ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಜಲ ವಿವಾದ: ಶೀಘ್ರ ಗೆಜೆಟ್‌ ನೋಟಿಫಿಕೇಶನ್‌- ಬಸವರಾಜ ಬೊಮ್ಮಾಯಿ

ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಗೆ ಸಿ.ಎಂ.ಬೊಮ್ಮಾಯಿ ಶಂಕುಸ್ಥಾಪನೆ
Last Updated 26 ಏಪ್ರಿಲ್ 2022, 14:11 IST
ಅಕ್ಷರ ಗಾತ್ರ

ವಿಜಯಪುರ: ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ -2 (ನ್ಯಾಯಮೂರ್ತಿ ಬ್ರಿಜೇಶ್ ಕುಮಾರ ನೇತೃತ್ವದ) ರ ತೀರ್ಪಿನ‌ ಗೆಜೆಟ್ ನೋಟಿಫಿಕೇಶನ್ ಇನ್ನು ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರ ಹೊರಡಿಸುವ ನಿರೀಕ್ಷೆ ಇದೆ. ನೋಟಿಫಿಕೇಶನ್ ಆದ ತಕ್ಷಣ 21 ಗ್ರಾಮಗಳ ಸ್ಥಳಾಂತರ, ಪುನರ್ ನಿರ್ಮಾಣ, ಪುನರ್ವಸತಿ, ಭೂಸ್ವಾಧೀನಕ್ಕೆ ಎಷ್ಟೇ ಹಣ ಖರ್ಚಾದರೂ ಒದಗಿಸಲು ಬದ್ದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಕೊಡಗಾನೂರ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಮೊದಲ ಹಂತದ ಪೈಪ್ ವಿತರಣಾ ಜಾಲದ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಷ್ಠಾನಕ್ಕೆ ಹಣದ ಕೊರತೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ವಿಜಯಪುರಕ್ಕೆ ಇರುವ ಬರದ ನಾಡೆಂಬ ಹೆಸರು ಅಳಿಸಿ ಜಲದ ನಾಡು ಮಾಡಲು ಶ್ರಮಿಸುತ್ತೇನೆ ಎಂದರು.

ಕೃಷ್ಣಾ ‘ಎ’ ಮತ್ತು ‘ಬಿ’ ಸ್ಕೀಮ್‌ನಲ್ಲಿ ವಿಜಯಪುರ ಜಿಲ್ಲೆ ಒಳಪಟ್ಟಿರಿಲಿಲ್ಲ. ನೆರೆಯ ಆಂಧ್ರ, ಮಹಾರಾಷ್ಟ್ರದಲ್ಲಿ ಇರದ ‘ಎ’ ಮತ್ತು ‘ಬಿ’ ಸ್ಕೀಮ್‌ಗಳು ನಮ್ಮಲ್ಲಿ ಮಾತ್ರವಿತ್ತು. ‘ಎ’ ಮತ್ತು‘ಬಿ’ ಸ್ಕೀಮ್‌ ಎಂಬ ಹೆಸರಲ್ಲಿ ಕಣ್ಣಿಗೆ ಮಣ್ಣೆರೆಚಿ ಮೋಸ ನಡೆದಿತ್ತು. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಇದನ್ನು ತೆಗೆದುಹಾಕಿದೆ. ವಿಜಯಪುರ ಜಿಲ್ಲೆಯನ್ನು ನೀರಾವರಿಗೆ ಒಳಪಡಿಸಲು ಮುಳವಾಡ, ಚಿಮ್ಮಲಗಿ ಮತ್ತು ಗುತ್ತಿ ಬಸವಣ್ಣ ಏತ ನೀರವಾರಿ ಯೋಜನೆ ಚಾಲನೆ ನೀಡಿದೆ ಎಂದು ಹೇಳಿದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ,ವೈಜ್ಞಾನಿಕ ರೂಪುರೇಷೆ ಇಟ್ಟುಕೊಂಡು ಉತ್ತರ ಕರ್ನಾಟಕದಲ್ಲಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದ ಬೊಮ್ಮಾಯಿ ಅವರು ನಿಜವಾದ ಭಗೀರಥ ಎಂದು ಶ್ಲಾಘಿಸಿದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಮಾತಿಗಿಂತ ಕೃತಿಗೆ ಆದ್ಯತೆ ನೀಡಿದ್ದೇನೆ ಎಂದರು.

ಹಿಂದೆ ಆಡಳಿತ ನಡೆಸಿದವರು ಡೊಂಗಿ ಪದ ಮಾತನಾಡಿ ಹೋದರು. ಕೃಷ್ಣೆಯ ನಡಿಗೆ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಕೃಷ್ಣೆಯ ಮಕ್ಕಳ ಕಣ್ಣೀರು ಒರೆಸುವುದಾಗಿ ಹೇಳಿ ರಕ್ತ ಸುರಿಯುವಂತೆ ಮಾಡಿದರು ಎಂದು ಆರೋಪಿಸಿದರು.

ಸಂಸದ ರಮೇಶ ಜಿಗಜಿಣಗಿ, ಶಾಸಕ ರಮೇಶ ಬೂಸನೂರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಕೊಡಗಾನೂರ ಗ್ರಾ.ಪಂ. ಅಧ್ಯಕ್ಷ ಬಸನಗೌಡ ಪಾಟೀಲ, ಕೃಷ್ಣಾ ಕಾಡಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಶರಣಪ್ಪ ತಳವಾರ, ಜಿಲ್ಲಾಧಿಕಾರಿ ವಿಜಯಮಹಾಂತೇಶ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಇದ್ದರು.

****

ಇಂಡಿ, ಚಡಚಣ ಭಾಗಕ್ಕೆ ನೀರೊದಗಿಸುವ ರೇವಣ ಸಿದ್ದೇಶ್ವರ ಏತನೀರಾವರಿ ಯೋಜನೆ ಅನುಷ್ಠಾನದ ಬಗ್ಗೆ ಪರಿಶೀಲಿಸಿ ಮೊದಲ ಹಂತಕ್ಕೆ ಅನುಮೋದನೆ ನೀಡಲಾಗುವುದು

–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

****

50 ಸಾವಿರ ಎಕರೆಗೆ ನೀರು ಒದಗಿಸುವ ಈ ಏತನೀರಾವರಿ ಯೋಜನೆ ಮುಂದಿನ ಸಂಕ್ರಾಂತಿಗೆ ಪೂರ್ಣಗೊಂಡು, ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇ‌ನೆ

ಗೋವಿಂದ ಕಾರಜೋಳ, ಜಲ ಸಂಪನ್ಮೂಲ ಸಚಿವ

***

ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕೇವಲ 0.7ರಷ್ಟಿದೆ. ಇದನ್ನು ಶೇ 2 ಕ್ಕೆ ಏರಿಸಲು ಜೂನ್‌ನಿಂದ ಅರಣ್ಯ ಇಲಾಖೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು

–ಉಮೇಶ ಕತ್ತಿ,ಜಿಲ್ಲಾ ಉಸ್ತುವಾರಿ ಸಚಿವ

****

ಗೋವು, ಜೋಡೆತ್ತು ಉಡುಗೊರೆ

ಮಹತ್ವಾಕಾಂಕ್ಷೆಯ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಬೊಮ್ಮಾಯಿಗೆ ಗೋವು ಮತ್ತು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರಿಗೆ ಜೋಡೆತ್ತುಗಳನ್ನು ಭಂಟನೂರ ರೈತರು ಉಡುಗೊರೆ ನೀಡಿದರು.

ರೈತರು ನೀಡಿದ ಗೋವು ಮತ್ತು ಬೆಳ್ಳಿಗದೆಯನ್ನು ಮುಖ್ಯಮಂತ್ರಿ ಅವರುಯಲಗೂರು ಆಂಜನೇಯ ದೇವಸ್ಥಾನಕ್ಕೆ ನೀಡುವುದಾಗಿ ಹೇಳಿದರು.

ಗೋಪೂಜೆ ಸಂದರ್ಭದಲ್ಲಿ ಎತ್ತು ಬೆದರಿ, ಜಗ್ಗಾಟಿತು. ಇದರಿಂದ ಮುಖ್ಯಮಂತ್ರಿ ಮತ್ತು ಇತರರರು ಕ್ಷಣ ಹೊತ್ತು ಅಂಜಿದರು.

***

ಯುಕೆಪಿ ಲೂಟಿಕೋರರಿಗೆ ಕಾಮಧೇನು

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಎಂಬುದು ಲೂಟಿ ಹೊಡೆಯುವವರಿಗೆ ಕಾಮಧೇನು, ಕಲ್ಪವೃಕ್ಷವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‌ಈ ಯೋಜನೆ ಹೆಸರಲ್ಲಿ ಹಿಂದಿನ ಸರ್ಕಾರಗಳು ಲೂಟಿ ಹೊಡೆದಿವೆ. ಇಲ್ಲಿ ಕಾರ್ಯನಿರ್ವಹಿಸಿ ಹೋದ ಎಂಜಿನಿಯರ್‌ಗಳು, ಅಧಿಕಾರಿಗಳ ಮನೆ ನೋಡಿದರೆ ಸಾಕು. ಚೈನಿ ಹೊಡೆದಿರುವುದು ಗೊತ್ತಾಗುತ್ತದೆ ಎಂದರು.

ಯುಕೆಪಿಗೆ ಈ ಬಾರಿಯ ಬಜೆಟ್‌ನಲ್ಲಿ ಕೇವಲ ₹ 5 ಸಾವಿರ ಕೋಟಿ ನೀಡಿರುವುದು ಸಾಲದು. ₹ 25 ಸಾವಿರ ಕೋಟಿ ಕೊಡಬೇಕು ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಿದರು.

ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ₹10 ಸಾವಿರ ಕೋಟಿ ಕೊಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT