ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಸಾಲ ವಿತರಣೆಗೆ ಕ್ರಮ ಕೈಗೊಳ್ಳಿ: ಗ್ರಾಹಕರ ಪ್ರತಿಭಟನೆ

ರಂಗಂಪೇಟೆಯ ಎಸ್‌ಬಿಐ ಶಾಖೆ
Last Updated 15 ಡಿಸೆಂಬರ್ 2021, 4:05 IST
ಅಕ್ಷರ ಗಾತ್ರ

ಸುರಪುರ: ‘ರಂಗಂಪೇಟೆಯ ಎಸ್‍ಬಿಐ ಶಾಖೆಯಲ್ಲಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಒಕ್ಕೂಟದ ನೇತೃತ್ವದಲ್ಲಿ ಗ್ರಾಹಕರು ಮಂಗಳವಾರ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘ಕಳೆದ ಒಂದು ತಿಂಗಳಿಂದ ಬ್ಯಾಂಕ್‍ನಲ್ಲಿ ಸಾಲ ವಿತರಣೆ ಮಾಡುವ ಫೀಲ್ಡ್ ಆಫೀಸರ್ ಇಲ್ಲ. ಬೆಳೆ ಸಾಲ ಪಡೆದುಕೊಳ್ಳುವ ರೈತರು ಪ್ರತಿದಿನ ಬ್ಯಾಂಕ್‍ಗೆ ಅಲೆದು ಸುಸ್ತಾಗಿದ್ದಾರೆ. ವ್ಯವಸ್ಥಾಪಕರು ಪರ್ಯಾಯ ವ್ಯವಸ್ಥೆ ಮಾಡದೆ ಉಡಾಫೆಯಿಂದ ಉತ್ತರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಹಿಂಗಾರು ಬಿತ್ತನೆಗೆ ರೈತರು ಜಮೀನು ಸಿದ್ಧ ಮಾಡಿಕೊಂಡಿದ್ದಾರೆ. ಮೊದಲು ಪಡೆದ ಸಾಲ ಮರುಪಾವತಿ ಮಾಡಿ, ಪುನಃ ಸಾಲ ಪಡೆಯಲು ಅಲೆಯುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮರು ಸಾಲ ನೀಡದೆ ರೈತರನ್ನು ಅಲೆದಾಡಿಸುತ್ತಿದ್ದಾರೆ. ಸಾಲ ಮಂಜೂರಾತಿ ಕೆಲಸವನ್ನು ಲೀಡ್ ಬ್ಯಾಂಕ್‍ನವರು ವಹಿಸಿಕೊಂಡಿದ್ದಾರೆ. ಅಲ್ಲಿಂದ ಮಂಜೂರಾತಿ ಮಾಡಿಸಿಕೊಂಡು ಬರಬೇಕು. ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದು ದೂರಿದರು.

ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಭೀಮರಾಯ ಸೀಂಧಗೇರಿ ಮಾತನಾಡಿ, ‘ಒನ್‍ಟೈಮ್ ಸೆಟಲ್‍ಮೆಂಟ್‍ನಲ್ಲಿ ಸಾಲ ಮರುಪಾವತಿ ಮಾಡಿದವರಿಗೆ ಮರು ಸಾಲ ನೀಡಲು ಸರ್ಕಾರ ಆದೇಶಿಸಿದೆ. ಬ್ಯಾಂಕ್ ಅಧಿಕಾರಿಗಳು ಸರ್ಕಾರದ ನಿರ್ದೇಶನ ಗಾಳಿಗೆ ತೂರಿ ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಸಾಲ ಪಾವತಿಸಿಕೊಂಡು ಮರು ಸಾಲ ನೀಡದೆ ದಿನಕ್ಕೊಂದು ನಿಯಮ ಹೇಳುತ್ತಿದ್ದಾರೆ. ಕೂಡಲೇ ಪಾವತಿದಾರರಿಗೆ ಮರು ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಫೀಲ್ಡ್ ಆಫೀಸರ್ ನಿಯೋಜಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗೆ ಬರೆದ ಬೇಡಿಕೆಯ ಮನವಿಯನ್ನು ಶಾಖಾ ವ್ಯವಸ್ಥಾಪಕರಿಗೆ ಸಲ್ಲಿಸಿದರು.

ಪ್ರಮುಖರಾದ ಶಿವಶಂಕರ ಹೊಸ್ಮನಿ, ಗೋಪಾಲ ಬಾಗಲಕೋಟೆ, ರಾಜು ದರಬಾರಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT