ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ವಾಯವ್ಯ ಪದವೀಧರ ಕ್ಷೇತ್ರಕ್ಕೆ ಬಿ.ಎಂ.ಬಿರಾದಾರ?

ವಿಧಾನ ಪರಿಷತ್‌ ಚುನಾವಣಾ ಕಣಕ್ಕಿಳಿಸಲು ಕಾಂಗ್ರೆಸ್‌ ಶಾಸಕರು, ಮುಖಂಡರ ಒಲವು
Last Updated 18 ಮಾರ್ಚ್ 2022, 13:29 IST
ಅಕ್ಷರ ಗಾತ್ರ

ವಿಜಯಪುರ: ಜೂನ್‌ನಲ್ಲಿ ನಡೆಯಲಿರುವ ವಿಧಾನ ಪರಿಷತ್‌ ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಸಾಲಿನಲ್ಲಿ ಶಿಕ್ಷಣ ತಜ್ಞ, ಹಿರಿಯ ಮುಖಂಡ ಬಸವನ ಬಾಗೇವಾಡಿ ತಾಲ್ಲೂಕು ಮನಗೂಳಿಯ ಡಾ.ಬಸವರಾಜ ಎಂ.ಬಿರಾದಾರ ಹೆಸರು ಮುಂಚೂಣಿಯಲ್ಲಿದೆ.

ಪ್ರಬಲ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿರುವ ಡಾ.ಬಿ.ಎಂ.ಬಿರಾದಾರ ಅವರನ್ನು ಕಣಕ್ಕಿಸುವ ಮೂಲಕ ಅದೇ ಸಮುದಾಯಕ್ಕೆ ಸೇರಿದ ಹಾಲಿ ವಿಧಾನ ಪರಿಷತ್‌ ಸದಸ್ಯ, ಬಿಜೆಪಿಯ ಹನುಮಂತ ನಿರಾಣಿಗೆ ತೀವ್ರ ಪೈಪೋಟಿನೀಡಲು ಕಾಂಗ್ರೆಸ್‌ ರಾಜಕೀಯ ತಂತ್ರ ಹೆಣೆದಿದೆ.

ವಾಯವ್ಯ ಪದವೀಧರ ಕ್ಷೇತ್ರಕ್ಕೆ ಬೆಳಗಾವಿಯ ಕಿರಣ ಸಾಧುನವರ ಹೆಸರೂ ಕೇಳಿಬರುತ್ತಿದೆ. ಆದರೆ, ಬಿ.ಎಂ.ಬಿರಾದಾರ ಪರವಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್‌ನ ಅನೇಕ ಶಾಸಕರು, ಮುಖಂಡರು ಹೆಚ್ಚಿನ ಒಲವು ವ್ಯಕ್ತಪಡಿಸಿದ್ದು, ಈ ಸಂಬಂಧ ಹೈಕಮಾಂಡ್‌ ಬಳಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

‘ವಾಯವ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಬಿಜೆಪಿ ಹಾಲಿ ಸದಸ್ಯ ಹನುಮಂತ ನಿರಾಣಿ ಅವರು, ಕಳೆದ ಆರು ವರ್ಷಗಳಿಂದ ಪದವೀಧರರ ಪರವಾಗಿ ಯಾವೊಂದು ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಪದವೀಧರರ ಯಾವುದೇ ಬೇಡಿಕೆಗೆ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಇದೀಗ ಮತ್ತೆ ಸ್ಪರ್ಧಿಸಿದ್ದಾರೆ’ ಎಂದು ಬಿ.ಎಂ.ಬಿರಾದಾರ ಆರೋಪಿಸಿದರು.

‘ಹನುಮಂತ ನಿರಾಣಿ ಅವರು ಆರು ವರ್ಷಗಳಲ್ಲಿ ಕೇವಲ ಬೀಳಗಿ, ಮುಧೋಳಕ್ಕೆ ಸೀಮಿತವಾಗಿದ್ದಾರೆ. ಚುನಾವಣೆ ಬಂದಾಗ ಮಾತ್ರ ಅವರಿಗೆಮೂರು ಜಿಲ್ಲೆಗಳ ನೆನಪಾಗುತ್ತದೆ’ ಎಂದು ಅವರು ದೂರಿದರು.

‘ಪದವೀಧರ ಕ್ಷೇತ್ರ ವ್ಯಾಪ್ತಿಯ ಮೂರು ಜಿಲ್ಲೆಗಳಿಂದ ಸುಮಾರು 30 ಸಾವಿರ ಪದವೀಧರರನ್ನು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಮಾಡಿದ್ದೇನೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನನಗೆ ಅವಕಾಶ ಸಿಕ್ಕರೆ ಗೆಲುವು ನೂರಕ್ಕೆ ನೂರು ನಿಶ್ಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ನಡೆದ ಚುನಾವಣೆಯಲ್ಲಿ ವಾಯವ್ಯ ಶಿಕ್ಷಕ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿರಾದಾರ ಅವರು ಕಡೇ ಕ್ಷಣದಲ್ಲಿ ಪಕ್ಷದ ಹಿರಿಯ ಮುಖಂಡರ ಒತ್ತಡಕ್ಕೆ ಮಣಿದು ನಾಮಪತ್ರ ಹಿಂಪಡೆಯುವ ಮೂಲಕ ವಿ.ಎನ್‌. ಬನ್ನೂರ ಸ್ಪರ್ಧೆಗೆ ಅನುವು ಮಾಡಿಕೊಟ್ಟಿದ್ದರು.

ಕರ್ನಾಟಕ ರಾಜ್ಯ ವಿ.ವಿಗಳ ಮತ್ತು ಕಾಲೇಜುಗಳ ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಸಂಘದ ಅಧ್ಯಕ್ಷರಾಗಿ, ಬೆಳಗಾವಿ ರಾಣಿ ಚನ್ನಮ್ಮ ವಿವಿ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ, ವಿಜಯಪುರ ಜಿಲ್ಲಾ ಸರ್ಕಾರಿ ಮತ್ತು ಅನುದಾನಿತ ಪದವಿ ಮಹಾವಿದ್ಯಾಲಯಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ, ಸುವಿಧಾ ಸೌಹಾರ್ಧ ಸಹಕಾರಿ ಬ್ಯಾಂಕ್‌ ನಿರ್ದೇಶಕರಾಗಿ, ಶ್ರೀಸಾಯಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ, ಉತ್ತರ ಕರ್ನಾಟಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಬಿ.ಎಂ.ಬಿರಾದಾರ ಗುರುತಿಸಿಕೊಂಡಿದ್ದಾರೆ.

****

ನಿರುದ್ಯೋಗಿ ಪದವೀಧರರಿಗೆ ಉದ್ಯೋಗ, ನಿರುದ್ಯೋಗ ಭತ್ಯೆ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ಹೇರಿ, ಬೇಡಿಕೆ ಈಡೇರಿಸಲು ಆದ್ಯತೆ ನೀಡುತ್ತೇನೆ.
–ಡಾ.ಬಿ.ಎಂ.ಬಿರಾದಾರ, ವಾಯವ್ಯ ಪದವೀಧರ ಕ್ಷೇತ್ರದಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT