ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಮುಂಗಾರು ಬಿತ್ತನೆ; ರೈತರ ಭರದ ಸಿದ್ಧತೆ

ಜಿಲ್ಲೆಯಲ್ಲಿ 7,11,370 ಹೆಕ್ಟೇರ್‌ ಬಿತ್ತನೆ ಗುರಿ, ಬೀಜ–ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಸಜ್ಜು
ಆನಂದ ರಾಠೋಡ
Published 2 ಜೂನ್ 2024, 5:31 IST
Last Updated 2 ಜೂನ್ 2024, 5:31 IST
ಅಕ್ಷರ ಗಾತ್ರ

ವಿಜಯಪುರ: ಜೂನ್‌ ಸಾತ್‌ಗೆ ಕೆಲ ದಿನಗಳಷ್ಟೆ ಬಾಕಿಯಿದ್ದು, ಬೇಸಿಗೆಯ ಬಿಸಿಲಿಗೆ ತತ್ತರಿಸಿದ್ದ ರೈತರು, ಎಲ್ಲವನ್ನು ಮರೆತು ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮುಂದೆಯೂ ವರ್ಷಧಾರೆ ಸುರಿಯುವ ಭರವಸೆಯೊಂದಿಗೆ ಜಿಲ್ಲೆಯ ರೈತ ಸಮೂಹ ಮುಂಗಾರು ಬಿತ್ತನೆಗೆ ಸಿದ್ಧತೆ ಆರಂಭಿಸಿದ್ದಾರೆ.

ಮುಂಗಾರು ಪೂರ್ವ ಮಳೆ, ಮಳೆಗಾಲಕ್ಕೆ ಶುಭ ಸೂಚನೆಯ ಮುನ್ನುಡಿ ಬರೆದಿದೆ. ಜ.1ರಿಂದ ಮೇ 27ರವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 5.57 ಸೆಂ.ಮೀ ಮಳೆ ಸುರಿಯಬೇಕಿತ್ತು. ಆದರೆ, 8.49 ಸೆಂ.ಮೀ ಮಳೆ ಸುರಿದಿದೆ. ವಾಡಿಕೆಗಿಂತ ಶೇ 52.4 ರಷ್ಟು ಅಧಿಕ ಮಳೆ ಆಗಿರುವುದು ರೈತರಲ್ಲಿ ಮಳೆ ಬರುವ ನಿರೀಕ್ಷೆ ಹೆಚ್ಚಿಸಿದೆ. 

ಮುಂಗಾರು ಬಿತ್ತನೆಗೆ ಅಗತ್ಯವಿರುವ ಬೀಜ, ರಸಗೊಬ್ಬರ ಸಂಗ್ರಹಣೆಗೆ ರೈತಾಪಿ ವರ್ಗ ಮುಂದಾಗಿದೆ. ಕೃಷಿ ಇಲಾಖೆಯು ಬಿತ್ತನೆಗೆ ಬೇಕಾದ ಅಗತ್ಯ ಬೀಜ ಹಾಗೂ ಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳುತ್ತಿದೆ.

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 7,11,370 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು, ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಅದರಲ್ಲಿ ತೊಗರಿ ಬಿತ್ತನೆ ಗುರಿಯೇ 4,15,800 ಹೆಕ್ಟೇರ್‌ ಪ್ರದೇಶ ಹೊಂದಿದೆ. 

ಮುಂಗಾರು ಹಂಗಾಮಿಗೆ ಅಗತ್ಯವಾದಷ್ಟು ಬಿತ್ತನೆ ಬೀಜ ಪೂರೈಸಲು ಕೃಷಿ ಇಲಾಖೆ ಅಣಿಯಾಗಿದೆ. ಜಿಲ್ಲೆಯಲ್ಲಿ 12,961 ಕ್ವಿಂಟಲ್ ಬಿತ್ತನೆ ಬೀಜ ಬೇಡಿಕೆಯಿದ್ದು, ಒಟ್ಟು 5,741 ಕ್ವಿಂಟಲ್‌ ದಾಸ್ತಾನು ಮಾಡಲಾಗಿದೆ. ಅದರಲ್ಲೂ ತೊಗರಿ ಬೀಜದ ಬೇಡಿಕೆ 8,900 ಇದ್ದು, 4,740 ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಏಪ್ರಿಲ್‌ ಹಾಗೂ ಮೇನಲ್ಲಿ ಒಟ್ಟು 30,691 ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಡಿಕೆ ಇರುತ್ತದೆ. ಎಪ್ರಿಲ್‌ 01 ರಿಂದ ಮೇ 21ರ ವರೆಗೆ 37,377 ಮೆಟ್ರಿಕ್‌ ಟನ್‌ ಸರಬರಾಜು ಆಗಿದೆ. ಜೂನ್‌ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಒಟ್ಟು 1 ಲಕ್ಷ ಮೆಟ್ರಿಕ್‌ ಟನ್‌ ಬೇಡಿಕೆಯಿದ್ದು, ಈಗಾಗಲೇ 91,969 ಮೆಟ್ರಿಕ್‌ ಟನ್‌ ದಾಸ್ತಾನು ಮಾಡಲಾಗಿದೆ, ಅತಿ ಹೆಚ್ಚು ಬೇಡಿಕೆಯಿರುವ ಡಿಎಪಿ ರಸಗೊಬ್ಬರ 9,000 ಮೆಟ್ರಿಕ್‌ ಟನ್‌ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತೊಗರಿ; ಸಾಲುಗಳ ಅಂತರವಿರಲಿ

‘ಜಿಲ್ಲೆಯಲ್ಲಿ ಮುಂಗಾರು ಪ್ರಮುಖ ಬೆಳೆಯಾದ ತೊಗರಿಯನ್ನು 415 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುವ ಗುರಿ ಇದ್ದು ತೊಗರಿ ಬೆಳೆಯಲ್ಲಿ ಸಾಲುಗಳ ಅಂತರ 4 ರಿಂದ 6 ಅಡಿ ಕಾಯ್ದುಕೊಂಡು ಸಸಿಯಿಂದ ಸಸಿಗೆ 1 ಅಡಿ ಅಂತರದಲ್ಲಿ ಬಿತ್ತನೆ ಮಾಡುವುದು ಸೂಕ್ತ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಂ ಸಲಹೆ ನೀಡಿದರು.

‘ಬೆಳೆಯ ಬೆಳವಣಿಗೆ ಹಂತದಲ್ಲಿ (ಬೆಳೆ ಹಂತ 45 ರಿಂದ 50 ದಿನಗಳಿಗೆ) ತಪ್ಪದೇ ಕುಡಿ ಚಿವುಟಬೇಕು. ಈ ರೀತಿ ಎರಡು ಬಾರಿ ಮಾಡುವುದರಿಂದ ತೊಗರಿ ಬೆಳೆಯಲ್ಲಿ ಕಾಳು ಕಟ್ಟುವುದು ಹಾಗೂ ಇಳುವರಿ ಹೆಚ್ಚಾಗಲಿದೆ’. 

‘ಇತ್ತೀಚಿನ ದಿನಗಳಲ್ಲಿ ಪ್ರಚಲಿತ ಇರುವ ಪಲ್ಸ್ ಮ್ಯಾಜಿಕ್ (ಪಲ್ಸ್‌ ಮ್ಯಾಜಿಕ್‌) ಎಂಬ ಲಘು ಪೋಷಕಾಂಶ ಮಿಶ್ರಣವನ್ನು ತೊಗರಿ ಬೆಳೆಯಲ್ಲಿ ಉಪಯೋಗಿಸುವುದರಿಂದ ಬೆಳೆ ಬೆಳವಣಿಗೆಯನ್ನು ಹೆಚ್ಚಿಸಿ ಹೂವು ಮತ್ತು ಕಾಯಿ ಉದುರುವಿಕೆಯನ್ನು ತಡೆಗಟ್ಟಿ ಇಳುವರಿ ಹೆಚ್ಚು ಪಡೆಯಬಹುದು’ ಎಂದು ಸಲಹೆ ನೀಡಿದ್ದಾರೆ.

ಕಳೆದ ವರ್ಷ ಬರಕಗಾಲದಿಂದ ಅನೇಕ ಸಂಕಷ್ಟ ಎದುರಿಸಿದ್ದೇವೆ, ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಿಂದ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
–ಜಯರಾಮ ಲಮಾಣಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT