ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತ್ಯಾಜ್ಯ ವಿಲೇವಾರಿ ಅವೈಜ್ಞಾನಿಕ

ತಾಳಿಕೋಟೆ ಪಟ್ಟಣದಲ್ಲಿ ಬೂದಿಯಾಗುತ್ತಿದೆ ಕಸ; ಪರಿಸರಕ್ಕೆ ಮಾರಕ
Last Updated 12 ಮಾರ್ಚ್ 2023, 12:12 IST
ಅಕ್ಷರ ಗಾತ್ರ

ತಾಳಿಕೋಟೆ: ‘ಬೇರೆ ಮಾಡಿ, ಎಲ್ಲ ಬೇರೆ ಮಾಡಿ, ಅದು ಒಣಗಿದ್ದಿರಲಿ..., ಅದು ಹಸಿಯಾಗಿರಲಿ... ಬೇರೆ ಮಾಡಿ... ಎಲ್ಲ.. ಬೇರೆ ಮಾಡಿ’ ಹೀಗೆ ಕಸ ವಿಂಗಡಣೆ, ಸಂಗ್ರಹಣೆಯ ಮಧುರ ಗೀತೆಗಳು ನಿತ್ಯ ಓಣಿಓಣಿಗಳಲ್ಲಿ ಮೊಳಗುತ್ತವೆ.

ಪುರಸಭೆಯ ಕಸ ಸಾಗಾಣಿಕೆ ವಾಹನದ ಈ ಹಾಡು ಕೇಳಿ ಬರುತ್ತಿದ್ದಂತೆ ಮನೆ,ಮನೆಗಳಲ್ಲಿ ಕಸದ ಡಬ್ಬಿಗಳು ಮೇಲೇಳುತ್ತವೆ. ಮನೆಯವರು ತಂದು ಕಸದ ವಾಹನಕ್ಕೆ ಕಸ ಸುರಿಯುತ್ತಾರೆ. ಆದರೆ, ಹಾಡು ಹಾಡಾಗಿಯೇ ಉಳಿದಿದೆ.

ಪುರಸಭೆ ಒಣ, ಹಸಿ ತ್ಯಾಜ್ಯಕ್ಕೆ ಎರಡು ಪ್ರತ್ಯೇಕವಾಗಿ ಬಕೆಟ್‌ಗಳನ್ನು ಒದಗಿಸಿದ್ದರೂ ಒಣ ಕಸ, ಹಸಿ ಕಸ ಮನೆಯವರೂ ಬೇರೆ ಮಾಡಿರುವುದಿಲ್ಲ. ಅದಕ್ಕೆ ಪುರಸಭೆಯವರೂ ಆಕ್ಷೇಪಿಸುವುದಿಲ್ಲ. ಇದರಿಂದಾಗಿ ಬಹು ಅಮೂಲ್ಯ ಸಾವಯವ ಗೊಬ್ಬರವಾಗಬೇಕಿದ್ದ ಹಸಿ ತ್ಯಾಜ್ಯವು ಒಣ ತ್ಯಾಜ್ಯದೊಂದಿಗೆ ಬೆರೆತು ಪುರಸಭೆಯ ಕಸದ ಸಂಗ್ರಹಗಾರಕ್ಕೆ ತಲುಪುತ್ತದೆ. ಅಲ್ಲಿಯೂ ಅದು ಸಮರ್ಪಕವಾಗಿ ಬೇರ್ಪಡುವುದಿಲ್ಲ.

ಪಟ್ಟಣದಲ್ಲಿ ಮನೆಮನೆಗಳಿಂದ ಬೆಳಗಿನ ಅವಧಿಗಳಲ್ಲಿ ಹಾಗೂ ಸಂಜೆ ಅಂಗಡಿಗಳಿಂದ ಘನ ತ್ಯಾಜ್ಯ ಸಂಗ್ರಹದ ಕೆಲಸವನ್ನು ಪುರಸಭೆಯ ವಾಹನ ಮಾಡುತ್ತಿವೆ. ಈ ಕಸವನ್ನೆಲ್ಲ ಸಂಗ್ರಹಿಸಿ ಪಟ್ಟಣದಿಂದ ಮೂರು ಕಿ.ಮೀ. ದೂರದಲ್ಲಿನ ತ್ಯಾಜ್ಯ ಸಂಗ್ರಹಗಾರಕ್ಕೆ ಕಳಿಸಲಾಗುತ್ತದೆ.

‘ಕೆಲವೆಡೆ ಸಂಗ್ರಹಿಸಿದ ಕಸವನ್ನು ವಿಲೇವಾರಿ ಬದಲು, ಅಲ್ಲಿಯೇ ಬೆಂಕಿ ಹಚ್ಚುವ ರೂಢಿಯನ್ನು ಸ್ವಚ್ಛತಾ ಸಿಬ್ಬಂದಿ ಮಾಡುತ್ತಿದೆ, ಇದು ಪರಿಸರಕ್ಕೆ ಹಾನಿಯಾಗುತ್ತಿದೆ’ ಎಂದು ಕಾಶಿನಾಥ ಹಿರೇಮಠ ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕರು ಈ ವ್ಯವಸ್ಥೆ ಮಧ್ಯೆಯೇ ಕಸವನ್ನು ರಸ್ತೆಗೆ, ಚರಂಡಿಗೆ ಚೆಲ್ಲುವ ಚಾಳಿಯನ್ನು ಬಿಟ್ಟಿಲ್ಲ. ವಾಹನ ಬರುತ್ತಿಲ್ಲ ಎಂಬ ಕಾರಣ ನೀಡುತ್ತಾರೆ. ಇದರಿಂದ ಸ್ವಚ್ಛತೆ, ನೈರ್ಮಲ್ಯ ಕಷ್ಟವಾಗಿದೆ.

ದೇವರಹಿಪ್ಪರಗಿ ರಸ್ತೆಯಲ್ಲಿರುವ ಘನತ್ಯಾಜ್ಯ ಘಟಕದಲ್ಲಿ ಸಾವಯವ ಗೊಬ್ಬರ ತಯಾರಿ ನಡೆಯುತ್ತಿಲ್ಲ. ಅಪಾರರಾಶಿ ಬಿದ್ದಿರುವ ಘನತ್ಯಾಜ್ಯಕ್ಕೆ ಬೆಂಕಿ ಬಿದ್ದು, ನಿರಂತರವಾಗಿ ಹೊಗೆಯಾಡುತ್ತಿದೆ. ಅದು ವಾತಾವರಣ ಸೇರಿ ವಾಯು ಮಾಲಿನ್ಯಕ್ಕೆ ಕಾರಣವಾಗುವ ಜೊತೆಗೆ ಅಪಾರ ಪ್ರಮಾಣದ ತ್ಯಾಜ್ಯ ಕಾಂಪೋಸ್ಟ್‌ ಆಗದೇ ಸುಟ್ಟು ಬೂದಿಯಾಗುವುದರಿಂದ ಪುರಸಭೆಗೆ ಬರಬಹುದಾದ ಲಕ್ಷಾಂತರ ಮೌಲ್ಯದ ಆದಾಯಕ್ಕೂ ಕೋತಾ, ಇತ್ತ ಪರಿಸರ ಮಾಲಿನ್ಯವೂ ಕೂಡ.

ಪಟ್ಟಣದ ಹಸಿರು ಸಂಪದ ಬಳಗ, ಅರಣ್ಯ ಇಲಾಖೆ ಸಹಯೋಗದಲ್ಲಿ ಪಟ್ಟಣ ಹಸಿರೀಕರಣವಾಗುತ್ತಿದೆ. ಆದರೆ, ಸ್ವಚ್ಛತೆ ಗಗನ ಕುಸುಮವಾಗಿದೆ. ಇದಕ್ಕೆ ಪುರಸಭೆಯ ಕಾರ್ಯದಲ್ಲಿ ನಾಗರಿಕರು ಕೈ ಜೋಡಿಸದಿರುವುದೂ ಅಷ್ಟೇ ಕಾರಣವಾಗಿದೆ. ಮದುವೆ ಮಂಟಪಗಳಿಂದ, ಡಾಬಾಗಳಿಂದ ಕೂಡ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಲೋಟ, ತಟ್ಟೆ ರೂಪದಲ್ಲಿ ಹೊರಬೀಳುತ್ತವೆ. ಮಾಲ್‌ಗಳು, ದೊಡ್ಡ ಅಂಗಡಿಗಳವರು ಕೂಡ ತಮ್ಮ ಮಾರಾಟದ ವಸ್ತುಗಳ ಮೇಲಿನ ಪ್ಲಾಸ್ಟಿಕ್ ಅನ್ನು ಕಸದ ಗಾಡಿಯ ಹೊರತಾಗಿಯೂ ಹೊರಗೆ ಚೆಲ್ಲುವುದು ಸರ್ವೇ ಸಾಮಾನ್ಯವಾಗಿದೆ.

ಸುಂದರ ಪಟ್ಟಣವಾಗಿಸಬೇಕೆಂದು ಶಾಸಕ ಎ.ಎಸ್‌.‍ಪಾಟೀಲ ನಡಹಳ್ಳಿ ಅವರು ಪಟ್ಟಣದ ಸೌಂದರ್ಯಕ್ಕೆ ಕೋಟ್ಯಂತರ ರೂಪಾಯಿ ತಂದು ರಸ್ತೆ, ವಿದ್ಯುದ್ದೀಪಗಳಿಂದ ಝಗಮಗಿಸುವಂತೆ ಮಾಡಿದ್ದಾರೆ.

ಪುರಸಭೆ ಸದಸ್ಯ ಜೈಸಿಂಗ್‌ ಮೂಲಿಮನಿ ಅವರ ಪ್ರಯತ್ನದಿಂದ ಬಾಲಾಜಿ ಮಂದಿರದ ಹಿಂಭಾಗ ಹಾಗೂ ಅಕ್ಕಮಹಾದೇವಿ ಮಂದಿರದ ರಸ್ತೆಯ ಕಸದ ತೊಟ್ಟಿಗಳ ಸ್ಥಳಗಳೀಗ ಪುಟ್ಟ ಸುಂದರ ಉದ್ಯಾನಗಳಾಗಿ ಬದಲಾಗಿವೆ. ಖಾಸ್ಗತಮಠದ ಸಿದ್ಧಲಿಂಗದೇವರು ತಮ್ಮ ಪದವಿ ಅಧ್ಯಯನದ ಬಿಡುವಿನಲ್ಲಿ ಕಸದ ರಾಶಿಗಳು ಬೀಳುವ ಸ್ಥಳಗಳಲ್ಲಿ ಜಾಗೃತಿ ಕಾರ್ಯ ಮಾಡುತ್ತಲೇ ಇದ್ದಾರೆ. ಇಚೇಗೆ ಟಿಪ್ಪು ನಗರದಲ್ಲಿ ಕಸದ ಸ್ಥಳವನ್ನು ಯುವಬಳಗದ ನೆರವಿನೊಂದಿಗೆ ಸ್ವಚ್ಛಗೊಳಿಸಿಕಟ್ಟೆ ನಿರ್ಮಿಸಿ, ಸುಣ್ಣ ಬಳಿದು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ.

***

ನಿತ್ಯ ವಾಹನಗಳಲ್ಲಿ ಕಸ ಸಂಗ್ರಹವಾಗುತ್ತಿದೆ. ಒಣತ್ಯಾಜ್ಯ, ಹಸಿ ತ್ಯಾಜ್ಯ ವಿಂಗಡಣೆ ಸದ್ಯ ನಡೆದಿಲ್ಲ. ಘನತ್ಯಾಜ್ಯ ಕಾಂಪೋಸ್ಟ್‌ ಮಾಡಿಸುವ ಚಿಂತನೆ ನಡೆದಿದೆ
–ಸುರೇಶ ನಾಯಕ-ಮುಖ್ಯಾಧಿಕಾರಿ ಪುರಸಭೆ ತಾಳಿಕೋಟೆ

***

ಪುರಸಭೆಯ ಸ್ವಚ್ಛತಾ ಕಾರ್ಯದಲ್ಲಿ ನಾಗರಿಕರೂ ಕೈಜೋಡಿಸಬೇಕು. ಪುರಸಭೆಯು ಈ ದಿಸೆಯಲ್ಲಿ ಜಾಗೃತಿ ಕಾರ್ಯ ನಡೆಸಬೇಕು
–ಡಾ.ವಿಜಯಕುಮಾರ ಕಾರ್ಚಿ, ಅಧ್ಯಕ್ಷ, ಹಸಿರು ಸಂಪದ ಬಳಗ, ತಾಳಿಕೋಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT