ಗುರುವಾರ , ಆಗಸ್ಟ್ 11, 2022
24 °C
ಜಿಲ್ಲೆಯಲ್ಲಿ ಪ್ರತಿಭಟನೆ, ರಸ್ತೆ ತಡೆಗೆ ಸೀಮಿತವಾದ ‘ಭಾರತ್‌ ಬಂದ್‌’

ವಿಜಯಪುರ| ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿದ್ದು, ಅವುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ನಗರ ಸೇರಿದಂತೆ  ಜಿಲ್ಲೆಯಾದ್ಯಂತ ಪ್ರತಿಭಟನೆ, ರಸ್ತೆ ತಡೆ ನಡೆಸಲಾಯಿತು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಬಂದ್‌ ಅಂಗವಾಗಿ ಬೆಳಿಗ್ಗೆ  ನಗರದ ಕೇಂದ್ರ ಬಸ್ ನಿಲ್ದಾಣ ಹತ್ತಿರ ಬೈಕ್‌ ರ‍್ಯಾಲಿ ನಡೆಸಲು ಮುಂದಾದ ಕಾರ್ಯಕರ್ತರಿಗೆ ಪೊಲೀಸರು ಅವಕಾಶ ನೀಡಲಿಲ್ಲ.  

ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಹಾಗೂ ವಿದ್ಯುತ್ ಕಾಯ್ದೆ ಕೈಬಿಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.   

ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭಿಮಶಿ ಕಲಾದಗಿ, ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದೆ, ಈ ದೇಶದ ಶ್ರೀಮಂತರ ಪಾದ ಸೇವೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಆರ್‌ಕೆಎಸ್‍ನ ರಾಜ್ಯ ಉಪಾಧ್ಯಕ್ಷ ಬಿ. ಭಗವಾನರೆಡ್ಡಿ ಮಾತನಾಡಿ, ಬಿಜೆಪಿಯು ಕೇಂದ್ರದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಈ ದೇಶದ ಬಂಡವಾಳಶಾಹಿಗಳಿಗೆ ನೆರವಾಗುವಂತಹ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಸಾರ್ವಜನಿಕ ಉದ್ದಿಮೆಗಳಾದ ರೈಲ್ವೆ, ಬಿಎಸ್‍ಎನ್‍ಎಲ್, ಎಲ್‍ಐಸಿ, ಸಾರಿಗೆ, ಸರ್ಕಾರಿ ಅಧೀನದಲ್ಲಿರುವ ಕಂಪನಿಗಳನ್ನು ಮಾರಾಟ ಮಾಡಿ ದೇಶದ ಜನರಿಗೆ ಅನ್ಯಾಯ ಮಾಡುತ್ತಿದ್ದೆ. ದೇಶದ ಅಭಿವೃದ್ಧಿಗಾಗಿ ಅತಿ ಹೆಚ್ಚು ಹಣ ಸಂದಾಯವಾಗುವುದು ಸಾರ್ವಜನಿಕ ಉದ್ದಿಮೆಗಳಿಂದ, ಅಂತವುಗಳನ್ನೇ ಮಾರಟ ಮಾಡಿದರೆ ಇನ್ನೆಲ್ಲಿ ಉದ್ಯೋಗ ಎಂದರು.  

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರೇಗೌಡ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರಿ, ಅಖಂಡ ಕರ್ನಾಟಕ ರೈತ ಸಂಘದಿಂದ ಅರವಿಂದ ಕುಲಕರ್ಣಿ, ಅಖಿಲ ಭಾರತ ಕಿಸಾನ್‌ ಸಭಾ ಜಿಲ್ಲಾ ಮುಖಂಡರಾದ ಪ್ರಕಾಶ ಹಿಟ್ನಳ್ಳಿ,ಮಲ್ಲಿಕಾರ್ಜುನ ಎಚ್ ಟಿ, ಸಿದ್ದಲಿಂಗ ಬಾಗೆವಾಡಿ, ಭರತಕುಮಾರ ಎಚ್ ಟಿ, ಸುನಂದಾ ನಾಯಕ, ರಾಮಣ್ಣ ಸಿರೆಗೋಳ, ಖಾಜಾಸಾಬ್‌ ಕೊಲ್ಹಾರ, ಅನ್ವರ್‌ ಹುಸೇನ್‌ ಮುಲ್ಲಾ, ಕಾಳಮ್ಮ ಬಡಿಗೇರ, ಶಿವರಂಜನಿ. ಕಾವೇರಿ ಸುರೇಖಾ, ಸುನಿಲ, ಮಹಾದೇವಿ, ರಾಕೇಶ, ಆಕಾಶ ಪಾಲ್ಗೊಂಡಿದ್ದರು.

ಬಂದ್ ಬೆಂಬಲಿಸಿ ದಲಿತ ಪರ ಸಂಘಟನೆಗಳ ಮುಖಂಡ ಶ್ರೀನಾಥ ಪೂಜಾರಿ, ಭೀಮ್‌ ಆರ್ಮಿ ಮುಖಂಡ ರಿಜ್ವಾನ್ ಮುಲ್ಲಾ, ಮಹಿಳಾ ಪರ ಸಂಘಟನೆಗಳಿಂದ ಸುರೇಖಾ ರಜಪೂತ, ಕಾರ್ಮಿಕ ಸಂಘಟನೆಯಿಂದ ಲಕ್ಷ್ಮಣ ಹಂದ್ರಾಳ, ಪ್ರಗತಿಪರ ಸಂಘಟನೆಯ ಮುಖಂಡ ಅಕ್ರಮ ಮಾಶ್ಯಾಳಕರ, ಸದಾನಂದ ಮೋದಿ, ಕುರಿಗಾಹಿ ಸಂಘದ ಮಲ್ಲು ಬಿದರಿ, ಸಿಐಟಿಯು, ಎಐಯುಟಿಯುಸಿ, ಎಐಡಿಎಸ್‍ಒ, ಎಐಡಿವೈಒ, ಎಐಎಂಎಸ್‍ಎಸ್. ವಿವಿಧ ಸಂಘಟನೆಯ ಮುಖಂಡರು ಕಾರ್ಯಕರ್ತೆಯರು ಭಾಗವಹಿಸಿದ್ದರು.

ಬಂದ್‌ಗೆ‌ ನೀರಸ ಪ್ರತಿಕ್ರಿಯೆ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರತ್‌ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಅಂಗಡಿ, ಮಳಿಗೆಗಳು ಎಂದಿನಂತೆ ಬಾಗಿಲು ತೆರೆದು ವ್ಯಾಪಾರ, ವಹಿವಾಟು ನಡೆಸಿದವು. ಬಸ್‌, ಆಟೋ, ಟಂಟಂ ಸೇರಿದಂತೆ ವಾಹನಗಳ ಸಂಚಾರ ಸರಾಗವಾಗಿತ್ತು. ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು