ಸೋಮವಾರ, ನವೆಂಬರ್ 29, 2021
20 °C

ವಿಜಯಪುರ–ಬಾಗಲಕೋಟೆ ವಿಧಾನ ಪರಿಷತ್‌ ಚುನಾವಣೆ: ಗೌಡ, ಪಾಟೀಲರದ್ದೇ ದರ್ಬಾರು

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ವಿಜಯಪುರ: ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ದ್ವಿಸದಸ್ಯ ಕ್ಷೇತ್ರಕ್ಕೆ ಇದುವರೆಗೆ ನಡೆದ ಐದು ಚುನಾವಣೆಗಳಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಗೌಡ, ಪಾಟೀಲರೇ ಆಯ್ಕೆಯಾಗಿರುವುದು ವಿಶೇಷ. 

ಕ್ಷೇತ್ರಕ್ಕೆ ಪ್ರಥಮ ಬಾರಿ ನಡೆದ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಪಿ.ಸಿ.ಗದ್ದಿಗೌಡರ ಹಾಗೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿ.ಆರ್‌.ಸೋರಗಾವಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮೊತ್ತ ಮೊದಲಿಗೆ ಖಾತೆ ತೆರೆದಿದ್ದರು.

ಎರಡನೇ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌.ಆರ್‌.ಪಾಟೀಲ ಮತ್ತು ಜನತಾ ದಳದಿಂದ ಬಿ.ಜಿ.ಪಾಟೀಲ ಹಲಸಂಗಿ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಮೂರನೇ ಬಾರಿ ನಡೆದ ಚುನಾವಣೆಯಲ್ಲಿ ಎಸ್‌.ಆರ್‌.ಪಾಟೀಲ ಮತ್ತು ಸಿದ್ದು ನ್ಯಾಮಗೌಡ ಜಯಗಳಿಸುವ ಮೂಲಕ ಕಾಂಗ್ರೆಸ್‌ ಎರಡೂ ಸ್ಥಾನಗಳನ್ನು ತನ್ನ ತೆಕ್ಕೆಗೆ ಪ್ರಥಮ ಬಾರಿಗೆ ತೆಗೆದುಕೊಂಡಿತು.

ನಾಲ್ಕನೇ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎಸ್‌.ಆರ್‌.ಪಾಟೀಲ  ಹಾಗೂ ಬಿಜೆಪಿಯಿಂದ ಜಿ.ಎಸ್‌.ನ್ಯಾಮಗೌಡ ಆಯ್ಕೆಯಾಗಿದ್ದರು.

ಐದನೇ ಬಾರಿ ನಡೆದ ಚುನಾವಣೆಯಲ್ಲಿ ಎಸ್‌.ಆರ್.ಪಾಟೀಲ ಅವರು ಸತತ ಐದನೇ ಬಾರಿಗೆ ಕಾಂಗ್ರೆಸ್‌ ಬಾವುಟ ಹಾರಿಸಿದರು. ಪಕ್ಷೇತರವಾಗಿ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿಗೆ ಸೋಲುಣಿಸಿದ್ದರು.


ಪಿ.ಸಿ.ಗದ್ದಿಗೌಡರ, ಸಿದ್ದು ನ್ಯಾಮಗೌಡ,  ಜಿ.ಎಸ್‌. ನ್ಯಾಮಗೌಡ

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯತ್ನಾಳ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ  ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದ ಕಾರಣ ವಿಧಾನ ಪರಿಷತ್‌ ಕ್ಷೇತ್ರಕ್ಕೆ 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸುನೀಲ್‌ಗೌಡ ಪಾಟೀಲ ಅವರು ಕಾಂಗ್ರೆಸ್‌ಗೆ ಜಯ ತಂದಿದ್ದರು.

ಈ ಕ್ಷೇತ್ರದಿಂದ ಆಯ್ಕೆಯಾದವರು ರಾಜಕೀಯವಾಗಿ ಸಾಕಷ್ಟು ಪ್ರಭಾವಿಗಳಾಗಿಯೂ ಗುರುತಿಸಿಕೊಂಡಿದ್ದಾರೆ.

ಇದುವರೆಗೆ ಕ್ಷೇತ್ರವನ್ನು ಅತೀ ಹೆಚ್ಚು ಅಂದರೆ ನಾಲ್ಕು ಬಾರಿ(24 ವರ್ಷ) ಪ್ರತಿನಿಧಿಸಿರುವವರು ಎಸ್‌.ಆರ್‌.ಪಾಟೀಲ ಅವರೊಬ್ಬರೇ ಎಂಬುದು ವಿಶೇಷ. ಅಲ್ಲದೇ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸುವ ಮೂಲಕ ಕ್ಷೇತ್ರಕ್ಕೆ ಗೌರವ ತಂದುಕೊಟ್ಟಿದ್ದಾರೆ.

ಬಾಗಲಕೋಟೆ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಅವರು ಈ ಕ್ಷೇತ್ರದಿಂದಲೇ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡಿರುವುದು ವಿಶೇಷ. ಅಂತೆಯೇ, ಜಮಖಂಡಿಯ ಮಾಜಿ ಶಾಸಕ ದಿ.ಸಿದ್ದು ನ್ಯಾಮಗೌಡ ಅವರಿಗೂ ಈ ಕ್ಷೇತ್ರ ರಾಜಕೀಯ ಮರುಹುಟ್ಟು ನೀಡಿದ ಕ್ಷೇತ್ರವಾಗಿದೆ. ಅಲ್ಲದೇ, ಸತತ ಸೋಲಿನಿಂದ ಕಂಗಾಲಾಗಿದ್ದ ಬಸನಗೌಡ ಪಾಟೀಲ ಯತ್ನಾಳರಿಗೂ ರಾಜಕೀಯವಾಗಿ ಮರುಹುಟ್ಟು ನೀಡಿರುವುದು ಇದೇ ಕ್ಷೇತ್ರ.

ಇದುವರೆಗೆ ನಡೆದ ಚುನಾವಣೆಗಳಲ್ಲಿ ಬಾಗಲಕೋಟೆ ಜಿಲ್ಲೆಯ ಪಿ.ಸಿ.ಗದ್ದಿಗೌಡರ, ಸಿ.ಆರ್‌.ಸೋರಗಾವಿ, ಎಸ್‌.ಆರ್‌.ಪಾಟೀಲ, ಜಿ.ಎಸ್‌.ನ್ಯಾಮಗೌಡ, ಸಿದ್ದು ನ್ಯಾಮಗೌಡ ಅವರೇ ಹೆಚ್ಚು ಅವಧಿಗೆ ಈ ಕ್ಷೇತ್ರದ ಮೇಲೆ ಪ್ರಾಬಲ್ಯ ಹೊಂದಿದ್ದರು.

ಮತದಾರರು ಅಧಿಕ ಸಂಖ್ಯೆಯಲ್ಲಿ ಇದ್ದರೂ ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿದ್ದು ಕಡಿಮೆ. ಬಿ.ಜಿ.ಪಾಟೀಲ ಹಲಸಂಗಿ, ಬಸನಗೌಡ ಪಾಟೀಲ ಯತ್ನಾಳ ಮತ್ತು ಸುನೀಲ್‌ಗೌಡ ಪಾಟೀಲ ಸೇರಿದಂತೆ ಮೂವರು ಮಾತ್ರ ವಿಜಯಪುರದಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಅವಳಿ ಜಿಲ್ಲೆಯ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಬಲ ಪಕ್ಷಗಳಾಗಿರುವುದರಿಂದ ಇತ್ತೀಚಿನ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರಕ್ಕೆ ಮಾತ್ರ ಸ್ಪರ್ಧಿಸಿ, ರಕ್ಷಣಾತ್ಮಕ ರಾಜಕೀಯ ಆಟದಲ್ಲಿ ತೊಡಗಿವೆ. ಒಂದೇ ಪಕ್ಷದಿಂದ ಇಬ್ಬರನ್ನು ಕಣಕ್ಕಿಳಿಸಿದರೆ ಗೆಲುವು ಸುಲಭವಲ್ಲ ಎಂಬುದು ಮನದಟ್ಟು ಮಾಡಿಕೊಂಡಿವೆ.

ಈ ಕಾರಣಕ್ಕಾಗಿಯೇ, ಈ ಬಾರಿ ಇಬ್ಬರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಹೈಕಮಾಂಡ್‌ ಉತ್ಸುಕವಾಗಿದ್ದರೂ ಸಹ ಹಿರಿಯ ರಾಜಕಾರಣಿ ಎಸ್‌.ಆರ್‌.ಪಾಟೀಲ ಒಪ್ಪಲಿಲ್ಲ.

ಇದೀಗ ನಡೆಯುತ್ತಿರುವ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿ ಹಾಲಿ ಸದಸ್ಯ ಸುನೀಲ್‌ಗೌಡ ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಬಾಗಲಕೋಟೆ ಮಾಜಿ ಶಾಸಕ ಪಿ.ಎಚ್‌.ಪೂಜಾರ ಅವರು ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್‌ ಆರಂಭಕ್ಕೆ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.


ಎಸ್.ಆರ್.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಸುನೀಲ್‌ಗೌಡ ಪಾಟೀಲ

ಮೂವರು ಉಮೇದುವಾರಿಕೆ ವಾಪಸ್‌
ವಿಜಯಪುರ
: ವಿಜಯಪುರ–ಬಾಗಲಕೋಟೆ ವಿಧಾನ ಪರಿಷತ್‌ ಕ್ಷೇತ್ರಕ್ಕೆ ಡಿ.10ರಂದು ನಡೆಯುವ ಚುನಾವಣೆಗೆ ಸ್ಪರ್ಧಿಸಿದ್ದ ಮೂವರು ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದುಕೊಂಡಿದ್ದಾರೆ.

ತುಳಸಪ್ಪ ದಾಸರ, ಕಾಶಿಂಪಟೇಲ, ಮಾರುತಿ ಜಮೀನ್ದಾರ ಅವರು ನಾಮಪತ್ರ ಹಿಂಪಡೆದುಕೊಂಡಿದ್ದಾರೆ ಎಂದು  ಚುನಾವಣಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ. 

ನಾಮಪತ್ರ ಹಿಂಪಡೆಯಲು ನ.26 ಕೊನೆಯ ದಿನವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು