ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕಣ್ಣೆದುರಲ್ಲೇ ಪ್ರಾಣ ಕಳೆದುಕೊಂಡ ಆಪ್ತರು

Published 6 ಡಿಸೆಂಬರ್ 2023, 5:16 IST
Last Updated 6 ಡಿಸೆಂಬರ್ 2023, 5:16 IST
ಅಕ್ಷರ ಗಾತ್ರ

ವಿಜಯಪುರ: ‘ಬಿಹಾರದಲ್ಲಿ ಕೆಲಸ ಸಿಗಲಿಲ್ಲ. ಕೂಲಿಗೆಲಸ ಸಿಕ್ಕರೂ ಪರವಾಗಿಲ್ಲ ಎಂದು ಸ್ನೇಹಿತರಿಂದ ಸಾಲ ಪಡೆದು ವಿಜಯಪುರಕ್ಕೆ ಬಂದೆವು. ಬಡತನದ ಮಧ್ಯೆಯೇ ಬದುಕು ಕಟ್ಟಿಕೊಂಡೆವು. ಆದರೆ,
ನಮ್ಮೊಂದಿಗೆ ಬಂದವರೇ ಕಣ್ಣೆದುರೇ ಪ್ರಾಣ ಕಳೆದುಕೊಂಡಿದ್ದಾರೆ. ಏನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ’.

ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ‘ರಾಜ್‌ ಗುರು ಫುಡ್ಸ್‌’ ಗೋದಾಮಿನಲ್ಲಿ ಮೆಕ್ಕೆಜೋಳದ ರಾಶಿಯಲ್ಲಿ ಸಿಲುಕಿ ಸಾವನ್ನಪ್ಪಿದ ಏಳು ಕಾರ್ಮಿಕರ ಆಪ್ತರು ವ್ಯಕ್ತಪಡಿಸಿದ ನೋವು ಇದು.

ಆ ಗೋದಾಮಿನಲ್ಲಿ ದುಡಿಯುವ ಬಿಹಾರದ 150ಕ್ಕೂ ಹೆಚ್ಚು ಕಾರ್ಮಿಕರಲ್ಲಿ ಬಹುತೇಕರು 20 ರಿಂದ 35 ವರ್ಷ ವಯಸ್ಸಿನವರು. ಹತ್ತಾರು ವರ್ಷಗಳಿಂದ ಇಲ್ಲೇ ಕೂಲಿ ಮಾಡಿ, ಬದುಕು ಕಟ್ಟಿಕೊಂಡವರು.

ಊಟ ಮಾಡದೇ ಮತ್ತು ನೀರು ಕುಡಿಯದೇ ರಾತ್ರಿಯಿಡೀ ಅಲ್ಲಿ ಜಮಾವಣೆಗೊಂಡಿದ್ದ ಕಾರ್ಮಿಕರು, ‘ನಮ್ಮ ಆಪ್ತರು ಬದುಕಿ ಬರಲಿ. ಅವರಿಗೆ ಯಾವ ಸಮಸ್ಯೆಯೂ ಕಾಡದಿರಲಿ’ ಎಂದು ಪ್ರಾರ್ಥಿಸಿದರು.

‘ಮೃತರ ಕುಟುಂಬದವರಿಗೆ ಏನೆಂದು ಹೇಳಿ ಸಂತೈಸಬೇಕು ಎಂಬುದು ತಿಳಿಯುತ್ತಿಲ್ಲ. ಜೊತೆಗೆ ನಮ್ಮ ಮನೆಯಲ್ಲೂ ವಾಪಸ್‌  ಊರಿಗೆ ಬನ್ನಿ, ಹೇಗಾದರೂ ಮಾಡಿ ಇಲ್ಲಿಯೇ ಬದುಕಿದರಾಯಿತು ಎಂದು ಒಂದೇ ಸಮನೆ ಗೋಳಿಡುತ್ತಿದ್ದಾರೆ’ ಎಂದು ಕೂಲಿಕಾರ್ಮಿಕ ಸಿಯಾರಾಮ್ ಮುಖಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆಯಲ್ಲಿ ವಯಸ್ಸಾದ ಅಪ್ಪ, ಅಮ್ಮ, ನನ್ನನ್ನೇ ನಂಬಿರುವ ಪತ್ನಿ, ಮಕ್ಕಳನ್ನು ಸಾಕಲು ರಜೆಯನ್ನೂ ಪಡೆಯದೇ ದುಡಿಯುತ್ತಿರುವೆ. ಇಲ್ಲಿನ ದುರ್ಘಟನೆ ದಿಕ್ಕೇ ತೋಚುತ್ತಿಲ್ಲ. ಇಲ್ಲಿಯೇ ಇರಬೇಕೆ ಅಥವಾ ಊರಿಗೆ ಹೋಗಬಿಡಲೇ ಎಂಬ ಚಿಂತೆ ಕಾಡುತ್ತಿದೆ’ ಎಂದರು.

ಧ್ವನಿ ಕೇಳಿಸುತ್ತಿತ್ತು:

ಘಟನೆಯನ್ನು ನೆನಪಿಸಿಕೊಂಡ ಬಿಹಾರದ ಸಮಸ್ತಿಪುರ ಜಿಲ್ಲೆಯ ಪಟಡ್‌ದಿಹಾ ಗ್ರಾಮದ ಕೂಲಿಕಾರ್ಮಿಕ ಮುಖೇಶ್ ಯಾದವ್, ‘ಮೆಕ್ಕೆಜೋಳದ ರಾಶಿಯಲ್ಲಿ ಸಿಲುಕಿದವರು ರಕ್ಷಿಸುವಂತೆ ಅಂಗಲಾಚುತ್ತಿದ್ದರು. ಆದರೆ, ಅಷ್ಟರಲ್ಲಿ ಟನ್‌ಗಟ್ಟಲೇ ಮೆಕ್ಕೆಜೋಳ ಬಿದ್ದು, ಉಸಿರು ಚೆಲ್ಲಿದರು’ ಎಂದರು.

‘ಘಟನೆ ನಡೆದ ಕ್ಷಣ ಎಲ್ಲರೂ ಹೊರಗೆ ಓಡಿ ಜೀವ ಉಳಿಸಿಕೊಂಡಿದ್ದೇವೆ. ರಾಶಿಯಲ್ಲಿ ಸಿಲುಕಿದ್ದ ನಾಲ್ವರ ಕೈ, ಕಾಲು, ತಲೆ ಎಳೆದು ರಕ್ಷಿಸಿದ್ದೇವೆ’ ಎಂದರು.

‘ಮುಂಜಾನೆ 9 ರಿಂದ ರಾತ್ರಿ 12ರವರೆಗೆ ಗೋದಾಮಿನಲ್ಲಿ ಪ್ರತಿ ದಿನ ದುಡಿದರೆ, ₹500 ರಿಂದ ₹600 ಕೂಲಿ ಸಿಗುತ್ತದೆ. ಅದರಲ್ಲಿ ₹ 100 ಪ್ರತಿದಿನ ಊಟ, ಉಪಾಹಾರಕ್ಕೆ ಖರ್ಚಾಗುತ್ತದೆ. ಉಳಿದ ಹಣವನ್ನು ಕೂಡಿಸಿಟ್ಟು, ಊರಿನಲ್ಲಿರುವ ಕುಟುಂಬಕ್ಕೆ ಕಳುಹಿಸುತ್ತೇವೆ’ ಎಂದರು.

‘ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಊರಿಗೆ ಹೋಗಿ ಬರುತ್ತೇವೆ. ಊರಲ್ಲಿ ಯಾವುದೇ ಕೆಲಸ ಇಲ್ಲ. ಅಲ್ಲಿ ಕೂಲಿ ಕೆಲಸವೂ ಇಲ್ಲ. ಒಂದು ವೇಳೆ ಸಿಕ್ಕರೂ ₹ 200 ರಿಂದ ₹ 300 ಮಾತ್ರ. ಊರಿನಲ್ಲಿ ಅರ್ಧ ಎಕರೆ ಜಮೀನು ಇದೆ.  ನಾಲ್ವರು ಸಹೋದರರು ಇದ್ದಾರೆ, ‌ಬದುಕುವುದು ಹೇಗೆ? ಊರಲ್ಲಿ ಇದ್ದರೆ ಏನೂ ಪ್ರಯೋಜನವಿಲ್ಲ, ಕೂಲಿ‌ಗಾಗಿ ಇಲ್ಲಿಗೆ ಬಂದಿದ್ದೇವೆ’ ಎಂದು ಕಾರ್ಮಿಕ ಗಜೇಂದ್ರ ಯಾದವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT