ಮಂಗಳವಾರ, ಮಾರ್ಚ್ 21, 2023
20 °C
ಹಿಂದಿನ ವರ್ಷಗಳಲ್ಲೂ ಕಾಡಿದ ಕೃಷ್ಣೆ, ಭೀಮೆ ಪ್ರವಾಹ, ಕೆರೆಗಳಲ್ಲಿ ಅಣಕು ಪ್ರದರ್ಶನ

ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಎದುರಿಸಲು ಅಗ್ನಿಶಾಮಕ ದಳ ಅಣಕು ಪ್ರದರ್ಶನ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯು ಈಚಿನ ವರ್ಷಗಳಲ್ಲಿ ಪ್ರತಿ ವರ್ಷ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಅಗ್ನಿಶಾಮಕದ ದಳದಿಂದ ಪ್ರವಾಹ ಎದುರಿಸಲು ಕಸರತ್ತು ನಡೆಸಲಾಗುತ್ತಿದೆ.

ಪ್ರತಿ ತಿಂಗಳಲ್ಲಿ ಒಂದರಿಂದ ಎರಡು ಬಾರಿ ಕೆರೆಗಳಲ್ಲಿ ಮಾಕ್‌ ಡ್ರಿಲ್ (ಅಣಕು ಪ್ರದರ್ಶನ) ಮಾಡಲಾಗುತ್ತಿದೆ. ಈಚೆಗೆ ಯಾದಗಿರಿ, ಸುರಪುರ ತಾಲ್ಲೂಕಿನಲ್ಲಿ ಅಣಕು ಪ್ರದರ್ಶನ ಮಾಡಲಾಗಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿಗಳಿದ್ದು, ಪ್ರತಿವರ್ಷ ಕೃಷ್ಣಾ ನದಿಯಲ್ಲಿ ಮಾತ್ರ ಪ್ರವಾಹ ಪರಿಸ್ಥಿತಿ ಏರ್ಪಡುತ್ತಿತ್ತು. ಕಳೆದ ಬಾರಿ ಭೀಮಾ ನದಿಯಲ್ಲೂ ಪ್ರವಾಹ ಉಂಟಾಗಿ ಸಾಕಷ್ಟು ನಷ್ಟ ಉಂಟಾಗಿತ್ತು. ನದಿ ದಂಡೆಯ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಹೈದರಾಬಾದ್‌ನ ಎನ್‌ಡಿಆರ್‌ಎಫ್‌ ತಂಡದ ಜೊತೆಗೆ ಜಿಲ್ಲೆಯ ಅಗ್ನಿಶಾಮಕ ದಳದ ಸಿಬ್ಬಂದಿಯೂ ಜೊತೆಗೂಡಿ ಪ್ರವಾಹ ಪರಿಸ್ಥಿತಿ ನಿಭಾಯಿಸಿದ್ದರು.

ಮೂರು ಅಗ್ನಿಶಾಮಕ ಠಾಣೆಗಳು: ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳಿದ್ದು, ಹೊಸ ತಾಲ್ಲೂಕಿನಲ್ಲಿ ಠಾಣೆಗಳಿಲ್ಲ. ಜಾಗ ಮಂಜೂರು ಆಗಿದ್ದು, ಸರ್ಕಾರದಿಂದ ಠಾಣೆ ನಿರ್ಮಾಣಕ್ಕೆ ಇನ್ನೂ ಹಸಿರು ನಿಶಾನೆ ಬಂದಿಲ್ಲ.

ಯಾದಗಿರಿ ಅಗ್ನಿಶಾಮಕ ಠಾಣೆಯಲ್ಲಿ 44 ಮಂಜೂರು ಹುದ್ದೆಗಳಿದ್ದು, 31 ಸಿಬ್ಬಂದಿ ಇದ್ದಾರೆ. ಸುರಪುರ ತಾಲ್ಲೂಕಿನ ಅಗ್ನಿಶಾಮಕ ಠಾಣೆಯಲ್ಲಿ 27 ಹುದ್ದೆಗಳಿವೆ. 17 ಸ್ಥಾನಗಳು ಭರ್ತಿಯಾಗಿವೆ. ಶಹಾಪುರದಲ್ಲಿ 40 ಹುದ್ದೆಗಳಿದ್ದು, 25 ಭರ್ತಿಯಾಗಿವೆ.

ಕೆರೆಗಳಲ್ಲಿ ಅಣಕು ಪ್ರದರ್ಶನ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಎರಡು ಕೆರೆಗಳಲ್ಲಿ ಅಣಕು ಪ್ರದರ್ಶನ ಮಾಡಲಾಗಿದೆ. ಯಾದಗಿರಿ ನಗರದ ಲುಂಬಿನಿ ವನ ಕೆರೆ (ಸಣ್ಣ ಕೆರೆ), ಸುರಪುರ ತಾಲ್ಲೂಕಿನ ಮಾಚಗುಂಡಾಳ ಕೆರೆಯಲ್ಲಿ ಅಣಕು ಪ್ರದರ್ಶನ ಕೈಗೊಳ್ಳಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮುಂದಿನ ಬಾರಿ ಪ್ರವಾಹ ಉಂಟಾದರೆ ಪ್ರವಾಹ ಸಂತ್ರಸ್ತರನ್ನು ರಕ್ಷಣೆ ಮಾಡುವ ಕುರಿತು ತರಬೇತಿ ನೀಡಲಾಗಿದೆ.

ವಿವಿಧ ಸಾಮಗ್ರಿ ಹಸ್ತಾಂತರ: ಜಿಲ್ಲಾಡಳಿದಿಂದ ಅಗ್ನಿ ಶಾಮಕ ದಳಕ್ಕೆ ಪ್ರವಾಹ ಪರಿಸ್ಥಿತಿಯಲ್ಲಿ ಉಪಯೋಗವಾಗುವ ಸಾಮಗ್ರಿಗಳನ್ನು ಹಸ್ತಾಂತರ ಮಾಡಲಾಗಿದೆ.

ಬೋಟ್‌ ದುರಸ್ತಿಯಾದರೆ ಸಮಸ್ಯೆ: ‘ಜಿಲ್ಲೆಗೆ ಎರಡು ಬೋಟ್‌ ಮಂಜೂರು ಆಗಿವೆ. ಆದರೆ, ಬೋಟ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ ಮಂಗಳೂರು, ಪೂನಾ, ಮುಂಬೈ ಪರಿಣತರೇ ಬಂದು ದುರಸ್ತಿ ಮಾಡಬೇಕಾಗಿದೆ. ಇದರಿಂದ ಕೆಲವೊಮ್ಮೆ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್‌ ಪಾಟೀಲ ಹೇಳುತ್ತಾರೆ.

‘2013ರಲ್ಲಿ ಎರಡು ಬೋಟ್‌ಗಳಿದ್ದವು. ಈಗ ಅವು ಹಳೆಯದಾಗಿದ್ದು, ಹಾಳಾಗಿವೆ. ಹೀಗಾಗಿ ಮೂರು ತಾಲ್ಲೂಕಿಗೆ ಎರಡರಂತೆ ಒಟ್ಟು 6 ಬೋಟ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರವಾಹ ಉಂಟಾಗಿತ್ತು. ಆದರೂ ನಮ್ಮ ಸಿಬ್ಬಂದಿ ಅಲರ್ಟ್‌ ಆಗಿ ಇದ್ದೇವೆ’ ಎನ್ನುತ್ತಾರೆ ಅವರು.

***

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಿಬ್ಬಂದಿ ಜೊತೆ ಸೇರಿ ಅಣಕು ಪ್ರದರ್ಶನ ಮಾಡಲಾಗಿದೆ. ಪ್ರವಾಹ ಎದುರಿಸಲು ಅಗತ್ಯ ಪರಿಕರವೂ ಜಿಲ್ಲಾಡಳಿದಿಂದ ಲಭಿಸಿದೆ
ಹನುಮನಗೌಡ ಪೊಲೀಸ್‌ ಪಾಟೀಲ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.