ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಉಪ ಚುನಾವಣೆ: ಮತದಾನಕ್ಕೆ ಸಕಲ ಸಿದ್ಧತೆ

297 ಮತದಾನ ಕೇಂದ್ರ ಸ್ಥಾಪನೆ; ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್
Last Updated 28 ಅಕ್ಟೋಬರ್ 2021, 12:45 IST
ಅಕ್ಷರ ಗಾತ್ರ

ವಿಜಯಪುರ: ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ.30 ರಂದು ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಮತದಾನ ನಡೆಯಲಿದೆ ಎಂದು ಹೇಳಿದರು.

ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,20,844 ಪುರುಷ ಮತದಾರರು, 1,13,561 ಮಹಿಳಾ ಮತದಾರರು, 32 ಇತರೆ, 147 ಸೇವಾ ಮತದಾರರು ಸೇರಿದಂತೆ ಒಟ್ಟು 2,34,584 ಮತದಾರರು ಇದ್ದಾರೆ ಎಂದು ಅವರು ಹೇಳಿದರು.

ಒಟ್ಟು 271 ಮತದಾನ ಕೇಂದ್ರ ಹಾಗೂ 26 ಹೆಚ್ಚುವರಿ ಮತದಾನ ಕೇಂದ್ರಗಳು ಸೇರಿದಂತೆ ಒಟ್ಟು 297 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 7 ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು, 22 ಸೆಕ್ಟರ್ ಆಫೀಸರ್ ಗಳು, 18 ಫ್ಲೈಯಿಂಗ್ ಸ್ಕ್ವೇಡ್‌, 21 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಮತದಾನ ಕಾರ್ಯಕ್ಕೆ 1308 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇದರಲ್ಲಿ 327 ಪಿಆರ್ ಓ, 327 ಎಪಿಆರ್ ಓ ಹಾಗೂ 654 ಪಿ.ಓ ಗಳನ್ನು ನಿಯೋಜಿಸಲಾಗಿದೆ. ಮತದಾನ ಕರ್ತವ್ಯಕ್ಕಾಗಿ 66 ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರನ್ನು ವಾಹನಗಳಲ್ಲಿ ಮತಗಟ್ಟೆಗೆ ಕರೆದುಕೊಂಡು ಬರುವುದಕ್ಕೆ, ಕರೆದುಕೊಂಡು ಹೋಗುವುದಕ್ಕೆ ನಿಷೇಧಿಸಲಾಗಿದೆ ಎಂದರು.

ಶೇ 93ರಷ್ಟು ಕೋವಿಡ್‌ ಲಸಿಕೆ:

ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 93 ರಷ್ಟು ಕೋವಿಡ್‌ ಲಸಿಕಾಕರಣ ಮಾಡಲಾಗಿದೆ ಎಂದು ಅವರು ತಿಳಿಸಿದರು.

24 ಪ್ರಕರಣ ದಾಖಲು:

ಸಿಂದಗಿ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಮತ್ತು ಕೋವಿಡ್‌ ನಿರ್ಬಂಧ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೆ 53 ದೂರುಗಳು ಬಂದಿದೆ ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ್‌ ತಿಳಿಸಿದರು.

ಕೋವಿಡ್‌ ನಿಯಮ ಉಲ್ಲಂಘನೆ ಹಾಗೂ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 13, ಕೋವಿಡ್‌ ನಿರ್ಬಂಧ ಉಲ್ಲಂಘನೆಗೆ ಸಂಬಂಧಿಸಿದಂತೆ 8 ಹಾಗೂ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 2 ಹಾಗೂ ಎರಡು ಪಕ್ಷಗಳ ಕಾರ್ಯಕರ್ತರ ಗಲಾಟೆಗೆ ಸಂಬಂಧಿಸಿದಂತೆ ಒಂದು ಸೇರಿದಂತೆ ಒಟ್ಟು ಇದುವರೆಗೆ 24 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಡಿ. ಆನಂದ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

***

307 ಲೀಟರ್‌ ಮದ್ಯ ವಶ

ವಿಜಯಪುರ: ಸಿಂದಗಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೆ 307 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ್‌ ತಿಳಿಸಿದರು.

ಅಬಕಾರಿ ಸಿಬ್ಬಂದಿ ₹ 1,57,714 ಬೆಲೆ ಬಾಳುವ 277 ಲೀಟರ್ ಮದ್ಯ, 4 ಕೆ.ಜಿ ಗಾಂಜಾ, 7 ದ್ವಿಚಕ್ರವಾಹನ, 1 ಕಾರನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು 30 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

***

ಮತದಾನ: ಪೊಲೀಸ್‌ ನಿಯೋಜನೆ

ವಿಜಯಪುರ: ಸಿಂದಗಿ ಉಪ ಚುನಾವಣಾ ಮತದಾನ ಶಾಂತಿಯುತವಾಗಿ ನಡೆಸುವ ಸಂಬಂಧ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ತಿಳಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಡಿವೈಎಸ್ಪಿ 2, ಸಿಪಿಐ 4, ಪಿಎಸ್ಐ 22, ಎಎಸ್ಐ 70, ಹೆಡ್ ಕಾನ್‌ಸ್ಟೆಬಲ್ ಮತ್ತು ಪೊಲೀಸ್ ಕಾನ್‌ ಸ್ಟೆಬಲ್ 477, ಡಿಎಆರ್ 40, ಐಆರ್‌ಬಿ 180, ಸಿಐಎಸ್ಎಫ್ 185 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

***

ವೃದ್ಧರು, ಅಂಗವಿಕಲರಿಗೆ ವಾಹನ

ವಿಜಯಪುರ: ಸಿಂದಗಿ ಉಪ ಚುನಾವಣೆಗೆ ಸಂಬಂಧಿಸಿದಂತೆ ವಿಶೇಷ ಮತದಾರರ ಪೋಸ್ಟಲ್ ಬ್ಯಾಲೆಟ್‌ಗಳನ್ನು ಈಗಾಗಲೇ ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದು, 892 ಜನ ಹಿರಿಯ ಮತದಾರರು(80 ವರ್ಷ ಮೇಲ್ಪಟ್ಟ), 402 ಅಂಗವಿಕಲ ಮತದಾರರು ಇದ್ದು, ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ್‌ ತಿಳಿಸಿದರು.

ಎರಡು ’ಸಖಿ‘ ಮತದಾನ ಕೇಂದ್ರ, ಒಂದು ಅಂಗವಿಕಲರಿಗಾಗಿ ವಿಶೇಷ ಮತದಾನ ಕೇಂದ್ರ ತೆರೆಯಲಾಗಿದೆ. 180 ವೆಬ್ ಕಾಸ್ಟಿಂಗ್ ಮತದಾನ ಕೇಂದ್ರಗಳನ್ನೂ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

***

ನ.2 ರಂದು ಮತ ಎಣಿಕೆ

ವಿಜಯಪುರ: ನಗರದ ಸೈನಿಕ ಶಾಲೆಯ ಒಡೆಯರ್ ಹೌಸ್‌ನಲ್ಲಿ ನವೆಂಬರ್‌ 2 ರಂದು ಬೆಳಿಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ್‌ ತಿಳಿಸಿದರು.

14 ಮತಎಣಿಕೆ ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, 2 ಕೌಂಟಿಂಗ್ ಹಾಲ್‌ಗಳನ್ನು ನಿಗದಿಪಡಿಸಿದೆ. ಪ್ರತಿ ಕೌಂಟಿಂಗ್ ಹಾಲ್‌ನಲ್ಲಿ ತಲಾ 7 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಮತ ಎಣಿಕೆಗೆ40 ಸಿಬ್ಬಂದಿ ನಿಯೋಜನೆ ಮಾಡಿದ್ದು, ಇದರಲ್ಲಿ 20 ಸೂಪರ್ ವೈಸರ್ ಹಾಗೂ 20 ಸಹಾಯಕ ಮತ ಎಣಿಕೆದಾರರ (ಕೌಂಟಿಂಗ್ ಅಸಿಸ್ಟೆಂಟ್) ನೇಮಕ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಸಿಂದಗಿ ಆರ್ .ಡಿ. ಪಾಟೀಲ್ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT