ಶುಕ್ರವಾರ, ಏಪ್ರಿಲ್ 23, 2021
27 °C
ನದಿಗಳಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಲು ರೈತರ ಒತ್ತಾಯ

Karnataka Budget 2021| ಯಾದಗಿರಿಯ ಕೃಷಿ, ನೀರಾವರಿಗೆ ಸಿಗಲಿ ಆದ್ಯತೆ: ಆಶಯ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ಕೃಷಿ, ನೀರಾವರಿಗೆ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ. ಇದರಿಂದ ಈ ಭಾಗದ ರೈತರು ಬಜೆಟ್‌ನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಕಾಯುತ್ತಿದ್ದಾರೆ.

ಕೃಷ್ಣಾ ನದಿ ಹುಣಸಗಿ, ಸುರಪುರ, ಶಹಾಪುರ, ಯಾದಗಿರಿ, ವಡಗೇರಾ ತಾಲ್ಲೂಕುಗಳ ಮೂಲಕ ಹಾದು ಹೋಗುತ್ತದೆ. ಭೀಮಾ ನದಿ ಶಹಾಪುರ, ಯಾದಗಿರಿ, ವಡಗೇರಾ ತಾಲ್ಲೂಕಿನಲ್ಲಿ ಹರಿಯುತ್ತಿದೆ. ಆದರೆ, ನೀರಾವರಿ ಸೌಲಭ್ಯ ಇಲ್ಲದಿದ್ದರಿಂದ ವಲಸೆ ಹೋಗುವುದು ತಪ್ಪಿಲ್ಲ. ಗುರುಮಠಕಲ್‌ ತಾಲ್ಲೂಕಿನಲ್ಲಿ ಮಾತ್ರ ನದಿ ಹರಿವಿಲ್ಲ. ಇದರಿಂದ ಈ ಭಾಗಕ್ಕೆ ಭೀಮಾ ನದಿಯಿಂದ ಸೌಲಭ್ಯ ಕಲ್ಪಿಸಬೇಕು.

ಎರಡು ನದಿಗಳಿದ್ದರೂ ಕೊನೆ ಭಾಗದ ರೈತರಿಗೆ ಕಾಲುವೆ ಮೂಲಕ ನೀರು ತಲುಪುವುದಿಲ್ಲ. ಇದರಿಂದ ನೀರಾವರಿ ಕನಸಿನ ಮಾತಾಗಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ನಾರಾಯಣಪುರದ ಬಳಿ ಬಸವಸಾಗರ ಜಲಾಶಯ ನಿರ್ಮಾಣ ಮಾಡಲಾಗಿದೆ. ಇದರ ಮೂಲಕ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜಮೀನಗಳಲ್ಲಿ ಕೆರೆ ನಿರ್ಮಿಸಿ ನೀರು ಹರಿಸುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಳವಾಗುತ್ತದೆ. ರೈತರಿಗೂ ಅನುಕೂಲವಾಗುತ್ತದೆ. ಹೀಗಾಗಿ ನದಿಗಳಿಂದ ಕೆರೆಗಳನ್ನು ತುಂಬಿಸುವ ಕೆಲಸ ಆಗಬೇಕು ಎನ್ನುವುದು ರೈತರ ಆಗ್ರಹವಾಗಿದೆ. 

ಪ್ರತಿ ವರ್ಷ ಪ್ರವಾಹ ಬಂದಾಗ ಬೇರೆ ರಾಜ್ಯಗಳಿಗೆ ನೀರು ಹರಿದುಹೋಗುತ್ತದೆ. ಹೀಗಾಗಿ ಕೆರೆಗಳನ್ನು ನಿರ್ಮಿಸಿ ಅಲ್ಲಿಗೆ ನೀರು ಹರಿಸಿದರೆ ನಮ್ಮ ಜಿಲ್ಲೆಯೂ ನೀರಾವರಿಯಿಂದ ಕೂಡಿರಲು ಸಾಧ್ಯ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ. 

ಗುಳೆ ತಪ್ಪಿಸಲು ನೀರಾವರಿಗೆ ಆದ್ಯತೆಯಾಗಲಿ:
ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಗುಳೆ ಹೋಗುವುದು ತಪ್ಪಿಲ್ಲ. ಸಂಪನ್ಮೂಲ ಇದ್ದರೂ ಬಳಕೆಯಾಗುತ್ತಿಲ್ಲ. ಇದರಿಂದ ಜಿಲ್ಲೆಗೆ ವಲಸೆ ಎನ್ನುವುದು ಶಾಪವಿದ್ದಂತೆ ಆಗಿದೆ. ಇದನ್ನು ತಪ್ಪಿಸಲು ಈ ಬಾರಿಯ ಬಜೆಟ್‌ನಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರೈತರ ಒತ್ತಾಯವಾಗಿದೆ.

‘ಪಕ್ಕದ ವಿಜಯಪುರ ಜಿಲ್ಲೆಯವರು ನಾರಾಯಣಪುರ ಕಾಲುವೆಗೆ ಪೈಪ್‌ ಲೈನ್‌ ಮೂಲಕ ಕುಡಿಯುವ ನೀರು, ಕೆರೆಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮಲ್ಲಿ ಇರುವ ನದಿಗಳಿಂದ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಬಹುದಾಗಿದೆ. ಆದರೆ, ಇದಾಗುತ್ತಿಲ್ಲ. ಮಾರ್ಚ್‌ 8ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸುವ ಆಯವ್ಯಯದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರೈತ ಮುಖಂಡರಾದ ನಾಗರತ್ನ ವಿ ಪಾಟೀಲ ಆಗ್ರಹಿಸುತ್ತಾರೆ.

‘ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇದರಿಂದ ಕೃಷಿ ಉಪಕಸುಸುಬುಗಳು ಅನುಷ್ಠಾನಗೊಳ್ಳುತ್ತಿಲ್ಲ. ಇದನ್ನು ಮಾಡಿದರೆ ಕೃಷಿಯಲ್ಲಿ ರೈತರು ಪ್ರಗತಿ ಸಾಧಿಸಬಹುದು’ ಎನ್ನುತ್ತಾರೆ ಅವರು.

‘ಜಿಲ್ಲೆಗೆ ಕಳೆದ ಬಾರಿ ಘೋಷಣೆ ಮಾಡಿದ ಯೋಜನೆ ಕಾಗದದಲ್ಲಿ ಮಾತ್ರ ಇದೆ. ಇನ್ನೂ ಅನುಷ್ಠಾನಗೊಂಡಿಲ್ಲ. ಈ ಬಾರಿ ಕೃಷಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಮೂಲಕ ಜಿಲ್ಲೆಗೆ ಆದ್ಯತೆ ನೀಡಬೇಕು’ ಎನ್ನುತ್ತಾರೆ ರೈತ ಮುಖಂಡ ಚನ್ನಾರೆಡ್ಡಿಗೌಡ ಗುರುಸುಣಗಿ.

 **

ದೋರಹನಳ್ಳಿಯ ಹಾಲು ಶೀಥಲಿಕರಣ ಕೇಂದ್ರ ಪಾಳು ಬಿದ್ದಿದ್ದರಿಂದ ಹಾಲು ಉತ್ಪಾದನೆಗೆ ಉತ್ತೇಜನ ಇಲ್ಲದಂತಾಗಿದೆ. ಹೀಗಾಗಿ ಆಯವ್ಯಯದಲ್ಲಿ ಕೃಷಿ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು

ನಾಗರತ್ನ ವಿ ಪಾಟೀಲ, ರೈತ ಮುಖಂಡರು

 ***

ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ನೀರಾವರಿಗೆ ಆದ್ಯತೆ ಇಲ್ಲ. ಇದ್ದ ಕಡೆ ನೆರೆ ರಾಜ್ಯಗಳವರ ಪ್ರಭಾವ ಇದೆ. ಹೀಗಾಗಿ ಬಜೆಟ್‌ನಲ್ಲಿ ಜಿಲ್ಲೆಗೆ ನೀರಾವರಿ ಸೌಲಭ್ಯ ಸಿಗುವಂತಾಗಲಿ

ಚನ್ನಾರೆಡ್ಡಿಗೌಡ ಗುರುಸುಣಗಿ, ರೈತ ಮುಖಂಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು