ಭಾನುವಾರ, ಫೆಬ್ರವರಿ 5, 2023
20 °C
ಸಾರ್ವಜನಿಕ ಗಣೇಶೋತ್ಸವ ಆಚರಿಸುವವರಿಗೆ ಕನಿಷ್ಠ ₹ 5 ಸಾವಿರ ದೇಣಿಗೆ

ಗಣೇಶನ ಮೂರ್ತಿಯ ಬಳಿ ಸಾವರ್ಕರ್‌ ಫೋಟೊ ಇಡಿ: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕೂರಿಸುವ ಪ್ರತಿ ಗಣೇಶನ ಮೂರ್ತಿ ಬಳಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೊ ಇಡಬೇಕು.‌ ಫೋಟೊ ನಾನೇ ಕೊಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಫ.ಗು.ಹಳಕಟ್ಟಿ ಸಭಾಭವನದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಸೇನೆ ಆಯೋಜಿದ್ದ ಶ್ರೀ ಗಜಾನನ ಮಹಾಮಂಡಳ ಸಭೆಯಲ್ಲಿ ಅವರು ಮಾತನಾಡಿದರು.

ಅಂಡಮಾನ್‌ ಜೈಲಿನಲ್ಲಿ 10 ವರ್ಷ ಜೈಲುವಾಸ ಅನುಭವಿಸುವುದು ಬೇಡ, ಹೊರಗೆ ಬಂದು ಈ ದೇಶಕ್ಕಾಗಿ ಏನಾದರೂ ಮಾಡೋಣ ಎಂಬ ಉದ್ದೇಶದಿಂದ ಸಾವರ್ಕರ್‌ ಬ್ರಿಟಿಷರ ಕ್ಷಮಾಪಣೆ ಕೇಳಿದ್ದರೇ ಹೊರತು ಶಿಕ್ಷೆ ಅನುಭವಿಸಲು ಹೆದರಿ ಅಲ್ಲ ಎಂದು ಹೇಳಿದರು. 

ಮಸೀದಿ ಮೇಲಿನ ಮೈಕ್ ಬಂದ್‌ ಆಗುವವರಿಗೂ ಗಣಪತಿ ಪೆಂಡಾಲ್‌ನಲ್ಲಿ ಡಿಜೆ ಬಂದ್ ಮಾಡಲ್ಲ. ನಾನು ಒಂದು ವೇಳೆ ಸಿಎಂ ಆಗಿದ್ದರೇ ಗಣಪತಿ ಕೂರಿಸಲು ಯಾವುದೇ ಅನುಮತಿ ಪಡೆಯುವ ಅಗತ್ಯವೇ ಇರಲಿಲ್ಲ ಎಂದರು.

ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆ ಸಾಧ್ಯವಾಗಿರಲಿಲ್ಲ. ಈ ವರ್ಷ ಎಲ್ಲರೂ ಭಕ್ತಿ,ಭಾವದಿಂದ ಗಣೇಶೋತ್ಸವ ಆಚರಿಸಬೇಕು. ಸಾರ್ವಜನಿಕ ಗಣೇಶೋತ್ಸವ ಆಚರಣೆ ವೇಳೆ ಸಂಘಟಕರು ಯಾವುದೇ ಕಾರಣಕ್ಕೂ ದಾರು ಕುಡಿಯುವುದು, ಕೋಳಿ ಕುರಿ ತಿನ್ನೋದು, ಇಸ್ಪೀಟು ಆಡೋದು ಬೇಡ ಎಂದರು.

ನಾಲ್ಕು ವರ್ಷದಿಂದ ವಿಜಯಪುರದಲ್ಲಿ ಯಾವುದೇ ಗಲಭೆ, ಗುಂಡಾಗಿರಿ ತೊಂದರೆ ಇಲ್ಲ. ಒಳ್ಳೆಯ ಅಧಿಕಾರಿಗಳು ನಗರದಲ್ಲಿ ಇರುವುದರಿಂದ ಯಾವುದೇ ಗಲಭೆ, ಗಲಾಟೆ ಆಗಿಲ್ಲ ಎಂದರು.

ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವವರಿಗೆ ಕನಿಷ್ಠ ₹5 ಸಾವಿರ ದೇಣಿಗೆ ನೀಡಲಾಗುವುದು. ಗಣೇಶೋತ್ಸವದಲ್ಲಿ ಯಾವುದೇ ಪ್ರಚೋದನೆಗೆ ಒಳಗಾಗಬೇಡಿ, ಭಕ್ತಿ ಗೀತೆ ಹಾಕಿ ಗೌರವದಿಂದ ಗಣೇಶೋತ್ಸವ ಆಚರಿಸಿ ಎಂದರು. 

ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಮಾತನಾಡಿ, ಯತ್ನಾಳ ಶಾಸಕರಾದ ಬಳಿಕ ನಗರದಲ್ಲಿ ಯಾವುದೇ ಗಲಭೆ, ಗಲಾಟೆಗಳು ಆಗಿಲ್ಲ. ಹೀಗಾಗಿ ಶಾಂತಿಯಿಂದ ಗಣೇಶೋತ್ಸವ ಆಚರಿಸಬೇಕು.ಯಾವುದೇ ಕೋಮಿನವರಿಗೆ ತೊಂದರೆಯಾಗದಂತೆ ಅಚರಿಸಬೇಕು ಎಂದರು.

ಏಳು ದಿನ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಉತ್ಸವ ಆಚರಿಸಬೇಕು ಎಂದರು.

ತಾಜ್ ಬಾವಡಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಬೇಡ. ಅದರ ಹೊರಗಡೆ ಪಾಲಿಕೆಯಿಂದ ಕೃತಕ ಹೊಂಡ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಎಲ್ಲ ಗಣೇಶ ಮೂರ್ತಿಗಳ ಮೆರವಣಿಗೆ ಸಿದ್ದೇಶ್ವರ ಗುಡಿ ಎದುರು ಹಾದು ಹೋಗಲು ವ್ಯವಸ್ಥೆ ಮಾಡಲಾಗುವುದು. ಅತ್ಯುತ್ತಮವಾಗಿ ಡೆಕೋರೇಷನ್‌ ಮಾಡಿರುವ ಗಣಪತಿ ಮಂಡಳಿಗೆ ಪ್ರಶಸ್ತಿ, ಸನ್ಮಾನ ಮಾಡಲಾಗುವುದು ಎಂದರು.

ಡಿವೈ ಎಸ್ಪಿ ಸಿದ್ದೇಶ್ವರ ಮಾತನಾಡಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಾಸಕರಿಗೆ ಕೆಟ್ಟ ಹೆಸರು ಬರದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಹೇಳಿದರು.

ತಹಶೀಲ್ದಾರ್ ಸಿದ್ದರಾಮ ಬೋಸಗಿ, ಹೆಸ್ಕಾಂ ಎಇ ರಾಜಶೇಖರ ಹಂಡಿ, ಬಸಯ್ಯ ಹಿರೇಮಠ, ಪೊಲೀಸ್ ಅಧಿಕಾರಿ  ಆರೀಫ್ ಮುಶ್ರೀಫ್, ಪರಶುರಾಮ‌ ರಜಪೂತ, ಸಿದ್ದರಾಪ್ಪ ಉಪ್ಪಿನ ಇದ್ದರು.

ಶ್ರೀ ಗಜಾನನ ಮಹಾಮಂಡಳಿ ಅಧ್ಯಕ್ಷರನ್ನಾಗಿ ಪ್ರಶಾಂತ ಬಡಿಗೇರಿ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

****

ಸಾವರ್ಕರ್ ಚಪ್ಪಲಿ ಕಿಮ್ಮತ್ತು ಇಲ್ಲದವರು ಅವರ ಬಗ್ಗೆ ಮಾತನಾಡುತ್ತಾರೆ. ಅವರನ್ನು ಟೀಕಸುವವರು ಕೇವಲ ಒಂದು ವಾರ ಹೋಗಿ ಅಂಡಮಾನ್‌ ಜೈಲಿನಲ್ಲಿ ಇದ್ದು ಬನ್ನಿ

–ಬಸನಗೌಡ ಪಾಟೀಲ ಯತ್ನಾಳ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು