ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಗೋದಾಮು ಮಾಲೀಕನ ಬಂಧನಕ್ಕೆ ಆಗ್ರಹ

ಕಾರ್ಮಿಕ, ರೈತ ಸಂಘಟನೆ, ಅಹಿಂದ ಮುಖಂಡರಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯ
Published 6 ಡಿಸೆಂಬರ್ 2023, 5:11 IST
Last Updated 6 ಡಿಸೆಂಬರ್ 2023, 5:11 IST
ಅಕ್ಷರ ಗಾತ್ರ

ವಿಜಯಪುರ: ನಗರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿರುವ ರಾಜ್‌ಗುರು ಮೆಕ್ಕೆಜೋಳ ಸಂಸ್ಕರಣ ಘಟಕದಲ್ಲಿ ನಡೆದ ಏಳು ಅಮಾಯಕ ಕಾರ್ಮಿಕರ ಸಾವಿಗೆ ಕಾರಣರಾದ ಮಾಲೀಕರನ್ನು ಕೂಡಲೇ ಬಂಧಿಸಬೇಕು ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಎಸ್.ಎಂ.ಪಾಟೀಲ್, ರೈತ ಮುಖಂಡ ಭೀಮಸಿ ಕಲಾದಗಿ, ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಜಿಲ್ಲಾ ಕುರಿಗಾರ ಸಂಘದ ಅಧ್ಯಕ್ಷ ಭೀರಪ್ಪ ಜುಮನಾಳ, ಕುರುಬ ಸಂಘದ ವಿಜಯಪುರ ನಗರ ಘಟಕ ಅಧ್ಯಕ್ಷ ರಾಜು ಕಗ್ಗೋಡ, ವಿಜಯಕುಮಾರ ಕಲಾದಗಿ, ಕಾರ್ಮಿಕ ಮುಖಂಡ ಪ್ರಭುಗೌಡ ಪಾಟೀಲ, ಎಐಯುಟಿಯುಸಿ ಕಾರ್ಮಿಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್‌.ಟಿ. ಆಗ್ರಹಿಸಿದ್ದಾರೆ.

ಈ ದುರ್ಘಟನೆಗೆ ಸಂಬಂಧಿಸಿದಂತೆ ಗೋದಾಮಿನ ಮಾಲೀಕರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತವು ಯಾವುದೇ ಪ್ರಭಾವಕ್ಕೆ ಒಳಗಾಗದೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ದೇಶದಲ್ಲಿ ಉದ್ಯೋಗಕ್ಕಾಗಿ ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ. ನಮ್ಮ ಸರ್ಕಾರ ವಲಸೆ ಕಾರ್ಮಿಕರ ಬಗ್ಗೆ ಯಾವುದೇ ಕಾಯ್ದೆ ಕಾನೂನುಗಳನ್ನು ರೂಪಿಸಿಲ್ಲ. ವಲಸೆ ಕಾರ್ಮಿಕರ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಬದುಕಿನುದ್ದಕ್ಕೂ ಅಭದ್ರತೆ ಕಾಡುತ್ತಿದೆ. ನಿರುದ್ಯೋಗ ದಿನೇ ದಿನೇ ಹೆಚ್ಚುತಿದೆ. ಆದರೆ, ಸರ್ಕಾರ ಉದ್ಯೋಗದ ಬಗ್ಗೆ ಯಾವುದೇ ನೀತಿ ರೂಪಿಸದಿರುವುದು ಖಂಡನಿಯ’ ಎಂದು ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದ್ದಾರೆ.

ಈ ವಲಸೆ ಕಾರ್ಮಿಕರು ಗುತ್ತಿಗೆದಾರನ ಮೂಲಕ ಬಿಹಾರದಿಂದ ವಿಜಯಪುರಕ್ಕೆ ಬಂದಿದ್ದರು. ಆದರೆ, ಗುತ್ತಿಗೆದಾರ, ಅಧಿಕಾರಿಗಳು ಮತ್ತು ಕಾರ್ಖಾನೆಯ ಮಾಲೀಕರ ನಿರ್ಲಕ್ಷ್ಯದಿಂದ ಏಳು ಜನ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು.

ಕ್ರಮಕ್ಕೆ ಆಗ್ರಹ:

ಸುಸಜ್ಜಿತವಲ್ಲದ ಗೋದಾಮಿನಲ್ಲಿ ರೈತರ ಕಾಳಿನ ವ್ಯಾಪಾರವನ್ನು ಮಾಡಿಕೊಂಡು, ದಾಸ್ತಾನುವನ್ನು ಮಾಡುತ್ತಿದ್ದಾರೆ.  ಇದು ಅನೇಕ ವರ್ಷಗಳಿಂದ ಸುಸ್ಥಿತಿಯಲ್ಲಿ ಇಲ್ಲದೆ ಗೋದಾಮು. ಇದನ್ನು ಉಪಯೋಗಿಸಿಕೊಂಡು ವ್ಯಾಪಾರ ಮಾಡುವುದರಿಂದ ಸಣ್ಣಪುಟ್ಟ ತೊಂದರೆಗಳು ಮೊದಲು ಕೂಡ ನಡೆದು ಹೋಗಿವೆ ಎಂದು ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಭೀರಪ್ಪ ಜುಮನಾಳ ಆರೋಪಿಸಿದರು.

ಸುಸ್ಥಿತಿಯಲ್ಲಿಲ್ಲದ ಗೋದಾಮುಗಳನ್ನು ನಿರ್ಮಿಸಿಕೊಂಡು ವ್ಯವಹಾರಗಳನ್ನು ನಡೆಸಿಕೊಂಡು ಬರುವುದು ಅಕ್ಷಮ್ಯ ಅಪರಾಧ, ಇದಕ್ಕೆ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿ ವೀಕ್ಷಣೆ ಮಾಡದೇ ಇರುವುದು ಖಂಡನೀಯ ಎಂದು ಹೇಳಿದ್ದಾರೆ.

ಬಡ ಕಾರ್ಮಿಕರನ್ನು ಹಗಲು ರಾತ್ರಿ ಎನ್ನದೆ ದುಡಿಸಿಕೊಳ್ಳುವ ರಾಜ್‌ಗುರು ಎಂಬ ಕಾಳಿನ ದಲ್ಲಾಳಿ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡದೇ ಇರುವುದು ಖಂಡನೀಯ ಎಂದಿದ್ದಾರೆ.

ಮೃತ ಕಾರ್ಮಿಕರಿಗೆ ತಲಾ ₹10 ಲಕ್ಷ ಹಾಗೂ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯಪುರ ಗೋದಾಮು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಪುಣೆಯಿಂದ ಬಂದಿದ್ದ ಎನ್‌ಡಿಆರ್‌ಎಫ್‌ ತಂಡ

ವಿಜಯಪುರ ಗೋದಾಮು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಪುಣೆಯಿಂದ ಬಂದಿದ್ದ ಎನ್‌ಡಿಆರ್‌ಎಫ್‌ ತಂಡ

–ಪ್ರಜಾವಾಣಿ ಚಿತ್ರ

ವಿಜಯಪುರ ಗೋದಾಮು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬೆಳಗಾವಿ ಕಲಬುರ್ಗಿಯಿಂದ ಬಂದಿದ್ದ ಎಸ್‌ ಡಿ ಆರ್‌ಎಫ್‌ ತಂಡ

ವಿಜಯಪುರ ಗೋದಾಮು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬೆಳಗಾವಿ ಕಲಬುರ್ಗಿಯಿಂದ ಬಂದಿದ್ದ ಎಸ್‌ ಡಿ ಆರ್‌ಎಫ್‌ ತಂಡ

–ಪ್ರಜಾವಾಣಿ ಚಿತ್ರ

ವಿಜಯಪುರ ಗೋದಾಮು ದುರಂತದ  ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಕುಳಿತಲ್ಲೇ ನಿದ್ರೆಗೆ ಜಾರಿದ ಬಿಹಾರದ ಕಾರ್ಮಿಕರು

ವಿಜಯಪುರ ಗೋದಾಮು ದುರಂತದ  ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಕುಳಿತಲ್ಲೇ ನಿದ್ರೆಗೆ ಜಾರಿದ ಬಿಹಾರದ ಕಾರ್ಮಿಕರು

–ಪ್ರಜಾವಾಣಿ ಚಿತ್ರ

ವಿಜಯಪುರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿ ಏಳು ಜನ ಕಾರ್ಮಿಕರ ಸಾವಿಗೆ ಕಾರಣವಾದ ರಾಜ್‌ಗುರು ಫುಡ್ಸ್‌ ಗೋದಾಮು

ವಿಜಯಪುರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿ ಏಳು ಜನ ಕಾರ್ಮಿಕರ ಸಾವಿಗೆ ಕಾರಣವಾದ ರಾಜ್‌ಗುರು ಫುಡ್ಸ್‌ ಗೋದಾಮು

–ಪ್ರಜಾವಾಣಿ ಚಿತ್ರ

ವಿಜಯಪುರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿರುವ  ರಾಜ್‌ಗುರು ಫುಡ್ಸ್‌ ಗೋದಾಮಿನಲ್ಲಿ ಸೋಮವಾರ ರಾತ್ರಿ ನಡೆದ ರಕ್ಷಣಾ ಕಾರ್ಯಾಚರಣೆಯನ್ನು ನೋಡುತ್ತಿದ್ದ ಬಿಹಾರ ಕಾರ್ಮಿಕರು

ವಿಜಯಪುರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿರುವ  ರಾಜ್‌ಗುರು ಫುಡ್ಸ್‌ ಗೋದಾಮಿನಲ್ಲಿ ಸೋಮವಾರ ರಾತ್ರಿ ನಡೆದ ರಕ್ಷಣಾ ಕಾರ್ಯಾಚರಣೆಯನ್ನು ನೋಡುತ್ತಿದ್ದ ಬಿಹಾರ ಕಾರ್ಮಿಕರು

–ಪ್ರಜಾವಾಣಿ ಚಿತ್ರ

ಜೀವ ಕಳೆದುಕೊಂಡ ಕಾರ್ಮಿಕ ಕುಟುಂಬಕ್ಕೆ ಅತ್ಯುತ್ತಮ ಪರಿಹಾರ ಕಾರ್ಮಿಕ ಕಾಯ್ದೆಗಳ ಪ್ರಕಾರ ಮಾನವೀಯ ದೃಷ್ಟಿಯಿಂದ ಕಾರ್ಮಿಕರಿಗೆ ರಾಜ್ಯ ಸರ್ಕಾರ ಜಿಲ್ಲಾಡಳಿತ ಪರಿಹಾರ ನೀಡಬೇಕು

-ಮಲ್ಲಿಕಾರ್ಜುನ್ ಎಚ್.ಟಿ. ಅಧ್ಯಕ್ಷ ಎಐಯುಟಿಯುಸಿ ವಿಜಯಪುರ

ಘಟನೆಗಳಿಗೆ ಕಾರಣ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಕೈಗಾರಿಕೆಗೆ ಮಾತ್ರ ಕೆಲಸ ಮಾಡಲು ಅನುಮತಿ ನೀಡಬೇಕು                                                        

-ಭೀಮಸಿ ಕಲಾದಗಿ ರೈತ ಮುಖಂಡ

ಏಳು ಜನ ಕಾರ್ಮಿಕರು  ದುರ್ಮರಣ ಆಗಿದ್ದಲ್ಲದೆ ಅವರ ಕುಟುಂಬಗಳು ಕೂಡ  ಬೀದಿಗೆ ಬೀಳುವಂತೆ ಮಾಡಿರುವ ಗೋದಾಮು ಮಾಲೀಕನ ವಿರುದ್ಧ ಕ್ರಮಕೈಗೊಳ್ಳದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುವುದು 

-ಸೋಮನಾಥ ಕಳ್ಳಿಮನಿ ಅಹಿಂದ ಮುಖಂಡ 

ಮೃತಪಟ್ಟ ಕಾರ್ಮಿಕರ ಹೆಸರಿನಲ್ಲಿ ಯಾವುದೇ ಪಿಎಫ್‌ ಇಎಸ್‌ಐ ಇರುವುದಿಲ್ಲ. ಈ ಘಟನೆಗೆ ಕಾರಣರಾದ ಮಾಲಿಕ ಗುತ್ತೆಗೆದಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು 

-ಸಿದ್ದಲಿಂಗ ಬಾಗೇವಾಡಿ ರಾಜ್ಯ ಕಾರ್ಯದರ್ಶಿ ಎಐಡಿವೈಒ

ಕಡಿಮೆ ದುಡ್ಡಿಗೆ ದುಡಿಸಿಕೊಳ್ಳುವರ ವಿರುದ್ಧ ಕ್ರಮಕೈಗೊಳ್ಳಿ

ವಿಜಯಪುರ: ಜಿಲ್ಲೆಗೆ ಅಕ್ರಮವಾಗಿ ಹೊರ ರಾಜ್ಯದ ಕಾರ್ಮಿಕರನ್ನು ಕರೆದುಕೊಂಡು ಬಂದು ಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸದೆ ಕಾನೂನು ಬಾಹಿರವಾಗಿ ಅವರಿಗೆ ಕಡಿಮೆ ದುಡ್ಡು ನೀಡಿ ದುಡಿಸಿಕೊಳ್ಳುತ್ತಿರುವುದು ಮಾಲೀಕರ ಮೇಲೆ ಹಾಗೂ ಕಾರ್ಮಿಕ ಅಧಿಕಾರಿಗಳ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಮುಖಂಡ ಪ್ರಭುಗೌಡ ಪಾಟೀಲ ಆಗ್ರಹಿಸಿದ್ದಾರೆ. ಕಟ್ಟಡ ಕಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಸಂಘಟಿತ ವಲಯದಲ್ಲಿ ಹೊರ ರಾಜ್ಯದವರು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ. ಅಂತವರ ಜಾಡನ್ನು ಸರ್ಕಾರ ಗುರುತಿಸಬೇಕಾಗಿದೆ. ಹೊರ ರಾಜ್ಯದ ಕಾರ್ಮಿಕರ ನುಸುಳುವಿಕೆಯನ್ನು ತಡೆಗಟ್ಟುವಲ್ಲಿ ಕಾರ್ಮಿಕ ಇಲಾಖೆಯು ಸಂಪೂರ್ಣ ವಿಫಲವಾಗಿದೆ. ಇಂತಹ ವಿಷಯಗಳನ್ನು ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರು ಮೌನವಹಿಸಿದ್ದಾರೆ. ಅವರು ಮೌನ ವಹಿಸಿದ್ದರ ಫಲವಾಗಿ ಇಂದು ಇಂತಹ ದುಷ್ಕತ್ಯಗಳು ನಡೆದಿದೆ ಎಂದು ದೂರಿದ್ದಾರೆ. ಇಂತಹ ಘಟನೆಗಳ ಮರುಕಳಿಸದಂತೆ ಕಾರ್ಮಿಕರ ಸುರಕ್ಷತಾ ಕ್ರಮದ ಜಾಗೃತಿ ಕಾರ್ಮಿಕರ ಹಕ್ಕುಗಳು ಕರ್ತವ್ಯ ಸೌಲಭ್ಯಗಳ ಮಾಹಿತಿಯನ್ನು ಸರಿಯಾಗಿ ತಿಳಿಸಬೇಕು. ಪ್ರತಿ ತಿಂಗಳಿಗೊಮ್ಮೆ ಕಾರ್ಮಿಕ ಕುಂದು ಕೊರತೆ ಸಭೆ ನಡೆಸಬೇಕು ಎಂದು ಪಾಟೀಲ ಆಗ್ರಹಿಸಿದ್ದಾರೆ. 

ಹಿಂದೆಯೂ ನಡೆದಿತ್ತು ದುರ್ಘಟನೆ 

ವಿಜಯಪುರ: ‘ಗೋದಾಮಿನಲ್ಲಿ 2021 ಮತ್ತು 2022ರಲ್ಲಿ ಪೂಲು ಮುಖಿಯಾ (55) ಬಿದ್ದಿ ಮುಖಿಯಾ(42) ಎಂಬುವವರು ಕೆಲಸದ ವೇಳೆ ತಲೆ ಸುತ್ತಿ ಬಿದ್ದು ಮೃತಪಟ್ಟಿದ್ದರು. ಮಾಲೀಕ ಏನೂ ಪರಿಹಾರ ನೀಡಲಿಲ್ಲ ಕೇವಲ ಶವ ಸಂಸ್ಕಾರಕ್ಕೆ ದುಡ್ಡು ಕೊಟ್ಟು ಕಳುಹಿಸಿದ್ದರು’ ಎಂದು ರಾಜ್‌ಗುರು ಗೋದಾಮಿನ ಅನೇಕ ಕೂಲಿಕಾರ್ಮಿಕರು ಸಚಿವರ ಬಳಿ ದೂರಿದರು. ಕಾರ್ಮಿಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ‘ಗೋದಾಮಿನಲ್ಲಿ ಈ ಹಿಂದೆ ಘಟನೆ ನಡೆದಿರುವ ಬಗ್ಗೆ ಇದೀಗ ಕಾರ್ಮಿಕರಿಂದ ಆರೋಪ ಕೇಳಿಬಂದಿದೆ. ಇದರ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT