ಭಾನುವಾರ, ಮೇ 22, 2022
22 °C
ವಿಧಾನ ಪರಿಷತ್‌ ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆ ದ್ವಿಸದಸ್ಯ ಕ್ಷೇತ್ರ

ವಿಜಯಪುರ: ಕಾಂಗ್ರೆಸ್‌ನ ಇಬ್ಬರು, ಬಿಜೆಪಿಯ ಒಬ್ಬರು ಕಣಕ್ಕೆ?

ಬಸವರಾಜ್‌ ಸಂಪ‍ಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ದ್ವಿಸದಸ್ಯ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಗೆ ಕೇವಲ ಮೂರೇ ದಿನ ಬಾಕಿ ಉಳಿದಿದ್ದರೂ (ಭಾನುವಾರ, ಸೋಮವಾರ ರಜೆ ಹೊರತು ಪಡಿಸಿ) ಇನ್ನೂ ಅಭ್ಯರ್ಥಿಗಳು ಯಾರೆಂಬುದು ಅಂತಿಮವಾಗಿಲ್ಲ.

ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದರೂ ಘೋಷಣೆ ಮಾಡದೇ ವಿಳಂಬ ತಂತ್ರಕ್ಕೆ ಮೊರೆ ಹೋಗಿವೆ. ಅಭ್ಯರ್ಥಿಗಳ ಹೆಸರು ಮೊದಲೇ ಪ್ರಕಟಿಸಿದರೆ ಟಿಕೆಟ್‌ ವಂಚಿತರು ಬಂಡಾಯ ಏಳಬಹುದು ಎಂಬ ಕಾರಣಕ್ಕೆ ಎಚ್ಚರಿಕೆ ಹೆಜ್ಜೆ ಇಡತೊಡಗಿವೆ. 

ಕಾಂಗ್ರೆಸ್‌ ಎಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. ಯಾರಿಗೆ ಅವಕಾಶ ನೀಡಲಿದೆ ಎಂಬುದನ್ನು ಅವಲೋಕಿಸಿ, ಜಾತಿ, ಜಿಲ್ಲೆ ಲೆಕ್ಕಾಚಾರ ಮಾಡಿದ ಬಳಿಕ ತನ್ನ ಅಭ್ಯರ್ಥಿ ಘೋಷಣೆ ಮಾಡಲು ಬಿಜೆಪಿ ಕಾದುಕುಳಿತಿದೆ. 

ಒಂದು ವೇಳೆ ಕಾಂಗ್ರೆಸ್‌ನಿಂದ ಇಬ್ಬರು, ಬಿಜೆಪಿಯಿಂದ ಒಬ್ಬರು ಕಣಕ್ಕಿಳಿದರೆ ಸ್ಪರ್ಧೆ ರೋಚಕವಾಗಲಿದೆ. 

ಕಾಂಗ್ರೆಸ್‌ನಿಂದ ಹಾಲಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಮತ್ತು ಸುನೀಲ್‌ಗೌಡ ಪಾಟೀಲ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಎರಡೂ ಸ್ಥಾನಗಳನ್ನು ತನ್ನ ತೆಕ್ಕೆಯಲ್ಲೇ ಇರಿಸಿಕೊಳ್ಳಲು ವ್ಯೂಹ ರಚಿಸಿರುವ ಕಾಂಗ್ರೆಸ್‌ ಇಬ್ಬರನ್ನೂ ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ. 

ಬಾಗಲಕೋಟೆ–ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಎರಡೂ ಕ್ಷೇತ್ರ ಗೆಲ್ಲುವ ಅವಕಾಶ ಇರುವುದರಿಂದ  ಒಬ್ಬರ ಬದಲು ಇಬ್ಬರನ್ನೂ ಕಣಕ್ಕಿಳಿಸಲು ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವರಿಷ್ಠರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯಿಂದ ಒಬ್ಬರು:

ಬಿಜೆಪಿಯಿಂದ ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಆದರೆ, ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲ ಮುಂದುವರಿದಿದೆ. 

ಬಾಗಲಕೋಟೆ ಮಾಜಿ ಶಾಸಕ ಪಿ.ಎಚ್‌.ಪೂಜಾರ, ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಇಬ್ಬರಲ್ಲಿ ಒಬ್ಬರು ಅಥವಾ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಗೂಳಪ್ಪ ಶೆಟಗಾರ ಮತ್ತು ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಸ್ಪರ್ಧೆ ಸಾಧ್ಯತೆ ದಟ್ಟವಾಗಿದೆ.

ಬಳ್ಳಾರಿ–ವಿಜಯನಗರ ಕ್ಷೇತ್ರ ಅಥವಾ ಬಾಗಲಕೋಟೆ–ವಿಜಯಪುರ ಕ್ಷೇತ್ರಗಳಲ್ಲಿ ಯಾವುದಾದರು ಒಂದು ಕಡೆ ಪಂಚಮಸಾಲಿ ಸಮಾಜದವರಿಗೆ ಟಿಕೆಟ್‌ ನೀಡಬೇಕು ಎಂಬುದು ಬಿಜೆಪಿ ಚಿಂತನೆಯಾಗಿದೆ.  

ಪಂಚಮಸಾಲಿ ಸಮಾಜಕ್ಕೆ ಟಿಕೆಟ್‌ ನೀಡಬೇಕು ಎಂಬ ಒತ್ತಡ ಹೆಚ್ಚಾಗಿರುವುದರಿಂದ ಗೂಳಪ್ಪ ಶೆಟಗಾರ ಅಥವಾ ಹನುಮಂತ ನಿರಾಣಿ ಅವರಲ್ಲಿ ಒಬ್ಬರನ್ನು ಪರಿಗಣಿಸಬೇಕು ಎಂಬ ಲೆಕ್ಕಾಚಾರ ಬಿರುಸಾಗಿದೆ. 

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆ ಒಳಗೊಂಡ ಪದವೀಧರ ಕ್ಷೇತ್ರ ವಿಸ್ತಾರವಾಗಿರುವುದರಿಂದ ಅದನ್ನು ತೊರೆದು, ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಬರಲು ಹನುಮಂತ ನಿರಾಣಿ ಉತ್ಸುಕರಾಗಿದ್ದು, ಈ ಸಂಬಂಧ ಪಕ್ಷದಲ್ಲಿ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ನ.20 ರಂದು ಅವಳಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮ್ಮುಖದಲ್ಲಿ ಈ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

ಅಭ್ಯರ್ಥಿಗಳ ಹೆಸರು ಘೋಷಣೆ ವಿಳಂಬವಾದಷ್ಟೂ ಚುನಾವಣೆ ಸಿದ್ಧತೆ ಮಾಡಿಕೊಳ್ಳಲು ಸಮಯ ಸಾಲುವುದಿಲ್ಲ ಎಂಬುದು ಆಕಾಂಕ್ಷಿಗಳ ಕೊರಗು. ಆದಷ್ಟು ಬೇಗ ಹೆಸರು ಘೋಷಣೆ ಮಾಡಿ ಎಂದು ಪಕ್ಷದ ವರಿಷ್ಠರ ಬಳಿ ದುಂಬಾಲು ಬಿದ್ದಿದ್ದಾರೆ.

**** 

ಜನ ಸ್ವರಾಜ್ಯ ಸಮಾವೇಶ ನಾಳೆ

ವಿಜಯಪುರ: ಬಿಜೆಪಿ ಜನ ಸ್ವರಾಜ ಸಮಾವೇಶ ನ.20 ರಂದು ಬೆಳಿಗ್ಗೆ 10ಕ್ಕೆ ಬಾಗಲಕೋಟೆಯಲ್ಲಿ ಹಾಗೂ  ಮಧ್ಯಾಹ್ನ 3 ಗಂಟೆಗೆ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಗೋವಿಂದ ಕಾರಜೋಳ, ಬಿ. ಶ್ರೀರಾಮಲು, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ,  ಸಂಸದರಾದ ರಮೇಶ ಜಿಗಣಗಿ, ಪಿ.ಸಿ.ಗದ್ದಿಗೌಡರ ಹಾಗೂ ಅವಳಿ ಜಿಲ್ಲೆಯ  ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.