಯ ಪ್ರಕಾರ ಗೈಡ್‌ ಲೈನ್ಸ್ ವ್ಯಾಲ್ಯೂ (ಸಬ್ ರಿಜಿಸ್ಟ್ರಾರ್ ನಿಗದಿಪಡಿಸಿದ ದರ ಮಾರ್ಗಸೂಚಿ ದರ)ನ ನಾಲ್ಕು ಪಟ್ಟು ಪರಿಹಾರ ನೀಡಬೇಕು. ಬಿಜೆಪಿ ಸರ್ಕಾರ ಅಧಿಕಾರಾವಧಿ ಕೊನೆಗೊಳ್ಳುವಾಗ ಈ ಗೈಡ್ ಲೈನ್ಸ್ ವ್ಯಾಲ್ಯೂ (ಮಾರ್ಗಸೂಚಿ ದರ) ಅನ್ನು ಖುಷ್ಕಿ ಜಮೀಗೆ ಎಕರೆಗೆ ₹ 5 ಲಕ್ಷ, ನೀರಾವರಿಗೆ ಎಕರೆಗೆ ₹ 6 ಲಕ್ಷ  ನಿಗದಿಪಡಿಸಿದೆ. ಇದರ ನಾಲ್ಕು ಪಟ್ಟು ಅಂದರೆ ಖುಷ್ಕಿಗೆ ₹ 20 ಲಕ್ಷ, ನೀರಾವರಿಗೆ ₹ 24 ಲಕ್ಷ ಕನಿಷ್ಠ ಪರಿಹಾರ ನೀಡಬೇಕಿದೆ. ಅಷ್ಟು ಬೃಹತ್ ಪ್ರಮಾಣದಲ್ಲಿ ಪರಿಹಾರ ನೀಡುವುದು ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದ ಮಾತು. ಹೀಗಾಗಿ ಇದು ಅನುಷ್ಠಾನಗೊಳ್ಳುವುದು ಕಷ್ಟಕರ.

ಬಿಜೆಪಿ ಸರ್ಕಾರದಲ್ಲಿ ಯುಕೆಪಿಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಪ್ರಯತ್ನ ಮಾಡುತ್ತಿರುವುದಾಗಿ ಹೇಳಲಾಗಿತ್ತು. ಆದರೆ, ಗೆಜೆಟ್ ನೋಟಿಫಿಕೇಶನ್ ಆಗದ ಕಾರಣ ಹಾಗೂ ವಿವಾದದಲ್ಲಿರುವುದರಿಂದ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಬರುವುದಿಲ್ಲ. ರಾಷ್ಟ್ರೀಯ ಯೋಜನೆಯ ಪ್ರಸ್ತಾಪವನ್ನು ಕೈಬಿಟ್ಟು, ಕೇಂದ್ರ ಜಲ ಶಕ್ತಿ ಇಲಾಖೆಯಿಂದ (ಪ್ರಧಾನಮಂತ್ರಿ ಕೃಷಿ ಸಿಂಚನ್ ಯೋಜನೆಯ ಎಐಬಿಪಿ ಅನುದಾನ ) ಹೆಚ್ಚಿನ ಅನುದಾನಕ್ಕಾಗಿ ಯೋಜನಾ ವರದಿ ತಯಾರಿಸಿ, ಅದರ ಅನುಮೋದನೆಗಾಗಿಯೇ ನವದೆಹಲಿಗೆ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸುವ ಅಗತ್ಯ ಇದೆ ಎಂದು ನೀರಾವರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೃಷ್ಣೆಗೆ ಬಾಗಿನ ಅರ್ಪಿಸಲು ಸೆ.2ರಂದು ಆಲಮಟ್ಟಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಅವಳಿ ಜಿಲ್ಲೆಯ ಸಚಿವರು, ಶಾಸಕರು ಯುಕೆಪಿ ಅನುಷ್ಠಾನಕ್ಕೆ ‘ಗ್ಯಾರಂಟಿ’ ನೀಡುವುದೇ ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT