ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಗುಂದಿ: ನಿರ್ಲಕ್ಷಿತ ಕಲ್ಯಾಣ ಚಾಲುಕ್ಯರ ದೇಗುಲ

ಜೀರ್ಣೋದ್ದಾರದ ನಿರೀಕ್ಷೆಯಲ್ಲಿ ಹೆಬ್ಬಾಳ ಸ್ಮಾರಕ
Last Updated 8 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ನಿಡಗುಂದಿ: ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿರುವ 10ನೇ ಶತಮಾನದ ಐತಿಹಾಸಿಕ ದೇವಸ್ಥಾನಗಳ ಸಮುಚ್ಛಯ ನಿರ್ಲಕ್ಷಕ್ಕೆ ಒಳಗಾಗಿದ್ದು, ಜೀರ್ಣೋದ್ಧಾರದ ನಿರೀಕ್ಷೆಯಲ್ಲಿವೆ.

ಪಟ್ಟಣದಿಂದ 10 ಕಿ.ಮೀ ದೂರದಲ್ಲಿರುವ ಹೆಬ್ಬಾಳ ಗ್ರಾಮ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅಗ್ರಹಾರವಾಗಿತ್ತು. ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ವಿವಿಧ ದೇವಸ್ಥಾನಗಳ ಸಮುಚ್ಛಯಗಳು ನಿರ್ವಹಣೆ ಇಲ್ಲದೇ ಇದೀಗ ನಿರ್ಲಕ್ಷಕ್ಕೆ ಒಳಗಾಗಿವೆ.

ಸುಮಾರು ಒಂದೂವರೆ ಎಕರೆ ವಿಶಾಲ ಪ್ರದೇಶದಲ್ಲಿ ಹರಡಿರುವ ಈ ಸಮುಚ್ಛಯದಲ್ಲಿ ಮಲ್ಲಿಕಾರ್ಜುನ, ರಾಮಲಿಂಗೇಶ್ವರ, ಈಶ್ವರ ದೇವಾಲಯಗಳು ಪ್ರತ್ಯೇಕವಾಗಿವೆ. ಇನ್ನೊಂದು ಶಕ್ತಿ ದೇವತೆಯ ದೇವಸ್ಥಾನ ಸಂಪೂರ್ಣ ಅವಸಾನದ ಹಂತದಲ್ಲಿದೆ.

ದೇವಸ್ಥಾನಗಳ ಸಮುಚ್ಛಯಗಳಲ್ಲಿ ಮುಖ್ಯ ದೇವಸ್ಥಾನವಾದ ಮಲ್ಲಿಕಾರ್ಜುನ ದೇವಸ್ಥಾನದ ನಿರ್ಮಾಣ ಕಲೆ, ಕೌಶಲಗಳಿಗೆ ಹಿಡಿದ ಕನ್ನಡಿಯಾಗಿದೆ. ಕಲ್ಯಾಣ ಚಾಲುಕ್ಯರ ಶೈಲಿಯ ಕಂಬಗಳ ಕೆತ್ತನೆ ವಿಶೇಷವಾಗಿದೆ.

ಗರ್ಭ ಗುಡಿಯಲ್ಲಿ ಲಿಂಗ ಇದ್ದು, ಮುಂದೆ ಸಭಾಮಂಟಪವಿದೆ. ಕಲ್ಯಾಣ ಚಾಲುಕ್ಯರ ಕಾಲದ ಕಂಬಗಳಿವೆ. ಈ ದೇವಸ್ಥಾನದ ಹಿಂದಿನ ಅರ್ಧಭಾಗವನ್ನು ಪುರಾತತ್ವ ಇಲಾಖೆ ಜೀರ್ಣೋದ್ಧಾರ ಮಾಡಿದೆ.

ರಾಮಲಿಂಗೇಶ್ವರ ಹಾಗೂ ಸಂಗಮೇಶ್ವರ ದೇವಸ್ಥಾನವಿದ್ದು, ನಿಧಿಗಾಗಿ ಅಗೆತ ಹಾಗೂ ಪಾಳು ಬಿದ್ದ ಕಾರಣ 2008 ರಲ್ಲಿ ಪುರಾತತ್ವ ಇಲಾಖೆ ಇವುಗಳನ್ನು ಭಾಗಶಃ ಜೀರ್ಣೋದ್ದಾರ ಮಾಡಿದೆ. ಸುತ್ತಲೂ ತಂತಿ ಬೇಲಿ ಅಳವಡಿಸಿದೆ.

ಯುಗಾದಿ ಪ್ರಥಮ ಸೂರ್ಯಕಿರಣ:ಯುಗಾದಿಯ ಬಲಿಪಾಡ್ಯಿಮೆಯಂದು ಮಲ್ಲಿಕಾರ್ಜುನ ದೇವಸ್ಥಾನದ ಈಶ್ವರ ಲಿಂಗದ ಮೇಲೆ ಸುತ್ತಲಿನ ಬಾಗಿಲುಗಳ ಮೂಲಕ ಸೂರ್ಯನ ಪ್ರಥಮ ಕಿರಣ ಬೀಳುವಂತೆ ದೇವಸ್ಥಾನ ನಿರ್ಮಿಸಲಾಗಿದೆ.

ಐತಿಹಾಸಿಕ ಈ ದೇವಸ್ಥಾನಗಳ ಸಮುಚ್ಛಯವನ್ನು ಮುಂದಿನ ಪೀಳಿಗೆಗೆ ರಕ್ಷಿಸಬೇಕು, ಸಂಪೂರ್ಣ ಪಾಳು ಬಿದ್ದಿರುವ ಭ್ರಮರಾಂಭ ದೇವಸ್ಥಾನ ಸೇರಿ ದೇವಸ್ಥಾನಗಳ ಜೀರ್ಣೋದ್ಧಾರದ ಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು, ಶಿಖರ ನಿರ್ಮಿಸಬೇಕು, ಸ್ಥಳದ ಐತಿಹಾಸಿಕ ಹಿನ್ನಲೆ, ಶಾಸನದ ಬಗ್ಗೆ ನಾಮಫಲಕ ಅಳವಡಿಸಬೇಕು, ದೇವಸ್ಥಾನಕ್ಕೆ ಪ್ರಚಾರ ಸಿಗಬೇಕು ಎಂದು ಗ್ರಾಮದ ರಾಮನಗೌಡ ಪಾಟೀಲ, ಮಹಾಂತೇಶ ಒಣರೊಟ್ಟಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT