ಮಂಗಳವಾರ, ಅಕ್ಟೋಬರ್ 27, 2020
26 °C
ರಾಜ್ಯಮಟ್ಟದ ವೆಬಿನಾರ್‌ನಲ್ಲಿ ಅಂಕಣಕಾರ ಎ.ನಾರಾಯಣ ಕರೆ

ಉದ್ಯೋಗಾಕಾಂಕ್ಷಿ ವಿರೋಧಿ ಎನ್‌ಆರ್‌ಎ ಧಿಕ್ಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಆರ್ಥಿಕತೆ ಕುಸಿತ ಹಾಗೂ ಕೊರೊನಾದಂತ ಸಂದಿಗ್ಧ ಪರಿಸ್ಥಿತಿಯಲ್ಲಿ ₹1,600 ಕೋಟಿ ವೆಚ್ಚ ಮಾಡಿ ರಾಷ್ಟ್ರೀಯ ನೇಮಕಾತಿ ಏಜೆನ್ಸಿ (ಎನ್‌.ಆರ್.ಎ) ರಚಿಸುವ ಅಗತ್ಯವೇನಿತ್ತು? ಎಂದು ಅಂಕಣಕಾರ ಎ.ನಾರಾಯಣ ಪ್ರಶ್ನಿಸಿದರು.

ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಒ) ರಾಜ್ಯ ಸಮಿತಿಯಿಂದ ‘ಉದ್ಯೋಗಾಕಾಂಕ್ಷಿ ವಿರೋಧಿ ರಾಷ್ಟ್ರೀಯ ನೇಮಕಾತಿ ಏಜೆನ್ಸಿ(ಎನ್‌ಆರ್‌ಎ) ಧಿಕ್ಕರಿಸಿ’ ಕುರಿತು ಫೇಸ್ ಬುಕ್‍ನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ಇಂದು ಎಲ್ಲ ಕ್ಷೇತ್ರದಲ್ಲಿ ಗುತ್ತಿಗೆ ಪದ್ಧತಿಯನ್ನು ತರಲಾಗುತ್ತಿದೆ. ಮೊದಲು ಖಾಸಗಿ ಸಂಸ್ಥೆಗಳಲ್ಲಿ ಇದ್ದ ಗುತ್ತಿಗೆ ಪದ್ಧತಿ ಇಂದು ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ವ್ಯಾಪಕವಾಗಿ ಜಾರಿಯಲ್ಲಿದೆ. ಇದರ ಸಾಮಾಜಿಕ, ಆರ್ಥಿಕ ಪರಿಣಾಮವೇನು? ಹೊಸ ಉದ್ಯೋಗದ ಸೃಷ್ಟಿಯ ಮಾತಿರಲಿ ಇರುವ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಜನರಿದ್ದಾರೆ ಎಂದರು.

ನಿರುದ್ಯೋಗ ದೇಶದಲ್ಲಿ ಕ್ಷೋಭೆ ಉಂಟು ಮಾಡಲಿದೆ. ಯುವಜನರು ಉದ್ಯೋಗದ ಹಕ್ಕಿಗಾಗಿ ಆಗ್ರಹಿಸಿ ಇಂತಹ ನೀತಿಗಳ ವಿರುದ್ಧ ಹೋರಾಡಲು ಮುಂದಾಗಬೇಕು ಎಂದರು.

ಕೆ.ಸಿ.ರಘು ಮಾತನಾಡಿ,  ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಪೂರ್ಣಕಾಲಿಕ ಉದ್ಯೋಗಗಳು ಕಡಿತಗೊಂಡು ದಿನಗೂಲಿ ನೌಕರರು, ಗುತ್ತಿಗೆ ನೌಕರರ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ನಮ್ಮ ದೇಶದಲ್ಲಿ ಉದ್ಯೋಗ-ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಸರಿಯಾದ ವ್ಯಾಖ್ಯಾನವೇ ಇಲ್ಲ ಎಂದರು.

15 ರಿಂದ 29 ವರ್ಷ ವಯಸ್ಸಿನ ಯುವಜನರಲ್ಲಿ ಅತೀ ಹೆಚ್ಚು ನಿರುದ್ಯೋಗವಿದೆ. ದೇಶ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಸುಮಾರು 1.3 ಲಕ್ಷಕ್ಕೂ ಅಧಿಕ ಹುದ್ದೆಗಳು ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಇವೆ ಎಂದು ಹೇಳಿದರು.

ಉದ್ಯೋಗ ಸೃಷ್ಟಿಸುವ ಕ್ಷೇತ್ರವಾದ ರೈಲ್ವೆ ಖಾಸಗೀಕರಣಗೊಳ್ಳುತ್ತಿದೆ. ಮತ್ತೊಂದೆಡೆ ಭದ್ರತೆ ಇರುವ ಉದ್ಯೋಗಗಳು ಕಡಿಮೆಯಾಗುತ್ತಿವೆ. ಅನಿಶ್ಚಿತತೆ, ಅಭದ್ರತೆಯಿಂದ ಕೂಡಿರುವ ಉದ್ಯೋಗಗಳು ಜಾಸ್ತಿ ಆಗುತ್ತಿವೆ ಎಂದರು.

25 ಕೋಟಿ ಯುವಜನರಿಗೆ ಒಂದೇ ಸಾರಿಗೆ ಪರೀಕ್ಷೆ ನಡೆಸಿ, ಆ ಮೂಲಕ ಮೂಲಕ ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಸರ್ಕಾರದ ಉವಾಚ ಹಾಸ್ಯಾಸ್ಪದ ಎಂದರು.

ಇಂದು ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಗೊಳಿಸುತ್ತಿರುವಾಗ ಎನ್.ಆರ್.ಎ ಮೂಲಕ ಪರೀಕ್ಷೆಗಳನ್ನು ನಡೆಸಿ ಉದ್ಯೋಗವನ್ನು ಯಾರಿಗೆ ಕೊಡುತ್ತಾರೆ? ಮತ್ತೊಂದೆಡೆ ದೇಶದ 25 ಕೋಟಿ ಜನರಿಗೆ ಒಂದೇ ಬಾರಿ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸುವ ಸೌಲಭ್ಯವೂ ನಮ್ಮ ದೇಶದಲ್ಲಿ ಇಲ್ಲ. ಇರುವ ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳದಿರುವಾಗ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಉದ್ಯೋಗ ಸಿಗುವ ಗ್ಯಾರೆಂಟಿ ಏನು? ಹೀಗಾಗಿ ಸರ್ಕಾರದ ಈ ಹೊಸ ಯೋಜನೆಯ ಹುನ್ನಾರವನ್ನು ಯುವಜನತೆ ಅರ್ಥೈಸಿಕೊಳ್ಳಬೇಕು ಎಂದರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಡಾ.ಜಿ.ಎಸ್.ಕುಮಾರ್‌ ಮಾತನಾಡಿ, ಇಂದಿನ ನಿರುದ್ಯೋಗ, ಜಿಡಿಪಿ ಕುಸಿತ, ಬೆಲೆ ಏರಿಕೆ, ಬಡತನಕ್ಕೆ ಕೊರೊನಾ ಒಂದೇ ಕಾರಣ ಎಂದು ಹಲವು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ 2018 ರಿಂದಲೇ ಇಡೀ ದೇಶ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿರುವುದನ್ನು ಮುಚ್ಚಿಡಲಾಗುತ್ತಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು