ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿ ಕಾರ್ಖಾನೆ ಉಳಿಸಿ: ಕುಮಾರ ದೇಸಾಯಿ

ಸೆಪ್ಟೆಂಬರ್ 1ರಂದು ನಿರ್ದೇಶಕ ಮಂಡಳಿಗೆ ಚುನಾವಣೆ
Published 31 ಆಗಸ್ಟ್ 2023, 6:06 IST
Last Updated 31 ಆಗಸ್ಟ್ 2023, 6:06 IST
ಅಕ್ಷರ ಗಾತ್ರ

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಸೆಪ್ಟೆಂಬರ್‌ 1ರಂದು ನಡೆಯಲಿರುವ ಚುನಾವಣೆಯಲ್ಲಿ ಕಾರ್ಖಾನೆ ಉಳಿಸಲು ಹಾಗೂ ಭ್ರಷ್ಟರನ್ನು ತೊಲಗಿಸಲು ನಮ್ಮ ಪೆನಾಲ್‌ಗೆ ಮತ ಚಲಾಯಿಸಬೇಕು ಎಂದು ಕಾರ್ಖಾನೆಯ ಮಾಜಿ ಅಧ್ಯಕ್ಷ ಕುಮಾರ ದೇಸಾಯಿ ಮನವಿ ಮಾಡಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಅಧ್ಯಕ್ಷ ಶಶಿಕಾಂತ ಗೌಡರ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿ ನಡೆದಿದೆ. ಅಲ್ಲದೇ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗವಾಗಿದೆ. ಕಾರ್ಖಾನೆಯು ಆರ್ಥಕವಾಗಿ ನಷ್ಟ ಅನುಭವಿಸಿ, ಸಾಲದ ಸುಳಿಗೆ ಸಿಲುಕಿದೆ ಎಂದು ಆರೋಪಿಸಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಕಬ್ಬಿನ ಬಿಲ್‌ ಅನ್ನು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಬೆಲೆಯನ್ನು ನೀಡದೇ ರೈತರನ್ನು ವಂಚಿಸಲಾಗಿದೆ ಎಂದು ದೂರಿದರು.

ಹಾಲಿ ಅಧ್ಯಕ್ಷರು ಕಾರ್ಖಾನೆಗೆ 280 ಸಿಬ್ಬಂದಿಯನ್ನು ಸಂದರ್ಶನ ನಡೆಸದೇ, ಯಾವುದೇ ಪ್ರಕಟಣೆಯನ್ನು ನೀಡದೇ ಕಾನೂನು ಬಾಹಿರವಾಗಿ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾನೂನು ಬಾಹಿರವಾಗಿ ಸುಮಾರು 480 ಷೇರುದಾರರ ಹೆಸರನ್ನು ಬದಲಾಯಿಸಿ ತಮಗೆ ಬೇಕಾದವರಿಗೆ ವರ್ಗಾಯಿಸಿ, ಕಾರ್ಖಾನೆಯ ಷೇರುದಾರರಿಗೆ ಮೋಸ ಮಾಡಲಾಗಿದೆ ಎಂದು ದೂರಿದರು.

ಸಕ್ಕರೆ ಇಳುವರಿ ಪ್ರಮಾಣವನ್ನು ಶೇ0.02 ಕಡಿಮೆ ತೋರಿಸಿ, ಪ್ರತಿ ವರ್ಷ ಸುಮಾರು 12 ರಿಂದ 15 ಸಾವಿರ ಕ್ವಿಂಟಲ್‌ ಚೀಲದಷ್ಟು ಅಂದಾಜು ₹ 4ರಿಂದ ₹ 5 ಕೋಟಿ ಒಟ್ಟಾರೆಯಾಗಿ ₹20 ರಿಂದ ₹ 25 ಕೋಟಿ ಸಕ್ಕರೆಯನ್ನು ಖಾಸಗಿಯಾಗಿ ಮಾರಾಟ ಮಾಡುಕೊಂಡಿದ್ದಾರೆ ಎಂದು ಆರೋಪಿಸಿದರು.

ಕೇನ್‌ ಯಾರ್ಡ್‌ನಲ್ಲಿ ಸುಸಜ್ಜಿತವಾದ ಡಾಂಬರ್‌ ರಸ್ತೆ ಇದ್ದರೂ ಕಮಿಷನ್‌ ಆಸೆಗಾಗಿ ಅದನ್ನು ತೆಗೆದು ₹3.5 ಕೋಟಿ ಮೊತ್ತದಲ್ಲಿ ಸಿ.ಸಿ.ರೋಡ್‌ ಅನ್ನು ಮಾಡಿಸಲಾಗಿದೆ. ವಿಸ್ತರಣಾ ಯೋಜನೆ ಪ್ರಾರಂಭವಾಗದೇ ಸುಮಾರು ₹5.5 ಕೋಟಿ ವೆಚ್ಚದ ಗೋಡೌನ್‌ಗಳನ್ನು ಎರಡು ವರ್ಷ ಮೊದಲೇ ನಿರ್ಮಿಸಲಾಗಿದೆ ಎಂದು ಅವರು ದೂರಿದರು.

ದಕ್ಷ ಜಿ.ಎಂ. ಆಗಿದ್ದ ಹುಬ್ಬಳ್ಳಿ ಸಾಹೇಬರನ್ನು ತೆಗೆದು ಹಾಕಿ, ಕಡುಭ್ರಷ್ಟ ಎ.ಸಿ.ಪಾಟೀಲರನ್ನು ನೇಮಿಸಿ ಕಾರ್ಖಾನೆಯನ್ನು ಹಾಳು ಮಾಡಲಾಗಿದೆ ಎಂದು ಆರೋಪಿಸಿದರು.

ಸದ್ಯ ನಡೆಯುತ್ತಿರುವ ನಿರ್ಣಯಕ ಚುನಾವಣೆಯಲ್ಲಿ ನಮ್ಮ ಪೆನಾಲ್‌ ಆಯ್ಕೆಯಾಗಿ ಬಂದರೆ ಈ ಹಾಲಿ ಅಧ್ಯಕ್ಷರ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ಕುರಿತು ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ರೈತ ಮುಖಂಡರಾದ ಡಾ.ಕೆ.ಎಚ್‌.ಮುಂಬಾರಡ್ಡಿ, ವಕೀಲ ಎಚ್‌.ಬಿ.ಶಿರೋಳ, ಆರತಿ ಕೊಡಬಾಗಿ, ಎಚ್‌.ಎಸ್‌.ಕೋರಡ್ಡಿ, ಡಿ.ಡಿ.ಪಾಟೀಲ, ಅಶೋಕ ಲಂಕೆನ್ನವರ ಮತ್ತು ಮುತ್ತು ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT