ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ರಾಣ ಸ್ಥಿತಿಯಲ್ಲಿ ವಿಜಯಪುರದ ‘ಪ್ರವಾಸಿ ತಾಣ’ಗಳು

ಮೂಲಸೌಲಭ್ಯಗಳ ಕೊರತೆ; ಪ್ರವಾಸಿಗರಿಗೆ ನಿರಾಸೆ
Last Updated 26 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ಗೋಳಗುಮ್ಮಟ, ಜೋಡು ಗುಮ್ಮಟ, ಇಬ್ರಾಹಿಂರೋಜಾ, ಬಾರಾಕಮಾನ್‌, ಗಗನ್‌ ಮಹಲ್‌ ಸೇರಿದಂತೆ ಹತ್ತು ಹಲವು ವಿಶ್ವ ಪ್ರಸಿದ್ಧ ಪ್ರವಾಸಿತಾಣ ಇರುವ ವಿಜಯಪುರ ಮೂಲಸೌಲಭ್ಯಗಳಿಂದ ವಂಚತವಾಗಿದ್ದು, ಪ್ರವಾಸಿ ತಾಣಗಳು ನಿತ್ರಾಣವಾಗಿದೆ.

ವಿಶ್ವ ಪ್ರಸಿದ್ಧ ಕಲಾತ್ಮಕ ಸ್ಮಾರಕಗಳು ಇದ್ದರೂ ದೇಶ, ವಿದೇಶದ ಪ್ರವಾಸಿಗರನ್ನು ನಿರೀಕ್ಷಿತ ಪ್ರಮಾಣದಲ್ಲಿ ಆಕರ್ಷಿಸುವಲ್ಲಿ ವಿಜಯಪುರ ವಿಫಲವಾಗಿವೆ. ದಶಕಗಳ ಹಿಂದೆ ವಿದೇಶದಿಂದ ಬರುತ್ತಿದ್ದ ಪ್ರವಾಸಿಗರು ಇತ್ತೀಚಿನ ವರ್ಷಗಳಲ್ಲಿ ಬರುತ್ತಿಲ್ಲ. ದೇಶ–ವಿದೇಶದ ಪ್ರವಾಸಿಗರಿಗೆ ಅಗತ್ಯಮಾಹಿತಿ ನೀಡುವ ಕೇಂದ್ರಗಳು ನಗರದಲ್ಲಿ ಇಲ್ಲವಾಗಿವೆ. ವಿಜಯಪುರದ ಪ್ರವಾಸಿತಾಣಗಳ ಸ್ಥಿತಿ ‘ಬಾರಾ ಕಮಾನ್‌’ ಪರಿಸ್ಥಿತಿಯಂತಾಗಿದೆ.

ಯುನಿಸ್ಕೋ ಪಟ್ಟಿಗೆ ಸೇರದ ಗುಮ್ಮಟ:

ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂ ರೋಜಾವನ್ನು ವಿಶ್ವ ಪಾರಂಪರಿಕ ತಾಣಗಳ ಸಾಲಿಗೆ ಸೇರ್ಪಡೆಗೆ ಇದುವರೆಗೂ ನಡೆದಿರುವ ಪ್ರಯತ್ನಗಳು ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿವೆ. ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯೇ ಹೋಗದಿರುವುದರಿಂದ ಯುನಿಸ್ಕೋ ಪಟ್ಟಿಗೆ ಸೇರ್ಪಡೆ ಎಂಬುದು ದೂರದ ಮಾತಾಗಿ ಉಳಿದಿದೆ.

ಎಎಸ್‌ಐ ನಿರ್ಲಕ್ಷ್ಯ:

ವಿಜಯಪುರ ನಗರದಲ್ಲಿರುವ ಬಹುತೇಕ ಸ್ಮಾರಕಗಳು ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ) ವ್ಯಾಪ‍್ತಿಯಲ್ಲಿ ಇರುವುದರಿಂದ ನಿರ್ವಹಣೆ, ಅಭಿವೃದ್ಧಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಎಎಸ್‌ಐ ಅನುಮತಿ ನೀಡದೇ ಇರುವುದು ಪ್ರವಾಸಿ ತಾಣದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ.

ಐತಿಹಾಸಿಕ ಸ್ಮಾರಕಗಳು ಕಣ್ಣೆದರೇ ಶಿಥಿಲವಾಗುತ್ತಿದ್ದರೂ ಎಎಸ್‌ಐ ಅಧಿಕಾರಿಗಳು ನೋಡಿಕೊಂಡು ಸುಮ್ಮನಿರುತ್ತಿದ್ದಾರೆ. ಪರಿಣಾಮ ಸ್ಮಾರಕಗಳು ವರ್ಷದಿಂದ ವರ್ಷಕ್ಕೆ ಅಳಿವಿನ ಅಂಚಿಗೆ ತಲುಪತೊಡಗಿವೆ.

ಎಎಸ್‌ಐ ಪ್ರಾದೇಶಿಕ ಕಚೇರಿ ಧಾರವಾಡದ ಬದಲು ವಿಜಯಪುರ ನಗರಕ್ಕೆ ಸ್ಥಳಾಂತರವಾಗಬೇಕು ಎಂಬ ಬೇಡಿಕೆಗೆ ಇದುವರೆಗೂ ಸ್ಪಂದನೆ ಲಭಿಸಿಲ್ಲ. ರಾಜ್ಯ ಪ್ರವಾಸೋದ್ಯಮ ಇಲಾಖೆಯು ಹೆಸರಿಗಷ್ಟೇ ಎಂಬಂತಾಗಿದೆ. ಸರ್ಕಾರದ ಯೋಜನೆ, ಅನುದಾನವನ್ನು ಬಳಸಲಷ್ಟೇ ಸೀಮಿತವಾಗಿದೆ.

ಲಭಿಸದ ವಾಹನ:

ವಿಜಯಪುರಕ್ಕೆ ಪ್ರವಾಸಕ್ಕೆಂದು ಬರುವವರಿಗೆ ನಗರದ ಒಂದೊಂದು ದಿಕ್ಕಿನಲ್ಲಿರುವ ಸ್ಮಾರಕಗಳ ವೀಕ್ಷಣೆಗೆ ತೆರಳಬೇಕೆಂದರೆ ಸರಿಯಾದ ಮಾರ್ಗದರ್ಶನ, ವಾಹನಗಳ ಸೌಲಭ್ಯಗಳಿಲ್ಲ. ಟಂಟಂ, ಆಟೊ ರಿಕ್ಷಾ ಅಥವಾ ಟಾಂಗಾಗಳನ್ನು ಅವಲಂಭಿಸಬೇಕಾಗಿದೆ. ಪ್ರವಾಸಿತಾಣಗಳನ್ನು ಸುಲಭವಾಗಿ ಸಂದರ್ಶಿಸಲು ಪ್ರವಾಸೋದ್ಯಮ ಇಲಾಖೆಯಿಂದ ವಾಹನದ ವ್ಯವಸ್ಥೆ ಇಲ್ಲವಾಗಿದೆ.

ಬೆಳಕಿನ ವ್ಯವಸ್ಥೆ:

ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್‌, ಜೋಡು ಗುಮ್ಮಟಗಳಿಗೆ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂಬ ಹಲವು ದಶಕಗಳ ಬೇಡಿಕೆ ಇದುವರೆಗೂ ಈಡೇರಿಲ್ಲ.

ಹದಗೆಟ್ಟ ರಸ್ತೆಗಳು:

ಪ್ರಥಮವಾಗಿ ಹದಗೆಟ್ಟಿರುವ ಗುಮ್ಮಟನಗರಿಯ ರಸ್ತೆಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಭಾರೀ ಹಿನ್ನೆಡೆಯುಂಟು ಮಾಡಿವೆ. ಎಲ್ಲಿ ನೋಡಿದರೂ ಗುಂಡಿ ಬಿದ್ದ ರಸ್ತೆಗಳಲ್ಲಿ ಒಮ್ಮೆ ಸಂಚರಿಸಿದರೆ ಮತ್ತೆ ಆ ಮಾರ್ಗದಲ್ಲಿ ಬರದಂತ ಸ್ಥಿತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT