ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ, ಕಾಲೇಜು ಶುಭಾರಂಭ; ಕಡಿಮೆ ಹಾಜರಾತಿ

ಕೋವಿಡ್‌ ಮಾರ್ಗಸೂಚಿಗಳ ಪಾಲನೆಗೆ ಒತ್ತು; ಪಾಠ, ಪ್ರವಚನ ಅರಂಭ
Last Updated 1 ಜನವರಿ 2021, 14:11 IST
ಅಕ್ಷರ ಗಾತ್ರ

ವಿಜಯಪುರ:ಕೋವಿಡ್‌ ಭಯ, ಅಂಜಿಕೆಯಿಂದ2020–21ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭವೇ ಆಗಿರದ ಶಾಲೆ, ಕಾಲೇಜುಗಳು ಜಿಲ್ಲೆಯಾದ್ಯಂತ ಶುಕ್ರವಾರದಿಂದ ಬಾಗಿಲು ತೆರೆದಿದ್ದು, ತರಗತಿಗಳು ಶುಭಾರಂಭವಾಗಿವೆ.

ಪ್ರಥಮ ದಿನವಾದ ಕಾರಣ ಹಾಜರಾತಿ ಕಡಿಮೆ ಇತ್ತು. ಶೇ 30ರಿಂದ 35ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.

10 ತಿಂಗಳಿಂದ ಪರಸ್ಪರ ಮುಖವನ್ನೇ ನೋಡದ ಗೆಳೆಯ, ಗೆಳತಿಯರು ದೀರ್ಘ ಸಮಯದ ಬಳಿಕ ಶಾಲಾ, ಕಾಲೇಜು ಆವರಣದಲ್ಲಿ ಮುಖಾಮುಖಿಯಾಗುವ ಮೂಲಕ ಖುಷಿಯಾದರು.

ಮಕ್ಕಳನ್ನು ಸ್ವಾಗತಿಸಲು ಬಹುತೇಕ ಶಾಲೆ, ಕಾಲೇಜುಗಳು ಸಿಂಗಾರಗೊಂಡಿದ್ದವು. ಅಲ್ಲದೇ, ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜುಗಳ ಕೊಠಡಿಗಳನ್ನು ಹಿಂದಿನ ದಿನವೇ ಸ್ಯಾನಿಟೈಜ್‌ ಮಾಡಿಸಲಾಗಿತ್ತು. ಶಾಲಾವರಣದಲ್ಲಿ ರಂಗೋಲಿ ಹಾಕಿ, ತೆಂಗಿನ ಗರಿಗಳಿಂದ ಶೃಂಗರಿಸಲಾಗಿತ್ತು. ಶಾಲಾ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಸ್ಯಾನಿಟೈಸರ್‌ ಬಳಸಬೇಕು, ಅಂತರ ಕಾಯ್ದುಕೊಳ್ಳಬೇಕು. ಪರಸ್ಪರ ಮಾಸ್ಕ್‌ ಬದಲಾಯಿಸುವುದಾಗಲಿ, ಪರಸ್ಪರ ಕೈ ಕುಲುಕುವುದಾಗಲಿ ಮಾಡಬಾರದು ಎಂದು ಮುಖ್ಯ ಶಿಕ್ಷಕರು ತಿಳಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ವಿ.ಹೊಸೂರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ ದಡ್ಡಿ ಅವರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ, ಮಕ್ಕಳು, ಶಿಕ್ಷಕರು ಮತ್ತು ಉಪನ್ಯಾಸಕರೊಂದಿಗೆ ಸಂವಾದ ನಡೆಸಿದರು.

ಶೇ 35ರಷ್ಟು ಹಾಜರಾತಿ:

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ ದಡ್ಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ 220 ಪದವಿ ಪೂರ್ವ ಕಾಲೇಜುಗಳಲ್ಲಿ 22,500 ವಿದ್ಯಾರ್ಥಿಗಳು ಇದ್ದು, ಪ್ರಥಮ ದಿನದಂದು 5958 (ಶೇ35) ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು ಎಂದು ತಿಳಿಸಿದರು.

ಸೋಮವಾರದಿಂದ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ತರಗತಿಗಳಿಗೆಹಾಜರಾಗುವ ಸಾಧ್ಯತೆ ಇದೆ. ಶೇ 30ರಷ್ಟು ಪಠ್ಯಕ್ರಮವನ್ನು ಕಡಿತ ಮಾಡಲಾಗಿದೆ.ಆನ್‌ಲೈನ್‌ ತರಗತಿಗಳಿಗೆ ಕೆಲವು ವಿದ್ಯಾರ್ಥಿಗಳು ಹಾಜರಾಗಿಲ್ಲ. ಮತ್ತೆ ಕೆಲವರಿಗೆ ಪಾಠ ಸರಿಯಾಗಿ ಗ್ರಹಿಕೆಯಾಗಿಲ್ಲ.ಎಲ್ಲ ಪಠ್ಯವನ್ನು ಹೊಸದಾಗಿ ಬೋಧಿಸಲಾಗುವುದು ಎಂದರು.

ಶಾಲೆಗಳಿಗೆ ಭೇಟಿ:

ಐದಾರು ಪ್ರೌಢಶಾಲೆಗಳಿಗೆ ಭೇಟಿ ನೀಡಿದೆ. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಶಾಲೆಗಳಿಗೆ ಹಾಜರಾಗಿದ್ದರು. ವಿದ್ಯಾರ್ಥಿಗಳಿಂದಲೇ ತರಗತಿ ಆರಂಭ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವಾಸ ತುಂಬಲಾಯಿತು. ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ವಿ.ಹೊಸೂರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಒಟ್ಟು 2,33,764 ವಿದ್ಯಾರ್ಥಿಗಳ ಪೈಕಿ 83,991 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು ಎಂದು ತಿಳಿಸಿದರು.

39,824ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪೈಕಿ 14,795 ವಿದ್ಯಾರ್ಥಿಗಳು ಹಾಜರಾಗಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ 3433 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT