ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಮಾಸ್ಕ್‌ ಧರಿಸದೇ ಸಂಚಾರ; ₹ 5 ಲಕ್ಷ ದಂಡ ಸಂಗ್ರಹ

ವಿಜಯಪುರ ನಗರದಲ್ಲಿ ಕೊರೊನಾ ಸೋಂಕಿಗೆ ಅಂಜದ ಜನ
Last Updated 22 ಮೇ 2020, 19:45 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. 67 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ ನಾಲ್ಕು ಜನ ಈಗಾಗಲೇ ಸಾವಿಗೀಡಾಗಿದ್ದಾರೆ. ಇಷ್ಟಾದರೂ ಸಹ ಜನ ಸುರಕ್ಷತೆಗೆ ಆದ್ಯತೆ ನೀಡದೇ ಮೈಮರೆತು ಸಂಚಾರಿಸುವ ಮೂಲಕ ಕೊರೊನಾವನ್ನು ಮನೆಗೆ ಆಹ್ವಾನಿಸುತ್ತಿದ್ದಾರೆ.

ಹೌದು, ನಗರದಲ್ಲಿ ವ್ಯಾಪಾರ, ವಹಿವಾಟು, ಕೆಲಸದ ಸಂಬಂಧ ಅಡ್ಡಾಡುತ್ತಿರುವ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮಾಸ್ಕ್‌ ತೊಡದೇ, ಅಂತರವನ್ನು ಕಾ‍ಪಾಡದೇ ನಿರ್ಲಕ್ಷ್ಯ ವಹಿಸುತ್ತಿರುವುದು ಎದ್ದು ಕಾಣುತ್ತಿದೆ.

ಬಸ್‌ ನಿಲ್ದಾಣ, ಸಲೂನ್‌, ಕಿರಾಣಿ ಅಂಗಡಿ, ಸ್ವೀಟ್‌ಹೌಸ್‌, ಬೇಕರಿ, ಬಟ್ಟೆ ಅಂಗಡಿಗಳು, ಎಲೆಕ್ಟ್ರಾನಿಕ್‌ ಶಾಪ್‌, ಗ್ಯಾರೇಜ್‌, ಪೆಟ್ರೊಲ್‌ ಬಂಕ್‌, ಚಿಕನ್‌–ಮಟನ್‌ ಸ್ಟಾಲ್‌ ಸೇರಿದಂತೆ ರಸ್ತೆ ಬದಿ ತಳ್ಳುಗಾಡಿಗಳಲ್ಲಿ ಹಣ್ಣಿನ ವ್ಯಾಪಾರ ಮಾಡುವ ಸ್ಥಳಗಳಲ್ಲಿ ಹಾಗೂ ಬೆಳಗ್ಗಿನ ವಾಯು ವಿಹಾರದ ಸಂದರ್ಭದಲ್ಲಿ ಜನರು ಮಾಸ್ಕ್‌ ತೊಡುತ್ತಿಲ್ಲ. ಅಲ್ಲದೇ, ಪರಸ್ಪರ ಅಂತರವನ್ನು ಕಾಯ್ದುಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಕೆಲವರು ಮಾಸ್ಕ್‌ಗಳನ್ನು ಕುತ್ತಿಗೆಗೆ ನೇತು ಹಾಕಿಕೊಂಡು, ಮತ್ತೆ ಕೆಲವು ಜೇಬಿನಲ್ಲಿ ಇಟ್ಟುಕೊಂಡು ಸುತ್ತಾಡುವುದು ಕಂಡುಬರುತ್ತಿದೆ. ಮಹಿಳೆಯರು ಮಾಸ್ಕ್‌ ನೆನಪಾದಾಗ ಸೀರೆಯನ್ನು ಮುಖಕ್ಕೆ ಮರೆ ಮಾಡಿಕೊಳ್ಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ನಗರದಲ್ಲಿ ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಸಾಕಷ್ಟು ಅರಿವಿದ್ದರೂ ಸಹ ಮಾಸ್ಕ್‌ ತೊಡದಿರುವುದು ಮತ್ತು ಅಂತರ ಕಾಪಾಡಿಕೊಳ್ಳದಿರುವುದು ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಾಸ್ಕ್‌ ಧರಿಸದೇ ಅಡ್ಡಾಡುವವರಿಗೆ ₹ 200 ದಂಡ ವಿಧಿಸಲಾಗುತ್ತಿದೆ. ಇದಕ್ಕಾಗಿ ತಲಾ 3 ಜನರನ್ನು ಒಳಗೊಂಡ 28 ತಂಡಗಳು ಕಾರ್ಯಾಚರಿಸುತ್ತಿವೆ. ಮಾಸ್ಕ್‌ ಧರಿಸದೇ ಅಡ್ಡಾಡುತ್ತಿದ್ದ 2500 ಜನರಿಂದ ₹ 5 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದರು.

‘ಮಾಸ್ಕ್‌ ಅನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದೇನೆ, ಬ್ಯಾಗಿನಲ್ಲಿ ಇಟ್ಟುಕೊಂಡಿದ್ದೇನೆ, ಗಾಡಿಯಲ್ಲಿ ಇಟ್ಟಿದ್ದೇನೆ’ ಎಂದು ದಂಡ ವಿಧಿಸುವ ಸಂದರ್ಭದಲ್ಲಿ ಸಬೂಬು ನೀಡುತ್ತಾರೆ. ಆದರೆ, ಇದಾವುದಕ್ಕೂ ಅವಕಾಶವಿಲ್ಲದೇ ದಂಡ ವಿಧಿಸಿ, ಸ್ಥಳದಲ್ಲೇ ಹಣವನ್ನು ಪಡೆದು, ರಸೀದಿ ನೀಡಲಾಗುತ್ತಿದೆ ಎಂದು ಹೇಳಿದರು.

ಅಂಗಡಿ, ಬಸ್‌ ನಿಲ್ದಾಣ, ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ತೊಡದೇ ಸಂಚರಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ದಂಡ ವಿಧಿಸುವ ಕಾರ್ಯಾಚರಣೆಯನ್ನು ಇನ್ನೂ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಅಂಗಡಿಗಳನ್ನು ಬಾಗಿಲು ತೆರೆದು ವ್ಯಾಪಾರ ಮಾಡಲು ಮಾತ್ರ ಅವಕಾಶವಿದೆ. ನಗರದ ಉದ್ಯಾನಗಳು ಬೆಳಿಗ್ಗೆ 7ರಿಂದ 9ರ ವರೆಗೆ ಹಾಗೂ ಸಂಜೆ 4ರಿಂದ 7ರ ವರೆಗೆ ಮಾತ್ರ ತೆರೆದಿರುತ್ತವೆ. ಇಲ್ಲಿಗೆ ಭೇಟಿ ನೀಡುವವರು ಸಹ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

₹ 30 ಲಕ್ಷ ದಂಡ ಸಂಗ್ರಹ
ವಿಜಯಪುರ:
ಲಾಕ್‌ಡೌನ್‌ ಅವಧಿಯಲ್ಲಿ ಅನಗತ್ಯವಾಗಿ ಸುತ್ತಾಡುತ್ತಿದ್ದ 4500 ಬೈಕ್‌ ಮತ್ತು ಸ್ಕೂಟರ್‌ಗಳನ್ನು ವಶಕ್ಕೆ ಪಡೆದುಕೊಂಡು, ₹30 ಲಕ್ಷ ದಂಡ ಸಂಗ್ರಹಿಸಲಾಗಿದೆ. ಅಲ್ಲದೇ, 217 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT