ಸೋಮವಾರ, ಆಗಸ್ಟ್ 2, 2021
20 °C

ದೋರನಹಳ್ಳಿ ಒಂದೇ ಕುಟುಂಬದ 6 ಜನರ ಆತ್ಮಹತ್ಯೆ ಪ್ರಕರಣ: ಮೃತ ರೈತನಿಗಿಲ್ಲ ಪರಿಹಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ‘ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಮೃತ ಭೀಮರಾಯ ಸುರಪುರ ಅವರ ಕುಟುಂಬದ ಹೆಸರಿನಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರ ಸಂಘದಲ್ಲಿ ಸಾಲ ಇರುವ ಬಗ್ಗೆ ಯಾವುದೆ ದಾಖಲೆ ಇಲ್ಲ. ಪ್ರಕರಣ ರೈತ ಆತ್ಮಹತ್ಯೆ ಪ್ರಕರಣದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲು ಬರುವುದಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಆರ್.ರಾಗಪ್ರಿಯಾ ತಿಳಿಸಿದರು.

ನಗರದ ತಹಶೀಲ್‌ ಕಚೇರಿಯಲ್ಲಿ ಸೋಮವಾರ ಉಪ ವಿಭಾಗಾಧಿಕಾರಿ, ಕೃಷಿ ಅಧಿಕಾರಿ, ಪೌರಾಯುಕ್ತರು, ತಹಶೀಲ್ದಾರ್ ಸಭೆಯಲ್ಲಿ, ಮೃತ ಭೀಮರಾಯನ ಮಗಳು ಚಂದ್ರಕಲಾ ಅವರಿಗೆ ಸಿಪಾಯಿ ಹುದ್ದೆಯ ನೇಮಕಾತಿ ಪತ್ರ ವಿತರಿಸಿ  ಮಾತನಾಡಿದರು.

ರೈತರ ಆತ್ಮಹತ್ಯೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಇದರ ಬಗ್ಗೆ ಸಭೆ ನಡೆಸಲಾಗಿದ್ದು, ಪರಿಹಾರ ನೀಡಲು ಸರ್ಕಾರಿ ನಿಯಮದಲ್ಲಿ ಉಲ್ಲೇಖಿಸಿರುವ ಮಾಹಿತಿಯಲ್ಲಿ ಸದರಿ ಪ್ರಕರಣ ಬರುವುದಿಲ್ಲ. ಆದರೂ ಮಾನವೀಯತೆಯ ದೃಷ್ಟಿಯಿಂದ ಜಿಲ್ಲಾಡಳಿತವು ವಿಶೇಷ ಪ್ರಕರಣವೆಂದು ಭಾವಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕುಟುಂಬಕ್ಕೆ ಅಗತ್ಯ ನೆರವು ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಮೃತ ಭೀಮರಾಯನ ಆತ್ಮಹತ್ಯೆ ಬಗ್ಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ತನಿಖೆ ಮುಂದುವರೆಸಿದ್ದಾರೆ. ಅದರ ಬಗ್ಗೆ ಹೆಚ್ಚಿಗೆ ಹೇಳಲು ಬರುವುದಿಲ್ಲ ಎಂದು ತಿಳಿಸಿದರು.

ಪೂರ್ವಾರ್ಜಿತ ಆಸ್ತಿಯಲ್ಲಿ ಪಾಲು ಇದೆ!
‘ಮೃತ ಭೀಮರಾಯ ಅವರ ತಾಯಿ ಶರಣಮ್ಮ ಶಿವಪ್ಪ ಸುರಪುರ ಅವರ ಹೆಸರಿನಲ್ಲಿ ದೋರನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 432ರಲ್ಲಿ 7ಎಕರೆ 38 ಗುಂಟೆ ಜಮೀನು ಇದೆ. ಮೃತ ಭೀಮರಾಯ ಸೇರಿ ಒಟ್ಟು ಐವರು ಸಹೋದರರು ಇದ್ದಾರೆ. ತಾಯಿ ಆಸ್ತಿಯಲ್ಲಿ ಪಾಲು ಪಡೆದರೆ ಮೃತ ಭೀಮರಾಯನಿಗೆ ಪೂರ್ವಾರ್ಜಿತ ಆಸ್ತಿಯಲ್ಲಿ ಪಾಲು ಬರುವಾಗ ರೈತನ ಹೆಸರಿನಲ್ಲಿ ಜಮೀನು ಇಲ್ಲ ಎನ್ನುವ ಪ್ರಶ್ನೆ ಉದ್ಭವಿಸದು. ಜಿಲ್ಲಾಡಳಿತದಿಂದ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ನಡೆದಿದೆ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಮಲ್ಲಣ್ಣ ಪರಿವಾಣ ಗೋಗಿ ಆರೋಪಿಸಿದ್ದಾರೆ.

‘ರೈತನ ಹೆಸರಿನಲ್ಲಿ ಜಮೀನು ಇಲ್ಲ ಹಾಗೂ ಬ್ಯಾಂಕ್‌ನಲ್ಲಿ ಕೃಷಿ ಸಾಲ ಇಲ್ಲ ಎಂದು ರೈತ ಪರಿಹಾರದಿಂದ ವಂಚಿಗೊಳಿಸಬಾರದು.  ಮೃತ ಭೀಮರಾಯ ತಾಯಿ ಶರಣಮ್ಮ ಅವರ ಹೆಸರಿನಲ್ಲಿ ಇರುವ ಜಮೀನಿನಲ್ಲಿ ಎರಡು ಎಕರೆ ಪಡೆದುಕೊಂಡು ಕೃಷಿ ಹೊಂಡ ತೊಡಿಸಿ ಬೇಸಾಯ ಮಾಡುತ್ತಿರುವುದು ಜಿಲ್ಲಾಡಳಿತಕ್ಕೆ ಕಾಣಿಸುತ್ತಿಲ್ಲವೇ‘ ಅವರು ಪ್ರಶ್ನಿಸಿದ್ದಾರೆ.

ಮೃತ ಭೀಮರಾಯ ಅವರಿಗೆ ರೈತ ಆತ್ಮಹತ್ಯೆ ಪ್ರಕರಣದಿಂದ ಕೈ ಬಿಟ್ಟರೆ ಜಿಲ್ಲಾಡಳಿತದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು