ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ | ಚುನಾವಣಾ ಫಲಿತಾಂಶ: ಬೆಟ್ಟಿಂಗ್ ಜೋರು

ನಾಯಕರ ಮೇಲೆ ಅಭಿಮಾನದ ಪರಾಕಾಷ್ಠೆ
Published 29 ಮೇ 2024, 5:23 IST
Last Updated 29 ಮೇ 2024, 5:23 IST
ಅಕ್ಷರ ಗಾತ್ರ

ಸುರಪುರ: ಸುರಪುರ ವಿಧಾನಸಭೆ ಉಪ ಚುನಾವಣೆಯ ಮತದಾನ ಮುಗಿದು 20 ದಿನ ಕಳೆದರೂ ಫಲಿತಾಂಶದ ಕುರಿತು ಚರ್ಚೆ ಕ್ಷೇತ್ರದಾದ್ಯಂತ ನಡೆದೇ ಇದೆ. ದಿನಾಲೂ ನೂರಾರು ಕಾರ್ಯಕರ್ತರು ತಮ್ಮ ಅಭ್ಯರ್ಥಿಯನ್ನು ಇಲ್ಲವೇ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ.

ಬಿಜೆಪಿಯ ರಾಜೂಗೌಡ ಮತ್ತು ಕಾಂಗ್ರೆಸ್‍ನ ರಾಜಾ ವೇಣುಗೋಪಾಲನಾಯಕ ಮಧ್ಯೆಯೇ ಸ್ಪರ್ಧೆ ಇದ್ದು ಇಬ್ಬರ ಬೆಂಬಲಿಗರು ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬ ವಿಶ್ವಾಸದಿಂದ ಇದ್ದಾರೆ.

ಫಲಿತಾಂಶ ಕುರಿತು ಬೆಟ್ಟಿಂಗ್ ದಂಧೆ ಜೋರಾಗಿಯೇ ನಡೆದಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದರೂ ಹಲವರು ಸ್ನೇಹಿತರಾಗಿಯೂ ಇರುತ್ತಾರೆ. ಗ್ರಾಮೀಣ ಭಾಗದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಒಂದೆಡೆ ಸೇರಿ ಫಲಿತಾಂಶದ ಕುರಿತು ಚರ್ಚೆ ನಡೆಸುತ್ತಿರುವುದು ಕಂಡು ಬರುತ್ತಿದೆ.

ತಮ್ಮ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಎಷ್ಟು ವಿಶ್ವಾಸದಿಂದ ಇದ್ದಾರೆ ಅಂದರೆ ಸೋತರೆ ಬಾಜಿ ಕಟ್ಟಿದ ಹಣಕ್ಕಿಂತ ದುಪ್ಪಟ್ಟು ಹಣ ಕೊಡಲು ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಅಭ್ಯರ್ಥಿಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಮುಖಂಡನೊಬ್ಬ ₹ 1 ಕೋಟಿ ಬಾಜಿ ಕಟ್ಟಿದ್ದಾನೆ ಎಂದು ಆ ಪಕ್ಷದ ಕಾರ್ಯಕರ್ತರು ಹೇಳುತ್ತಾರೆ.

ಇನ್ನೊಬ್ಬ ಮುಖಂಡ 4 ಎಕರೆ ಪಣಕ್ಕೆ ಇಟ್ಟಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೂ ಕೆಲವರು ಇಷ್ಟೇ ಮತಗಳ ಅಂತರದಿಂದ ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಬಗ್ಗೆಯೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಇನ್ನು ಕೆಲವರು ಮುನ್ನಡೆಯಾದ ಒಂದು ಮತಕ್ಕೆ ಇಂತಿಷ್ಟು ಎಂದು ಹಣ ಕಟ್ಟುತ್ತಿದ್ದಾರೆ. ಭೂಪನೊಬ್ಬ ತಮ್ಮ ಅಭ್ಯರ್ಥಿ ಸೋತರೆ ಮೀಸೆ ಬೋಳಿಸಿಕೊಳ್ಳುತ್ತೇನೆ, ನಿಮ್ಮ ಅಭ್ಯರ್ಥಿ ಸೋತರೆ ನೀನು ಮೀಸೆ ಬೋಳಿಸಿಕೊಳ್ಳಬೇಕು ಎಂದು ಜಿಜ್ಜಾ ಕಟ್ಟಿದ್ದಾರೆ.

ಇನ್ನೊಬ್ಬ ಅಭಿಮಾನಿ ತಮ್ಮ ನಾಯಕ ಪರಾಭವಗೊಂಡರೆ ಜೀವನ ಪರ್ಯಂತ ಚಪ್ಪಲಿಯೇ ಹಾಕುವುದಿಲ್ಲ ಎಂದು ಶಪಥ ಮಾಡಿದ್ದಾನೆ. ಮತ್ತೊಬ್ಬ ಕಾರ್ಯಕರ್ತ ಪಂದ್ಯ ಸೋತರೆ ಗೆದ್ದವರ ಜಮೀನಿನಲ್ಲಿ 15 ದಿನ ದುಡಿಯುವುದಾಗಿ ಬಾಜಿ ಕಟ್ಟಿದ್ದಾನೆ.

ಹೀಗೆ ಫಲಿತಾಂಶ ಕುರಿತು ಮುಖಂಡರು, ಕಾರ್ಯಕರ್ತರು ವೈವಿಧ್ಯಮಯ ಬಾಜಿ ಕಟ್ಟಿ ಗಮನಸೆಳೆಯುತ್ತಿದ್ದಾರೆ. ಆದರೆ ಇವು ಯಾವುದಕ್ಕೆ ಸಾಕ್ಷಿ ಇರುವುದಿಲ್ಲ. ಕೇವಲ ನಂಬಿಕೆ ಮತ್ತು ವಿಶ್ವಾಸದ ಮೇಲೆ ಬಾಜಿ ನಡೆಯುತ್ತದೆ. ಇನ್ನು ಕೆಲವರು ಬಾಜಿ ಕಟ್ಟಿದ ಹಣವನ್ನು ಮೂರನೇ ವ್ಯಕ್ತಿಯ ಹತ್ತಿರ ಇರಿಸಿದ್ದಾರೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT