ಗುರುವಾರ , ಮೇ 26, 2022
24 °C
ಹದಗೆಟ್ಟ ಜನರ ಆರೋಗ್ಯ; ಮಹಾನಗರ ಪಾಲಿಕೆ ನಿರ್ಲಕ್ಷ್ಯ

ನಳದ ನೀರಿಗೆ ಸೇರುವ ಯುಜಿಡಿ ಕೊಳಚೆ; ಬಾಯಾರಿದ ಖಾಜಾನಗರ, ಗೋಡಬೊಳೆ ಮಾಳ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮಳೆಗಾಲದಲ್ಲಿ 10 ದಿನಕ್ಕೊಮ್ಮೆ ಕುಡಿಯುವ ನೀರು, ಬೇಸಿಗೆ ಬಂತೆಂದರೆ 15 ದಿನಕ್ಕೊಮ್ಮೆ ನೀರು. ಅದೂ ಎರಡು ತಾಸು ಮಾತ್ರ ಪೂರೈಕೆ. 

ಇದು, ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ತಾಜ್‌ಬಾವಡಿ, ಕೋಟೆ ಗೋಡೆ ನಡುವೆ ಇರುವ  ಗೋಡಬೊಳೆ ಮಾಳ, ಖಾಜಾನಗರ ಸ್ಲಂ, ತಾಜ್‌ಬಾವಡಿ ರಸ್ತೆ, ಮೀನಾಕ್ಷಿ ಚೌಕ್‌ ಮತ್ತು ನವಭಾಗ್‌ ರೋಡ್‌ ಒಳಗೊಂಡ 31ನೇ ವಾರ್ಡ್‌ನ ಸ್ಥಿತಿ.

ಹೌದು, 24X7 ನೀರು ಪೂರೈಕೆ ಯೋಜನೆಗಾಗಿ ಒಂದು ವರ್ಷದ ಹಿಂದೆಯೇ ಈ ಪ್ರದೇಶಗಳಲ್ಲಿ ರಸ್ತೆ ಅಗೆದು ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ, ಇದುವರೆಗೂ ಹನಿ ನೀರು ಬಂದಿಲ್ಲ. 10, 15 ದಿನಕ್ಕೊಮ್ಮೆ ಪೂರೈಕೆಯಾಗುವ ನೀರನ್ನೇ ಕಾಪಿಟ್ಟುಕೊಂಡು ಬಳಸಬೇಕಾದ ಸ್ಥಿತಿ 31ನೇ ವಾರ್ಡ್‌ನ ಜನರನ್ನು ಬಾಯಾರುವಂತೆ ಮಾಡಿದೆ.

ಮನೆಯಲ್ಲಿ ನೀರು ಖಾಲಿಯಾದರೆ ವಾರ್ಡಿನ ಜನರು ತಾಜ್‌ಬಾವಡಿ ಬಳಿ ಇರುವ ಕೊಳವೆಬಾವಿ ಬಳಿ ವರೆಗೆ ನಡೆದುಕೊಂಡು ಬಂದು ನೀರು ತೆಗೆದುಕೊಂಡು ಹೋಗಬೇಕಾಗುತ್ತದೆ. 

ಖಾಜಾನಗರಕ್ಕೆ ನೀರು ಪೂರೈಕೆಯಾಗುವ ದಿನದಂದೇ ಯುಜಿಡಿ ಬಂದ್‌ ಆಗಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿರುತ್ತದೆ. ಕುಡಿಯುವ ನೀರು ಪೂರೈಸುವ ನಳವೂ ಯುಜಿಡಿ ತ್ಯಾಜ್ಯದಲ್ಲಿ ಮುಳುಗಿ ಹೋಗುತ್ತದೆ. ಮನೆಯೊಳಗೂ ಯುಜಿಡಿ ತ್ಯಾಜ್ಯ ಸೇರಿಕೊಳ್ಳುತ್ತದೆ ಎನ್ನುತ್ತಾರೆ ಇಲ್ಲಿಯ ನಿವಾಸಿಗಳಾದ ಹಾಜಿರಾ ಕಲಾದಗಿ, ರುಕ್ಕಯ್ಯ ಮುಲ್ಲಾ.

ಖಾಜಾನಗರದಲ್ಲಿ ಜೀವನ ನಡೆಸೋದು ಕಷ್ಟವಾಗಿದೆ. ಬಡವರಿಗೆ ಮನೆಗಳಿಲ್ಲ, ಶೌಚಾಲಯಗಳಿಲ್ಲ, ಸ್ವಚ್ಛತೆ ಇಲ್ಲ, ಉತ್ತಮ ರಸ್ತೆಯಿಲ್ಲ, ರಾತ್ರಿಯಾಗುತ್ತಿರುವಂತೆ ಸೊಳ್ಳೆ ಕಾಟ, ಕುಡಿಯುವ ನೀರು ಬಿಟ್ಟ ದಿನದಂದು ನೀರು ತುಂಬಿಕೊಳ್ಳಲು ಗಲಾಟೆ, ಗದ್ದಲ ಹೇಳತೀರದು ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮುಬಾರಕ್‌ ಬಾಗವಾನ.

ಹದಗೆಟ್ಟ ರಸ್ತೆಗಳು:

ಖಾಜಾನಗರ, ಗೋಡಬೊಳೆ ಮಾಳದ ಒಳ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಐತಿಹಾಸಿಕ ತಾಜ್‌ಬಾವಡಿ ಇರುವ ಪ್ರದೇಶದಲ್ಲಿ ಸಂಪರ್ಕ ರಸ್ತೆಗಳೇ ಹದಗೆಟ್ಟಿವೆ. ಮಳೆಗಾಲದಲ್ಲಿ ಇಲ್ಲಿಯ ಜನರ ಗೋಳು ಕೇಳೋರೇ ಇಲ್ಲದಂತಾಗಿದೆ.

ರಸ್ತೆ ನಡುವೆ ಇರುವ ಯುಜಿಡಿ ಛೇಂಬರ್‌ ಆಗಾಗ ಕಿತ್ತುಹೋಗುತ್ತಿದ್ದು, ಎಲ್ಲೆಂದರಲ್ಲಿ ಕೊಳಚೆ ನೀರು ಹರಿಯುತ್ತಿದೆ. ಸ್ವಚ್ಛತೆ ಮಾಯವಾಗಿದೆ. ಇಷ್ಟಾದರೂ ಮಹಾನಗರ ಪಾಲಿಕೆ ಸಿಬ್ಬಂದಿ ಇತ್ತ ಮುಖ ತೋರಿಸುತ್ತಿಲ್ಲ ಎನ್ನುತ್ತಾರೆ ಮುಬಾರಕ್‌ ಬಾಗವಾನ.

***

ಖಾಜಾನಗರದಲ್ಲಿ ವೈಯಕ್ತಿಕ ಶೌಚಾಲಯಗಳ ಕೊರತೆ ಇದ್ದು, ಇಲ್ಲಿಯ ನಿವಾಸಿಗಳಿಗೆ ಇರುವ ಸಾರ್ವಜನಿಕ ಶೌಚಾಲಯ ನಿರ್ವಹಣೆ ಸರಿಯಾಗಿಲ್ಲದೇ ಗಬ್ಬೆದ್ದು ನಾರುತ್ತಿದೆ. ಆದರೂ ಮಲ,ಮೂತ್ರ ವಿಸರ್ಜನೆಗೆ ಹಣಕೊಟ್ಟು ಹೋಗಬೇಕಾದ ಸ್ಥಿತಿ ಇದೆ

–ಮುಬಾರಕ್‌ ಬಾಗವಾನ, ಹಣ್ಣಿನ ವ್ಯಾಪಾರಿ, ಖಾಜಾನಗರ

***

ಗೋಡಬೊಳೆ ಮಾಳಾ ಸೇರಿದಂತೆ 31ನೇ ವಾರ್ಡ್‌ಗೆ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಪೈಪ್‌ಲೈನ್‌ ಅಳವಡಿಸಿ ವರ್ಷವಾದರೂ 24X7 ನೀರು ಪೂರೈಕೆ ಯೋಜನೆ ಆರಂಭವಾಗಿಲ್ಲ

–ಅರುಣ ಗೌಳಿ, ಗೋಡಬೋಳೆ ಮಾಳ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು