ಮಂಗಳವಾರ, ಮಾರ್ಚ್ 28, 2023
21 °C

ಇದು ಶ್ರಮಜೀವಿಗಳ ಕಾಳಿಮಾಸ್‌, ಧೋಳಿಮಾಸ್‌

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಗೋರ್‌’ ಜನರ ಪದ್ಧತಿಯಲ್ಲಿ ದೀಪಾವಳಿ ಅಮಾವಾಸ್ಯೆಯನ್ನು ‘ಕಾಳಿಮಾಸ್’ ಎಂದು ಆಚರಿಸುತ್ತಾರೆ. ಕಾಳಿಮಾಸ್ ಎಂದರೆ ಕಾಳ+ಅಮಾವಾಸ್ ಎಂಬುದಾಗಿದ್ದು, ವರ್ಷದಲ್ಲಿ ಬರುವ 12 ಅಮಾವಾಸ್ಯೆಗಳಲ್ಲಿಯೇ‌ ಈ ಅಮಾವಾಸ್ಯೆಯನ್ನೇ ‘ಕತ್ತಲೆಯ ಅಮಾವಾಸ್ಯೆ’ ಎಂದು ಆಚರಣೆ ಮಾಡುತ್ತಾರೆ.

ಕಾಳಿಮಾಸ್ ದಿನ ಆಡಿನ ಬಲಿ ಕೊಡುವುದೂ ಸಂಪ್ರದಾಯ. ತಾಂಡಾದವರಿಗೆಲ್ಲರಿಗೂ ಈ ಆಡಿನ‌ಮಾಂಸವನ್ನು ಪಾಲು ಹಂಚಿ‌ ತಾಂಡಾದಲ್ಲಿ ಸಮಾನತೆ ಸಾರುತ್ತಾರೆ. ಈ ಊಟಕ್ಕೆ ‘ಸಲೋಯಿ’ ಎಂಬ ಹೆಸರಿದೆ.

ಸಂಜೆ ಪ್ರತಿ‌ ಮನೆಯ ಮದುವೆ ಯಾಗದ ಹೆಣ್ಣು ಮಕ್ಕಳು‌ ಅವರವರ ಕೈಯಲ್ಲಿ ಹಣತೆ ಹಿಡಿದುಕೊಂಡು ಬಂದು ತಾಂಡಾದ ಆರಾಧ್ಯ ದೈವಗಳಾದ ಮರಿಯಮ್ಮ ಮತ್ತು ಸತ್ಗುರು ಸೇವಾಲಾಲ್‌ ದೇವಳ (ಮಂದಿರ) ಹತ್ತಿರ‌ ಬಂದು ಸಾಂಪ್ರಾದಾಯಿಕ ಹಾಡು ಹಾಡುತ್ತಾ ಆರತಿ ಬೆಳಗುತ್ತಾರೆ.

ಧೋಳಿ ಅಮಾಸ್‌: ಕಾಳಿಮಾಸ್‌ ಮರುದಿನವನ್ನು ‘ಧೋಳಿ ಅಮಾಸ್’ ಅಂದರೆ ಬಿಳಿ ಅಮಾವಾಸ್ಯೆ ಎಂಬುದಾಗಿ ಆಚರಿಸುತ್ತಾರೆ. ತಮ್ಮ ಕುಲದಲ್ಲಿ ಆಗಿಹೋಗಿರುವ ಹಿರಿಯರ ನೆನಪಿನಲ್ಲಿ ಪ್ರತಿ ಮನೆಯಲ್ಲಿಯೂ ಅಡುಗೆ ಒಲೆಯಲ್ಲಿ ವಿಶೇಷ ಪೂಜೆ (ಧಪಕಾರ್) ನೆರವೇರಿಸಿ, ಮಡಿದ ಹಿರಿಯರನ್ನು ನೆನೆಯುತ್ತಾರೆ.

ಇನ್ನು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಅಮಾವಾಸ್ಯೆಯಂದು ತಮ್ಮ ವಾಹನಗಳಿಗೆ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟಿನವರು ಸಂಜೆ ವಿಶೇಷ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.

ವನಭೋಜನ ವಿಶೇಷ: ಸುರಪುರ ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶತಮಾನಗಳಿಂದ ದೀಪಾವಳಿಯನ್ನು 5 ದಿನ ವಿಶೇಷವಾಗಿ ಆಚರಿಸುತ್ತಾ ಬರಲಾಗಿದೆ. ತ್ರಯೋದಶಿ ದಿನ ನೀರು ತುಂಬುವ ಹಬ್ಬ, ಚತುರ್ದಶಿ ದಿನ ಬೆಳಿಗ್ಗೆ ಆರತಿ, ಅಮಾವಾಸ್ಯೆಯಂದು
ಲಕ್ಷ್ಮೀ ಪೂಜೆ ಸಾಮಾನ್ಯವಾಗಿ ಅಚರಿಸಲಾಗುತ್ತದೆ.

ಪಾಡ್ಯದಿಂದ ಪಂಚಮಿವರೆಗೆ ನಡೆಯುವ ವನಭೋಜನ ಇಲ್ಲಿಯ ವಿಶೇಷ. ಪಾಡ್ಯ ಮತ್ತು ಬಿದಿಗಿಯಂದು ಮಹಿಳೆಯರು ಮತ್ತು ಮಕ್ಕಳು ವೇಣುಗೋಪಾಲಸ್ವಾಮಿ ಕಲ್ಯಾಣಿ (ದೇವರಭಾವಿ)ಗೆ ಸಂಜೆ ಹೋಗುತ್ತಾರೆ. ಗಂಗೆಗೆ ಪೂಜೆ ಸಲ್ಲಿಸಿ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ. ಮನೆಯಿಂದ ಕಟ್ಟಿಕೊಂಡು ಬಂದಿದ್ದ ಉಪಾಹಾರ ಪರಸ್ಪರ ಹಂಚಿ ತಿನ್ನುತ್ತಾರೆ. ಉಭಯ ಕುಶಲೋಪರಿ ವಿಚಾರಿಸಿ ಮನೆಗೆ ಬರುತ್ತಾರೆ. ತೃತೀಯ ದಿನದಂದು ರಂಗಂ ಪೇಟೆಯ ಮಾರ್ಗದಲ್ಲಿರುವ ಕ್ಯಾದಿಗೆ ಗುಂಡಿ ಎಂಬ ತೋಟಕ್ಕೆ ವಿವಿಧ ಭಕ್ಷ್ಯಗಳನ್ನು ಕಟ್ಟಿಕೊಂಡು ಬೆಳಿಗ್ಗೆಯೇ ತೆರಳುತ್ತಾರೆ. ನೆರೆ ಹೊರೆಯವರು ಗುಂಪು ಗುಂಪಾಗಿ ಒಟ್ಟಿಗೆ ಕುಳಿತು ಭೋಜನ ಸವಿದು ಸಂಜೆವರೆಗೆ ಕಾಲ ಕಳೆದು ಮನೆಗೆ ಬರುತ್ತಾರೆ.

ಚತುರ್ಥಿ ದಿನದಂದು ಸಿದ್ದಾಪುರ ರಸ್ತೆಯಲ್ಲಿರುವ ಸಿದ್ದನತೋಟಕ್ಕೆ (ರಾಜರಿಗೆ ಸೇರಿದ ತೋಟ) ತೆರಳಿ ವನಭೋಜನ ಸವಿಯುತ್ತಾರೆ. ಈ ದಿನದ ವನ ಭೋಜನ ಬಹುತೇಕ ವಿರಳವಾಗಿದೆ. ಪಂಚಮಿಯಂದು ಯಲ್ಲಪ್ಪನಬಾವಿ ಹತ್ತಿರ ಇರುವ ತಪ್ಪಲು ಪ್ರದೇಶಕ್ಕೆ ಹೋಗುತ್ತಾರೆ.
ಬೆಟ್ಟ ಗುಡ್ಡಗಳಲ್ಲಿ ಜನವೋ ಜನ. ಜಾತ್ರೆಯೇ ನೆರೆದಂತೆ ಇರುತ್ತದೆ. ಮಿಠಾಯಿ ಅಂಗಡಿಗಳು, ಆಟಿಕೆ ಎಲ್ಲವೂ ಇರುತ್ತದೆ. ಪುರುಷರೂ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಎಲ್ಲರೂ ಸೇರಿ ಊಟ ಸವಿದು, ಹರಟೆ ಹೊಡೆದು.

ತಮಗೆ ಇಷ್ಟವಾದ ಆಟಗಳನ್ನು ಅಡಿ ಸಂಜೆ ಮರಳುತ್ತಾರೆ. ಈ ಐದು ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನೆಂಟರು ಬರುವುದು ವಾಡಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು