ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಆತ್ಮವಿಶ್ವಾಸದ ಸೆಲೆ ಬತ್ತದಿರಲಿ: ನಿರ್ಮಲಾ ಸುರಪುರ

ಮಹಿಳಾ ದಿನಾಚರಣೆ ಲೇಖನ
Last Updated 6 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ‘ಮಹಿಳೆಗೆ ಆತ್ಮ ವಿಶ್ವಾಸ, ಆತ್ಮ ಸ್ಥೈರ್ಯ, ತಮ್ಮಲ್ಲೇ ತನಗೆ ನಂಬಿಕೆ, ತಾಳ್ಮೆ, ಛಲ, ಸಹನೆ ಬಹಳ ಮುಖ್ಯ. ಇವಿಷ್ಟು ಇದ್ದರೆ ಸಾಧನೆ ಮಾಡಲು ಸಾಧ್ಯ’..

ಮನೆಯೇ ಇರಲಿ, ಕಚೇರಿಯೇ ಇರಲಿ ನಿಗದಿತ ಸಮಯಕ್ಕೆ, ಅಚ್ಚುಕಟ್ಟಾಗಿ ಕೆಲಸ ಮಾಡುವವರು ಮಹಿಳೆಯರೇ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಇಂದಿಗೂ ಸಮಾನತೆ, ಸ್ವಾತಂತ್ರ್ಯ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ. ಮನೆ, ಕಚೇರಿ, ಸಮಾಜ ಹೀಗೆ ಎಲ್ಲ ಕಡೆಯೂ ಕಾಲೆಳೆದು ಜಗ್ಗುವವರೇ ಜಾಸ್ತಿ. ಅದರ ಮಧ್ಯೆಯೇ ನಾವು ‘ಭಂಡ ಧೈರ್ಯ’ದಿಂದ ಮುನ್ನುಗ್ಗಬೇಕು. ಸಾಧನೆ ಮಾಡಿ ತೋರಿಸಬೇಕು.

2011ರ ಜನಗಣತಿ ಪ್ರಕಾರ ಪ್ರತಿ 1000 ಪುರಷರಿಗೆ ಮಹಿಳೆಯರ ಸಂಖ್ಯೆ 935 ಇದೆ. ಅದೇ ರೀತಿ 0–6 ವರ್ಷದ ಮಕ್ಕಳ ಅನುಪಾತ ತೆಗೆದುಕೊಂಡರೆ ಪ್ರತಿ 1000 ಗಂಡು ಮಕ್ಕಳಿಗೆ 911 ಹೆಣ್ಣುಮಕ್ಕಳು ಇದ್ದಾರೆ. ಈ ಸಂಖ್ಯೆಯನ್ನು ಗಮನಿಸಿದರೆ ಮಹಿಳೆಗೆ ಸಮಾನತೆ ಸಿಕ್ಕಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಹೆಣ್ಣು ಮಕ್ಕಳು ಎಂದರೆ ತಾತ್ಸಾರ, ಹೊರೆ ಎಂಬ ಭಾವನೆ ಈಗಲೂ ಕೆಲವೆಡೆ ಇದೆ. ಇದು ದುರದೃಷ್ಟಕರ.

ಹೆಣ್ಣುಮಕ್ಕಳು ಕೂಡ ಎಲ್ಲದಕ್ಕೂ ದೂರುತ್ತ ಕೂರುವ ಬದಲು ತಾವೂ ಬದಲಾಗಬೇಕು. ಮನೋಭಾವವನ್ನು ಬದಲಿಸಿಕೊಳ್ಳಬೇಕು. ಸಮಾನತೆ, ಸ್ವಾತಂತ್ರ್ಯಕ್ಕಾಗಿ ಸದಾ ಹೋರಾಟ ಮಾಡಬೇಕು. ಸಂವಿಧಾನಾತ್ಮಕ ಹಕ್ಕುಗಳನ್ನು ಅನುಭವಿಸಲು ಬಿಡುವಂತೆ ವ್ಯವಸ್ಥೆಯ ಮೇಲೆ ಒತ್ತಡ ಹೇರಬೇಕು. ವಿಶ್ವ ಮಹಿಳಾ ದಿನವು ಆಚರಣೆಗೆ ಸೀಮಿತವಾಗದೆ, ನಿತ್ಯವೂ ಮಹಿಳೆಯರು ಸಂಭ್ರಮ ಪಡುವಂತಾಗಬೇಕು. ಅಂದಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜ ಅರ್ಥ ಬರುತ್ತದೆ.

ಹೆಣ್ಣುಮಕ್ಕಳು ಎದುರಿಸುವ ಸಮಸ್ಯೆ, ಸವಾಲುಗಳು ಅನೇಕ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಹಜವಾಗಿ ಕೆಲವೊಂದಿಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಇದೇ ಕಾರಣಕ್ಕೆ ಇಂದಿಗೂ ಬೆರಳಣಿಕೆಯಷ್ಟು ಮಹಿಳೆಯರಿಗೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಶೇ 50ರಷ್ಟು ಸ್ಥಾನಗಳನ್ನು ನೀಡಬೇಕು. ಅಂದಾಗ ಸಬಲೀಕರಣದ ಆಶಯದ ಸಾಕಾರಗೊಳ್ಳುತ್ತದೆ.

ಇತ್ತೀಚಿನ ದಿನಗಳಲ್ಲಿ ಸಮಾನತೆ ಬರುತ್ತಿದೆ. ಸಮಾಜ ಇಂದಿಲ್ಲ, ನಾಳೆ ಬದಲಾಗುತ್ತದೆ. ಕುಟುಂಬ, ಸಮಾಜ, ಹಿರಿಯ ಅಧಿಕಾರಿಗಳು ಹೆಣ್ಣು ಮಕ್ಕಳಿಗೆ ಬೆಂಬಲ, ಪ್ರೋತ್ಸಾಹ ನೀಡಬೇಕು. ಸಾಮಾಜಿಕ ನೈತಿಕತೆ ಗಟ್ಟಿಯಾಗಬೇಕು. ಆಗ ಸಂಘರ್ಷದ ಬದಲು ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಆ ದಿನಗಳು ಬೇಗ ಬರಲಿ..

(ಲೇಖಕರು ವಿಜಯಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ)

ನಿರೂಪಣೆ: ಸುಭಾಸ ಎಸ್.ಮಂಗಳೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT