ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಮೆಕ್ಕೆಜೋಳ ಮೂಟೆಗಳಡಿ ಸಿಲುಕಿದ್ದ ಮೂವರು ಕಾರ್ಮಿಕರ ರಕ್ಷಣೆ

Published 4 ಡಿಸೆಂಬರ್ 2023, 17:21 IST
Last Updated 4 ಡಿಸೆಂಬರ್ 2023, 17:21 IST
ಅಕ್ಷರ ಗಾತ್ರ

ವಿಜಯಪುರ: ನಗರದ ಅಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿರುವ ‘ರಾಜಗುರು ಇಂಡಸ್ಟ್ರೀಸ್‌’ ಗೋದಾಮಿನ ಆಹಾರ ಸಂಸ್ಕರಣಾ ಘಟಕದಲ್ಲಿ ಸೋಮವಾರ ಸಂಜೆ, ಮೆಕ್ಕೆ ಜೋಳದ ಮೂಟೆಗಳು ಉರುಳಿ ಬಿದ್ದು, ಅವುಗಳ ಅಡಿಯಲ್ಲಿ 13ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

ನಾಲ್ಕು ಜೆಸಿಬಿಗಳ ಮೂಲಕ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು.

ಕಾರ್ಮಿಕರ ಮೇಲೆ ಬಿದ್ದಿರುವ ಮೂಟೆಗಳನ್ನು ತೆರವು ಮಾಡುವ ಕಾರ್ಯ ಭರದಿಂದ ನಡೆದಿದೆ. ರಾತ್ರಿ 9ರ ವೇಳೆಗೆ ಮೂವರನ್ನು ಸುರಕ್ಷಿತವಾಗಿ ಹೊರ ತರಲಾಗಿದೆ. ಇನ್ನುಳಿದವರ ಉಸಿರಾಟಕ್ಕೆ ತೊಂದರೆಯಾಗದಂತೆ ಆಕ್ಷಿಜನ್‌ ಪೂರೈಕೆ ಮಾಡಲಾಗುತ್ತಿದೆ. ಬೆಳಗಾವಿ, ಕಲಬುರ್ಗಿಯಿಂದ ಎಸ್‌ಡಿಆರ್‌ಎಫ್‌ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಅಗತ್ಯ ಬಿದ್ದರೆ ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್‌ ತಂಡವನ್ನು ಕರೆತರಲು ಸಿದ್ಧತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್‌ ತಿಳಿಸಿದರು.

ಮೆಕ್ಕೆಜೋಳದ ಮೂಟೆಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕರು ಬಿಹಾರ ಮೂಲದವರು ಎನ್ನಲಾಗಿದೆ. ಹಲವು ವರ್ಷಗಳಿಂದ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ್ ಅವರು ಬೆಳಗಾವಿಯಿಂದ ವಿಜಯಪುರಕ್ಕೆ ರಾತ್ರಿ ಆಗಮಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಖುದ್ದು ವೀಕ್ಷಿಸಿದರು.

ಘಟನೆ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೂರ್ಣ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT