ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್ ತೆರಿಗೆ ರದ್ದು ಮಾಡಲು ಆಗ್ರಹ

Last Updated 11 ಜೂನ್ 2021, 1:26 IST
ಅಕ್ಷರ ಗಾತ್ರ

ಯಾದಗಿರಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವೈಜ್ಞಾನಿಕ ತೆರಿಗೆ ರದ್ದುಗೊಳಿಸಿ, ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿ ಜಯಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ರಾಷ್ಟ್ರಪತಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವೈಜ್ಞಾನಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇಕಡ ಮುನ್ನೂರಕ್ಕೂ ಹೆಚ್ಚು ಪ್ರತಿಶತ ತೆರಿಗೆ ವಿಧಿಸಿವೆ. ಇದರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ₹ 100 ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸಿ ತನ್ನ ದೇಶದ ಪ್ರಜೆಗಳನ್ನು ಶೋಷಣೆ ಮಾಡುವ ಇನ್ನೊಂದು ಸರ್ಕಾರವಿಲ್ಲ ಎಂದು ಆರೋಪಿಸಿದರು.

ಕೋವಿಡ್ ಸೋಂಕು ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ರೋಗಿಗಳಿಗೆ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್, ಔಷಧೋಪಚಾರಗಳನ್ನು ಸಕಾಲಕ್ಕೆ ಒದಗಿಸದೆ ಸಾವಿರಾರು ಜನ ಬಲಿಯಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬಡತನ ಮತ್ತು ಹಸಿವಿನಿಂದ ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆ ಏರಿಕೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ ಎಂದು ಆಪಾದಿಸಿದರು.

ಅಡುಗೆ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ಸಮೀಪಿಸುತ್ತಿದೆ. ಇವುಗಳ ಜೊತೆಗೆ ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ. ಇಂಥ ಸಂದರ್ಭದಲ್ಲಿ ಜನ ಸಾಮಾನ್ಯರ ನೆರವಿಗೆ ನಿಲ್ಲಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಬಂದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸಿ ಜನರನ್ನು ಮತ್ತಷ್ಟು ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಂ ಜಲ್ಲಪ್ಪನೋರ ರಾಮಸಮುದ್ರ, ಹಿರಿಯ ಗೌರವ ಅಧ್ಯಕ್ಷ ಸುಭಾಶ ಮಾಳಿಕೇರಿ, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ನಾಯಕ, ಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT