ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೆ ಸನ್ಮಾನ, ಮಕ್ಕಳಿಂದಲೇ ಚಾಲನೆ

ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತರಗತಿಗಳಿಗೆ ಬರಮಾಡಿಕೊಂಡ ಶಿಕ್ಷಕರು
Last Updated 2 ಜನವರಿ 2021, 4:13 IST
ಅಕ್ಷರ ಗಾತ್ರ

ತಿಕೋಟಾ: ಶುಕ್ರವಾರದಿಂದ ಮರಳಿ ಪ್ರಾರಂಭವಾದ ಶಿಕ್ಷಣ ಇಲಾಖೆಯ ವಿದ್ಯಾಗಮ ಕಾರ್ಯಕ್ರಮದ ಅಂಗವಾಗಿ ಮಗುವಿಗೆ ಶಾಲು ಹೊದಿಸಿ ಸನ್ಮಾನಿಸಿ, ಮಕ್ಕಳಿಂದಲೇ ರಿಬ್ಬನ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಿಗೆ ಆರತಿ ಎತ್ತಿ ಬೆಳಗಿ ವಿಜಯಪುರ ಜಿಲ್ಲೆಯ ಉಪನಿರ್ದೇಶಕ ಎನ್.ವಿ.ಹೋಸೂರ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಂಡರು.

ತಾಲ್ಲೂಕಿನ ಟಕ್ಕಳಕಿ ಎಲ್.ಟಿ.–1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಗುವಿನಿಂದಲೇ ರಿಬ್ಬನ್ ಕತ್ತರಿಸಿ ವಿದ್ಯಾಗಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಡಿಡಿಪಿಐ, ಕೊವಿಡ್ –19 ರ ಕಾರಣದಿಂದ ಈ ಶೈಕ್ಷಣಿಕ ವರ್ಷ ಸರಿಯಾಗಿ ನಡೆದಿಲ್ಲ. ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ದೊರೆತಿಲ್ಲ. ಕೊವಿಡ್ ನಿಯಮಗಳನ್ನು ಪಾಲನೆ ಮಾಡುತ್ತಾ ಮಕ್ಕಳ‌ ಆರೋಗ್ಯ ಗಮನದಲ್ಲಿಟ್ಟುಕೊಂಡು ಮಗುವಿನ ಕಲಿಕೆ ಸಾಗಬೇಕು ಎಂದು ಹೇಳಿದರು.

ಈ ಯೋಜನೆಯ ಪ್ರಾರಂಭಕ್ಕೆ ಎಸ್.ಡಿ.ಎಂ.ಸಿ ಹಾಗೂ ಪೋಷಕರ ಪ್ರೋತ್ಸಾಹದ ಅಗತ್ಯವಿದ್ದು, ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡುವ ಜವಾಬ್ದಾರಿ ಇಲಾಖೆಯದ್ದಾಗಿದೆ. ಕೊವಿಡ್ ನಿಯಮಾನುಸಾರ ಮಾಸ್ಕ್‌, ಸಾಮಾಜಿಕ ಅಂತರ ಸ್ಯಾನಿಟೈಸ್‌ ಬಳಕೆ ಇತ್ಯಾದಿ ಕ್ರಮಗಳನ್ನು ಪಾಲನೆ ಮಾಡುತ್ತಾ ವಿದ್ಯಾಗಮ ಯೋಜನೆಯನ್ನು ಯಶಸ್ವಿಯಾಗಿ ನಡೆಸಿ ಎಂದು ಹೇಳಿದರು.

ಟಕ್ಕಳಕಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಆರತಿ ಎತ್ತಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ನಂತರ ತರಗತಿಗೆ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಿ ಹಿಂದೆ ಕಲಿತ ವಿಷಯದ ಕುರಿತು ಪುನರ್ಮನನ ಮಾಡುವ ಮೂಲಕ ಮಕ್ಕಳೊಂದಿಗೆ ಬೆರೆತರು. ಹುಬನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯನ್ನು ಶಾಲು ಹೊದಿಸಿ ಸನ್ಮಾನ ಮಾಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಉಪನಿರ್ದೇಶಕ ಕಚೇರಿ ವಿಷಯ ಪರಿವೀಕ್ಷಕ ಪಿ.ಕೆ.ಬಿರಾದಾರ, ಟಕ್ಕಳಕಿ ಕ್ಲಸ್ಟರ್‌ನ ಸಿ.ಆರ್.ಪಿ ಮಲ್ಲಿಕಾರ್ಜುನ ಎಂ ಜೇವೂರ, ಮುಖ್ಯ ಶಿಕ್ಷಕ ಆರ್.ಎಚ್.ಚವ್ಹಾಣ, ಬನಶ್ರೀ ಹತ್ತಿ, ಎಸ್.ಎಸ್.ಕಾಸಬಾಗ್,ಸುರೇಶ ಕುಪ್ಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT