ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಸೆಷನ್ಸ್‌ ಕೋರ್ಟ್: 50 ವಕೀಲರಿಗೆ ಕೋವಿಡ್‌, 10ಕ್ಕೂ ಹೆಚ್ಚು ಸಾವು

Last Updated 8 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಸೆಷನ್ಸ್‌ ಕೋರ್ಟ್‌ನಲ್ಲಿ 50ಕ್ಕೂ ಹೆಚ್ಚು ವಕೀಲರಿಗೆ ಕೋವಿಡ್‌ ಪಾಸಿಟಿವ್‌ ವರದಿಯಾಗಿದ್ದು, ಇದರಲ್ಲಿ 10ಕ್ಕೂ ಹೆಚ್ಚು ವಕೀಲರು ಸಾವಿಗೀಡಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಸೆಷನ್ಸ್‌ ಕೋರ್ಟ್‌ನ ವಕೀಲರ ಸಂಘದ ಅಧ್ಯಕ್ಷ ಮಹಿಪತಿ ಹನುಮಂತರಾವ್‌ ಖಾಸನೀಸ,ರಾಜ್ಯದಲ್ಲಿ ಕೋವಿಡ್‌ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಸಮುದಾಯ ವಿಜಯಪುರದಲ್ಲೇ ಹೆಚ್ಚು ಎಂದು ಹೇಳಿದರು.

ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿರುವ 10ಕ್ಕೂ ಅಧಿಕ ವಕೀಲರ ಕುಟುಂಬಕ್ಕೆ ರಾಜ್ಯ ವಕೀಲರ ಪರಿಷತ್‌ನಿಂದ ಸೂಕ್ತ ಪರಿಹಾರ, ಸೌಲಭ್ಯ ಕೊಡಿಸಲು ಜಿಲ್ಲಾ ವಕೀಲರ ಸಂಘ ಶ್ರಮಿಸುತ್ತಿದೆ ಎಂದು ಹೇಳಿದರು.

ಕೋವಿಡ್‌ನಿಂದ ಗುಣಮುಖರಾಗಿರುವ ವಕೀಲರಿಗೆ ತಲಾ ₹ 50 ಸಾವಿರಚಿಕಿತ್ಸಾ ವೆಚ್ಚ ನೀಡಲಾಗಿದೆ. ಸಂತ್ರಸ್ತ ಕುಟುಂಬದವರ ನೆರವಿಗೆ ವಕೀಲರ ಸಂಘ ನಿಂತಿದೆ ಎಂದರು.

ಕೋವಿಡ್ಪರಿಣಾಮ ಕಲಾಪಗಳು ನಡೆಯದೇ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕಲಾಪಗಳು ಆರಂಭವಾಗಿದ್ದರೂ ಪ್ರಕರಣಗಳ ವಿಲೇವಾರಿ ಕಡಿಮೆಯಾಗಿವೆ. ಅಲ್ಲದೇ, ಕಕ್ಷಿದಾರ ವಕೀಲರು ಮಾತ್ರ ಕಲಾಪದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಉಳಿದವರು ಕೋರ್ಟ್ ಕಲಾಪದಿಂದ ಹೊರಗುಳಿಯಬೇಕಾಗಿದೆ. ಹೀಗಾಗಿ ವಕೀಲರ ಸಂಕಷ್ಟ ಮುಂದುವರಿದಿದೆ ಎಂದು ತಿಳಿಸಿದರು.

ಪ್ರತಿದಿನ ಬೆಳಿಗ್ಗೆ 8ಕ್ಕೆ ಕಕ್ಷಿದಾರರ ಕೋವಿಡ್‌ ಪರೀಕ್ಷೆ ಮಾಡಲಾಗುತ್ತದೆ. ವರದಿ ಬಂದ ಬಳಿಕ ಸುಮಾರು 11ಕ್ಕೆ ಕೋರ್ಟ್ ಆವರಣದೊಳಗೆ ಬಿಡಲಾಗುತ್ತಿದೆ. ಒಂದು ವೇಳೆ ಕೋವಿಡ್‌ ಪಾಸಿಟಿವ್‌ ವರದಿಯಾದರೆ ಪ್ರಕರಣದ ವಿಚಾರಣೆ ಮತ್ತೆ ಮುಂದಕ್ಕೆ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಪರಿಸ್ಥಿತಿ ಹೇಳತೀರದು ಎಂದು ಹೇಳಿದರು.

ವಿಜಯಪುರ ಜಿಲ್ಲಾ ಸೆಷನ್ಸ್‌ ಕೋರ್ಟ್‌ನಲ್ಲಿ ಕೌಟುಂಬಿಕ ಕೋರ್ಟ್‌, ಲೇಬರ್‌ ಕೋರ್ಟ್‌ ಸೇರಿದಂತೆ 16 ನ್ಯಾಯಾಲಯದ ಕೊಠಡಿಗಳಿದ್ದು, ದಿನಕ್ಕೆ ಕೇವಲ 30 ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುತ್ತಿದೆ.ಕಕ್ಷಿದಾರರ ಜೊತೆ ಬರುವವರನ್ನು ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಕೋರ್ಟ್‌ ಆವರಣದೊಳಗೆ ಬಿಡುತ್ತಿಲ್ಲ. ಹೀಗಾಗಿ ರಸ್ತೆ ಮೇಲೆ ಕಾಯುವ ಪರಿಸ್ಥಿತಿ ಇದೆ ಎಂದರು.

ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಕಲಾಪಗಳು ಎಂಟು ತಿಂಗಳಿಂದ ನಡೆಯದ ಕಾರಣ ಯುವ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಕೊಠಡಿ ಬಾಡಿಗೆ, ದಿನನಿತ್ಯದ ಖರ್ಚು ವೆಚ್ಚ ಭರಿಸಲಾಗದ ಪರಿಸ್ಥಿತಿ ತಲೆದೋರಿದ್ದು, ಸಾಕಷ್ಟು ಜನ ತಮ್ಮ ಊರುಗಳಿಗೆ ಮರಳಿದ್ದಾರೆ ಎಂದು ಹೇಳಿದರು.

ಕೋರ್ಟ್‌ ಆವರಣದಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಜೊತೆಗೆ ವೃತ್ತಿ ಚಹರೆಯೂ ಬದಲಾಗಿದೆ. ವಿಡಿಯೋ ಕಾನ್ಫರೆನ್ಸ್‌(ವರ್ಚುವಲ್‌) ಮೂಲಕ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಇದರಿಂದ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ವಾದ, ಪ್ರತಿವಾದ ನಡೆಸುವುದು ಕಷ್ಟವಾಗಿದೆ ಎಂದರು.

***

ಸಾವಿಗೀಡಾಗಿರುವ ವಕೀಲರು ಪ್ರತಿನಿಧಿಸುತ್ತಿದ್ದ ಪ್ರಕರಣಗಳಲ್ಲಿ ಕಕ್ಷಿದಾರರಿಗೆ ಅನುಕೂಲ ಕಲ್ಪಿಸಲು ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕೋರ್ಟ್‌ ಅಧಿಕಾರಿಗಳ ಗಮನಕ್ಕೆ ತರಲಾಗಿದೆ

- ಮಹಿಪತಿ ಖಾಸನೀಸ, ಅಧ್ಯಕ್ಷ,ಜಿಲ್ಲಾ ಸೆಷನ್ಸ್‌ ಕೋರ್ಟ್‌ನ ವಕೀಲರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT