ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ಬಿಜೆಪಿ ಸರ್ಕಾರ; ಕಾರಜೋಳ ಪಾಪದ ಸಚಿವ- ಶಾಸಕ ಎಂ.ಬಿ.ಪಾಟೀಲ

ಜಲ ಸಂಪನ್ಮೂಲ ಸಚಿವ ಕಾರಜೋಳಗೆ ತಿರುಗೇಟು
Last Updated 29 ಸೆಪ್ಟೆಂಬರ್ 2021, 11:18 IST
ಅಕ್ಷರ ಗಾತ್ರ

ವಿಜಯಪುರ: ‘ಕೃಷ್ಣಾ ಮೇಲ್ದಂಡೆ ಯೋಜನೆ ಕಾಂಗ್ರೆಸ್‌ ಪಾಪದ ಕೂಸು’ ಎಂಬ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ‘ಅನೈತಿಕ ಬಿಜೆಪಿ ರಾಜ್ಯ ಸರ್ಕಾರದಲ್ಲಿ ಕಾರಜೋಳ ಪಾಪದ ಸಚಿವರಾಗಿದ್ದಾರೆ’ ಎಂದುತಿರುಗೇಟು ನೀಡಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರಜೋಳ ಅವರು ಬಾಯಿ ಚಪಲಕ್ಕೆ ಈ ರೀತಿ ಅಸಂಬದ್ಧ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ’ ಎಂದರು.

‘ವಯಸ್ಸಿನಲ್ಲಿ ಹಿರಿಯರು, ಅನುಭವಿ ರಾಜಕಾರಣಿ ಹಾಗೂ ಜವಾಬ್ದಾರಿಯುತ ಸಚಿವರಾಗಿದ್ದುಕೊಂಡು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಇಂತಹ ಹೇಳಿಕೆ ನೀಡುವುದು ಖಂಡನೀಯ’ ಎಂದರು.

‘ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡುವಾಗ ಲಾಲ್‌ ಬಹದ್ದೂರ್‌ ಶಾಸ್ತ್ರಿ, ಇಂದಿರಾಗಾಂಧಿ ಅವರ ಹೆಸರನ್ನು ಕಾರಜೋಳ ಪ್ರಸ್ತಾಪಿಸಿದ್ದಾರೆ. 1964ರಲ್ಲಿ ಶಾಸ್ತ್ರಿ ಅವರು ಆಲಮಟ್ಟಿಗೆ ಅಡಿಗಲ್ಲು ಹಾಕದಿದ್ದರೆ ನಾನಾಗಲಿ, ನೀವಾಗಲಿ ಇಂದು ನೀರಾವರಿ ಸಚಿವರಾಗುವ ಪ್ರಶ್ನೆಯೇ ಬರುತ್ತಿರಲಿಲ್ಲ. ಆಲಮಟ್ಟಿ, ತುಂಗಭದ್ರಾ, ಹಿಡಕಲ್‌ ಸೇರಿದಂತೆ ಈ ದೇಶದ ಎಲ್ಲ ಜಲಾಶಯಗಳು ಕಾಂಗ್ರೆಸ್‌ ಕೊಡುಗೆಯಾಗಿವೆ’ ಎಂದು ಹೇಳಿದರು.

‘ನೀರಾವರಿ ಸೌಲಭ್ಯಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಜನ ಮಾಜಿ ಪ್ರಧಾನಿ ಇಂದಿರಾಗಾಂಧಿ, ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರನ್ನು ಬಂಗಾರದಲ್ಲಿ ತೂಗಿದ್ದರು ಎಂದು ಕಾರಜೋಳ ಹೇಳಿದ್ದಾರೆ. ಆದರೆ, ಬಂಗಾರದಲ್ಲಿ ತೂಗಿದ್ದು ನೀರಾವರಿಗಾಗಿ ಅಲ್ಲ, ಯುದ್ಧದ ಸಲುವಾಗಿ ಧನಸಹಾಯ ಮಾಡಿದ್ದರು ಎಂಬ ಇತಿಹಾಸ ಗೊತ್ತಿದ್ದರೂ ತಿರುಚಿ ಹೇಳಿಕೆ ನೀಡುವುದು ತಮ್ಮ ಹಿರಿತನಕ್ಕೆ ಶೋಭೆ ತರುವುದಿಲ್ಲ’ ಎಂದರು.

‘ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಕೃಷ್ಣಾ ನ್ಯಾಯಾಧಿಕರಣದ ಗೆಜೆಟ್‌ ನೋಟಿಫಿಕೇಶನ್‌ಗೆ ಕಾಯದೇ, ಯುಕೆಪಿ ಮೂರನೇ ಹಂತದ ಜಾಕ್‌ವೆಲ್ಸ್‌, ಹೆಡ್‌ ವರ್ಕ್‌, ನೆಟ್‌ವರ್ಕ್‌, ವಿದ್ಯುತ್‌ ಸ್ಥಾವರ, ಸುಮಾರು 1 ಸಾವಿರ ಕಿ.ಮೀ.ಕೆನಾಲ್‌ ನಿರ್ಮಿಸಲಾಗಿದೆ. ಗೆಜೆಟ್‌ ನೋಟಿಫಿಕೇಶನ್‌ ನೆಪ ಹೇಳದೆ ಕೆರೆಗಳಿಗೆ, ಹಳ್ಳಗಳಿಗೆ ನೀರು ಹರಿಸಲಾಗಿದೆ. ಅಂತರ್ಜಲ ಹೆಚ್ಚಾಗಿದೆ. ಉತ್ತಮ ಬೆಳೆ ಬರುತ್ತಿದೆ. ₹2 ಲಕ್ಷ ಇದ್ದ ಭೂಮಿ ಬೆಲೆ ಈಗ ₹ 20 ಲಕ್ಷಕ್ಕೆ ಏರಿದೆ.ಜಿಲ್ಲೆಯ ಜನ ಒಂದು ಹಂತದಲ್ಲಿ ಸಂತೋಷದಿಂದ ಇದ್ದಾರೆ. ಗೆಜೆಟ್‌ ನೋಟಿಫಿಕೇಶನ್‌ ಆಗಿಲ್ಲ ಎಂದು ತಾಂತ್ರಿಕ ನೆಪ ಹೇಳಿದ್ದರೇ ಈ ಬದಲಾವಣೆ ಕಾಣಲು ಸಾಧ್ಯವಾಗುತ್ತಿರಲಿಲ್ಲ’ ಎಂಬುದನ್ನು ಕಾರಜೋಳ ಅರ್ಥ ಮಾಡಿಕೊಳ್ಳಬೇಕು ಎಂದರು.

ಸ್ಥಳಾಂತರಕ್ಕೆ ಸವಾಲು:‘ಮುಧೋಳ ತಾಲ್ಲೂಕಿನ ಮಾಚಕನೂರು, ಅಳಗುಂಡಿಯಲ್ಲಿ ಆಲಮಟ್ಟಿ ಹಿನ್ನೀರಿನಿಂದ ಮನೆಗಳ ಒಳಗೆ ಹಾವು, ಚೇಳು, ಕಪ್ಪೆ ಬರುತ್ತಿವೆ. ತಕ್ಷಣ ಸ್ಥಳಾಂತರ ಮಾಡಬೇಕು ಎಂದು ಈ ಹಿಂದೆ ಕಾರಜೋಳ ಆಗ್ರಹಿಸಿದ್ದರು. ಇದೀಗ ಈ ಗ್ರಾಮಗಳ ಮನೆಗಳಿಗೆ ಹಾವು, ಹೇಳು, ಕಪ್ಪೆ ಹೋಗುತ್ತಿಲ್ಲವೇ’ ಎಂದು ವ್ಯಂಗ್ಯವಾಡಿದ ಅವರು, ಕನಿಷ್ಠ ಕಾಳಜಿ ಇದ್ದರೆ ಹಾವು, ಚೇಳು ಇರುವ ನಿಮ್ಮ ಕ್ಷೇತ್ರದ ಗ್ರಾಮಗಳನ್ನಾದರೂ ಸ್ಥಳಾಂತರ ಮಾಡಿ ತೋರಿಸಿ’ ಎಂದು ಸವಾಲು ಹಾಕಿದರು.

‘ನುಣುಚಿಕೊಳ್ಳಲು ಕಾರಜೋಳ ಯತ್ನ’

ವಿಜಯಪುರ: ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಸದನದ ಒಳಗೆ, ಹೊರಗೆ ಕಾರಜೋಳ ಅವರು ಕಾಳಜಿಯಿಂದ ಕಣ್ಣೀರು ಸುರಿಸುತ್ತಾ ಆಡಿದ್ದ ಮಾತುಗಳ ಅನುಷ್ಠಾನಕ್ಕೆ ಯಾವುದೇ ನೆಪ ಹೇಳದೇ ತಮ್ಮ ಆಡಳಿತಾವಧಿಯಲ್ಲಿ ಆದ್ಯತೆ ನೀಡಬೇಕು‘ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆ, ಸಂತ್ರಸ್ತರ ಬಗ್ಗೆ ಕಾರಜೋಳ ಅವರು 2013–18ರ ವರೆಗೆ ಸದಸನದ ಹೊರಗೆ, ಒಳಗೆ ಬಹಳ ಕಾಳಜಿಯಿಂದ ಮಾತನಾಡಿದ್ದಾರೆ. ಮುಳುಗಡೆಯಾಗುವ ಭೂಮಿಗೆ ₹ 40 ಲಕ್ಷ ಪರಿಹಾರ ನೀಡಬೇಕು. ರೈತರ ಏಕರೂಪದ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದರು. ಇದೀಗ ಅಧಿಕಾರ ನಿಮ್ಮ ಬಳಿಯೇ ಇರುವುದರಿಂದ ಸಂತ್ರಸ್ತರ ಬೇಡಿಕೆ ಈಡೇರಿಸಲು ಆದ್ಯತೆ ನೀಡಬೇಕು. ಅದನ್ನು ಬಿಟ್ಟು ಕೇವಲ 18 ತಿಂಗಳು ಮಾತ್ರ ಅಧಿಕಾರವಧಿ ಇದೆ ಎಂದು ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಯತ್ನಿಸಬಾರದು’ ಎಂದರು.

2010ರಲ್ಲೇ ಕೃಷ್ಣಾ ನ್ಯಾಯಾಧಿಕರಣ ತೀರ್ಪು ಬಂದಿದೆ. ಆದರೆ, ಇದುವರೆಗೂ ಗೆಜೆಟ್‌ ನೋಟಿಫಿಕೇಶನ್‌ ಆಗಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದೆ. ಆದರೂ ಗೆಜೆಟ್‌ ನೋಟಿಫಿಕೇಶನ್‌ ಏಕೆ ಮಾಡಿಲ್ಲ’ ಎಂದು ಅವರು ಕಾರಜೋಳ ಅವರನ್ನು ಪ್ರಶ್ನಿಸಿದರು.

’ಆಲಮಟ್ಟಿಗೆ ಕಚೇರಿ; ಉಪಯೋಗವಾಗದು’

ವಿಜಯಪುರ: ಬೆಂಗಳೂರಿನಲ್ಲಿರುವ ಕೆಬಿಜಿಎನ್‌ಎಲ್ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರ ಮಾಡುವುದರಿಂದ ಹೆಚ್ಚೇನು ಪ್ರಯೋಜನವಾಗದು, ಭೂಸ್ವಾಧೀನ, ಪುನರ್ವಸತಿಗೆ ಇದರಿಂದ ನೆರವಾಗದು. ಒಂದಷ್ಟು ವೇಗ ಸಿಗಬಹುದಷ್ಟೇ’ ಎಂದು ಶಾಸಕ ಎಂ.ಬಿ.ಪಾಟೀಲ ಅಭಿಪ್ರಾಯಪಟ್ಟರು.

‘ಮುಳುಗಡೆಯಾಗುವ 20 ಗ್ರಾಮಗಳ ಕಟ್ಟಡ, ಜಮೀನು ಸ್ವಾಧೀನಕ್ಕೆ ಪೂರಕವಾಗಿ ₹2500 ಕೋಟಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿರುವುದು ಸ್ವಾಗತಾರ್ಹ’ ಎಂದರು.

***

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಏನು ಮಾಡಬೇಕು ಎಂಬುದನ್ನು ಮಾಡಿ ತೋರಿಸಿದ್ದೇನೆ. ಈಗ ನಿಮಗೆ ಅವಕಾಶ ಸಿಕ್ಕಿದೆ. ವಯಸ್ಸಾಗಿರುವುದರಿಂದ ಮುಂದೆ ಸಿಗುವ ಸಾಧ್ಯತೆ ಇಲ್ಲ. ಸಿಕ್ಕಿರುವ ಅವಕಾಶದಲ್ಲಿ ಮಾಡಿ ತೋರಿಸಿ

–ಎಂ.ಬಿ.ಪಾಟೀಲ, ಮಾಜಿ ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT