ಯಾದಗಿರಿ: ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಒಂದೂವರೆ ತಿಂಗಳ ಹಿಂದೆ ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿತ್ತು. ಈಗ ಮತ್ತೆ ಎರಡು ನದಿಗಳು ದಡ ಮೀರಿ ಹರಿಯುತ್ತಿವೆ. ನದಿ ಪಾತ್ರದ ಜಮೀನುಗಳಿಗೆ ಈಗಾಲೇ ನೀರು ನುಗ್ಗುವ ಆತಂಕ ಶುರುವಾಗಿದೆ. ಶಹಾಪುರ ತಾಲ್ಲೂಕಿನ ಭೀಮಾ ನದಿ ವ್ಯಾಪ್ತಿಯ ಕೆಲ ಜಮೀನುಗಳಿಗೆ ನೀರು ನುಗ್ಗಿದೆ ಎಂದು ಗ್ರಾಮಸ್ಥರು ನೀಡುವ ಮಾಹಿತಿಯಾಗಿದೆ.
ಕೃಷ್ಣಾ ಮತ್ತು ಭೀಮಾ ನದಿ ಆಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು ಒಳಹರಿವು ಹೆಚ್ಚಾಗಿದೆ. ಕೆಳ ಭಾಗದ ನದಿಗೆ ನೀರು ಹರಿಸಲಾಗುತ್ತಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡಲಾಗುತ್ತಿದೆ. ಇದರಿಂದ ಭೀಮಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಕಂಡು ಬಂದಿದೆ.
‘ನಾರಾಯಣಪುರ ಜಲಾಶಯದಿಂದ 1.85 ಲಕ್ಷ ಕ್ಯುಸೆಕ್ ನೀರು ಒಳಹರಿವು ಇದ್ದರೆ, 1.78 ಲಕ್ಷ ಕ್ಯುಸೆಕ್ ನೀರು ಹೊರ ಹರಿವು ಇದೆ. ಈಗಾಗಲೇ 2.50 ಲಕ್ಷ ಕ್ಯುಸೆಕ್ ನೀರು ಹರಿದು ಶಹಾಪುರ ತಾಲ್ಲೂಕಿನ ಕೊಳ್ಳುರು ಎಂ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತವಾಗಿತ್ತು. ಈಗ ಮತ್ತೆ ಪ್ರವಾಹ ಆತಂಕ ಎದುರಿಸುವಂತಾಗಿದೆ‘ ಎಂದು ಗ್ರಾಮಸ್ಥರಾದ ಬಸವರಾಜ ಬಂಗಿ ಹೇಳುತ್ತಾರೆ.
ಜಲಾನಯನದಲ್ಲಿ ಮಳೆ ಪ್ರಮಾಣ ಮತ್ತು ಮೇಲಿನ ಅಣೆಕಟ್ಟಿನ ಒಳಹರಿವಿನ ಪರಿಸ್ಥಿತಿಗೆ ಅನುಗುಣವಾಗಿ ಬಿಡುಗಡೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಆಣೆಕಟ್ಟು ಮೂಲಗಳು ತಿಳಿಸಿವೆ. ಭೀಮಾ ನದಿಗೆ ಚಿತ್ತಾಪುರ ತಾಲ್ಲೂಕಿನ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಸನ್ನತಿ ಬ್ರಿಕ್ ಕಂ ಬ್ಯಾರೇಜ್‌ನಿಂದ 1.50 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸುತ್ತಿದ್ದು ಸದ್ಯಕ್ಕೆ ಪ್ರವಾಹ ಪರಿಸ್ಥಿತಿ ಇಲ್ಲ. ನೀರು ಬಂದಂತೆ ಬಿಡುಗಡೆ ಮಾಡುತ್ತಿರುವುದರಿಂದ ಯಾವುದೇ ಅತಂಕವಿಲ್ಲ.ರಮೇಶ್, ಎಇಇ, ಗುರುಣಸಗಿ ಬ್ಯಾರೇಜ್
ಗುರಸಣಗಿ–ಯಾದಗಿರಿ ಬ್ರಿಜ್ ಕಂ ಬ್ಯಾರೇಜ್‌ನಿಂದ 1.45 ಲಕ್ಷ ಕ್ಯುಸೆಕ್ ಒಳಹರಿವು ಇದ್ದರೆ, 1.45 ಲಕ್ಷ ಕ್ಯುಸೆಕ್ ಹೊರ ಹರಿಸಲಾಗುತ್ತಿದೆ. ಜೋಳದಡಗಿ–ಗುಡೂರು ಬ್ಯಾರೇಜ್ 1.45 ಲಕ್ಷ ಕ್ಯುಸೆಕ್ ಒಳಹರಿವು ಇದ್ದು, ಅಷ್ಟೆ ಪ್ರಮಾಣದ ಹೊರ ಹರಿವು ಇದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ಪ್ರವಾಹದ ಸಿದ್ಧತೆ ಕೈಗೊಳ್ಳದ ಕಾರಣ ಗೇಟ್‌ಗಳು ತೆಗೆಯದೇ ಜಮೀನುಗಳಿಗೆ ನೀರು ನುಗ್ಗಿತ್ತು. ಆದರೆ, ಈ ಬಾರಿ ಭೀಮಾ ನದಿ ವ್ಯಾಪ್ತಿಯಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ರಿಜ್ ಕಂ ಬ್ಯಾರೇಜ್ ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.
ಯಾದಗಿರಿ ನಗರ ಹೊರ ವಲಯದ ಗುರುಸಣಗಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಭೀಮಾ ನದಿ ನೀರು ಹರಿಸಲಾಗುತ್ತಿದೆ ಪ್ರಜಾವಾಣಿ ಚಿತ್ರಗಳು:ರಾಜಕುಮಾರ ನಳ್ಳಿಕರ್
ವಡಗೇರಾದಲ್ಲಿ 3 ಬ್ಯಾರೇಜ್‌ಗಳು
ವಡಗೇರಾ ತಾಲ್ಲೂಕಿನ ವ್ಯಾಪ್ತಿಯ ಜೋಳದಡಗಿ ಕಂದಳ್ಳಿ ಹಾಗೂ ಗುರುಸಣಗಿ ಗ್ರಾಮಗಳ ಅನತಿ ದೂರದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಗುರುಸಣಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಬಳಿ ಮಳೆ ಬಂದರೆ ಸಾಕು ಸೇತುವೆಯ ಮೇಲೆ ಮಳೆಯ ನೀರು ಸಂಗ್ರಹವಾಗುತ್ತದೆ. ಕಂದಳ್ಳಿ ಗೇಟುಗಳು ಮ್ಯಾನುವಲ್ ಗೇಟುಗಳಿದ್ದು ಕ್ರೇನ್ ಮೂಲವೇ ಆಪರೇಟ್ ಮಾಡಬೇಕು. ಗುರುಸಣಗಿ–ಯಾದಗಿರಿ ಬ್ಯಾರೇಜ್ 8 ಮೀಟರ್ ಎತ್ತರವಿದ್ದು ಶೇಖರಣಾ ಸಾಮರ್ಥ್ಯ 0.568 ಟಿಎಂಸಿ ಡೆಡ್ ಸ್ಟೋರೇಜ್ 0.015ಟಿಎಂಸಿ ಇದೆ. 24 ಹೈಡ್ರಾಲಿಕ್ ಗೇಟ್‌ಗಳಿವೆ. ಕುಡಿಯುವ ಉದ್ದೇಶಕ್ಕಾಗಿ ಯಾದಗಿರಿ ನಗರಸಭೆಗೆ ಜಾಕ್‌ವೆಲ್‌ಗೆ ಸಣ್ಣಮಟ್ಟದಲ್ಲಿ ನೀರು ಹರಿಸಲಾಗುತ್ತಿದೆ. ಜೋಳದಡಗಿ–ಗುಡೂರು ಬ್ಯಾರೇಜ್ ಶೇಖರಣಾ ಸಾಮರ್ಥ್ಯ 0.946 ಟಿಎಂಸಿ ಇದ್ದು 44 ಹೊಸ ಹೈಡ್ರಾಲಿಕ್ ಗೇಟ್‌ಗಳಿವೆ. ವಡಗೇರಾ ತಾಲ್ಲೂಕಿನ ಜೀವ ನದಿ ಭೀಮಾ ನದಿಗೆ ಕಟ್ಟಿರುವ ಬ್ರೀಜ್ ಕಂ ಬ್ಯಾರೇಜ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ನದಿಯ ನೀರು ಪೋಲಾಗಂತೆ ತಡೆಯುವುದರ ಜತೆಗೆ ಜನರ ಜೀವವನ್ನು ಕಾಪಾಡಬೇಕು ಎಂದು ಈ ಭಾಗದ ರೈತರು ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ನದಿ ತೀರದ ಗ್ರಾಮಗಳಿಗೆ ಆತಂಕ
ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಹುಣಸಗಿ ಸುರಪುರ ಶಹಾಪುರ ವಡಗೇರಾ ತಾಲ್ಲೂಕುಗಳಿದ್ದು ಭೀಮಾ ನದಿ ಪಾತ್ರದಲ್ಲಿ ಶಹಾಪುರ ಯಾದಗಿರಿ ವಡಗೇರಾ ತಾಲ್ಲೂಕುಗಳನ್ನು ಹೊಂದಿದೆ. ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ತಳಕ್ ಮುಷ್ಟೂರ ಕೌಳೂರು ಲಿಂಗೇರಿ ಮಲ್ಹಾರ ಶಹಾಪುರ ತಾಲ್ಲೂಕಿನ ಅಣಬಿ ಮಹಲ್ ರೋಜಾ ಶಿರವಾಳ ಹುಬ್ಬಳ್ಳಿ ಹುರಸಗುಂಡಗಿ ಇಬ್ರಾಹಿಂಪುರ ನಾಲ್ವಡಗಿ ತಂಗಡಗಿ ಚಟ್ನಳ್ಳಿ ವಡಗೇರಾ ತಾಲ್ಲೂಕು ವ್ಯಾಪ್ತಿಯ ನಾಯ್ಕಲ್ ಗುರುಸಣಗಿ ಬಿರನಾಳ ಬಬಲಾದ ಗೆಡ್ಡೆಸೂಗೂರು ಹಾಲಗೇರಾ ಗೋಡಿಹಾಳ ಶಿವನೂರು ಬಿಳ್ಹಾರ ಮಾಚನೂರ ಭೀಮನಳ್ಳಿ ಬೆನಕನಹಳ್ಳಿ ಕಂದಳ್ಳಿ ಕುಮನೂರು ಅರ್ಜುಣಗಿ ಮತ್ತು ಜೋಳದಡಗಿ ಕೊಂಗಂಡಿ ಸೂಗೂರು ಸಂಗಮ ಗ್ರಾಮಗಳು ನದಿ ತೀರದಲ್ಲಿವೆ. 2 ಲಕ್ಷ ಕ್ಯುಸೆಕ್ ಮೇಲ್ಪಟ್ಟು ನೀರು ಬಂದರೆ ವಡಗೇರಾ ತಾಲ್ಲೂಕಿನ ಜೋಳದಡಗಿ ಸೇತುವೆ ಮುಳಗಡೆಯಾಗುವ ಸಾಧ್ಯತೆ ಇರುತ್ತದೆ. 3 ಲಕ್ಷ ಕ್ಯುಸೆಕ್ ನೀರು ಬಂದರೆ ವಡಗೇರಾ ತಾಲ್ಲೂಕಿನ ಕಂದಳ್ಳಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇರುತ್ತದೆ. 3.5 ಲಕ್ಷ ಕ್ಯುಸೆಕ್ ನೀರು ಹರಿದು ಬಂದರೆ ಯಾದಗಿರಿ ತಾಲ್ಲೂಕಿನ ಆನೂರ್ (ಬಿ) ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಭೀಮಾನದಿಗೆ 4 ರಿಂದ 5 ಲಕ್ಷ ಕ್ಯುಸೆಕ್ ನೀರು ಹರಿದು ಬಂದಾಗ ಯಾದಗಿರಿ ತಾಲ್ಲೂಕಿನ ಠಾಣಗುಂದಿ ಅರಕೇರಾ ಬಿ ಮುದ್ನಾಳ ಮುಷ್ಟೂರು ಕೌಳೂರು ಲಿಂಗೇರಿ ಮಲ್ಹಾರ ಬೆಳಗುಂದಿ ಆನೂರ್ (ಕೆ) ಗೊಂದಡಗಿ ಗೂಡೂರು ಬಾಡಿಯಾಳ ಗ್ರಾಮಗಳಲ್ಲಿ ಪ್ರವಾಹ ಉಂಟಾಗುತ್ತದೆ. ಸದ್ಯಕ್ಕೆ ನೀರಿನ ಹರಿವಿನ ಪ್ರಮಾಣ ಕಡಿಮೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.