ಸೋಮವಾರ, ಏಪ್ರಿಲ್ 19, 2021
27 °C
ಗುರುಮಠಕಲ್ ಪುರಸಭೆಯ ಸಾಮಾನ್ಯ ಸಭೆ

ಗುರುಮಠಕಲ್ ಪುರಸಭೆಯ ಸಾಮಾನ್ಯ ಸಭೆ: ನೀರಿನ ಸಮಸ್ಯೆ ಬಗೆಹರಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಬೇಸಿಗೆ ಕಾಲ ಆರಂಭವಾಗುತ್ತಿದ್ದು ಪಟ್ಟಣದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸುವುದು, ಪಟ್ಟಣದ ಬೇಡಿಕೆಗೆ ತಕ್ಕಷ್ಟು ಕುಡಿಯುವ ನೀರಿನ ಸರಬರಾಜಿಗೆ ಮುಂಜಾಗ್ರತೆ ವಹಿಸುವುದು ಹಾಗೂ ನೀರಿನ ಸಮಸ್ಯೆ ತಲೆದೂರಿದಲ್ಲಿ ಕೂಡಲೇ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ವಹಿಸಬೇಕೆಂದು ಪುರಸಭೆಯ ಎಲ್ಲಾ ಸದಸ್ಯರು ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ಮೊದಲ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿ ಒಪ್ಪಿಗೆ ಪಡೆಯಲಾಯಿತು.

ಬೀದಿ ವ್ಯಾಪಾರಿಗಳು ಹಾಗೂ ಗೂಡಂಗಡಿಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು, ನಿಯಮಾನುಸಾರ ಅವಧಿ ಮುಗಿದ ಪುರಸಭೆಯ ಮಾಲೀಕತ್ವದ ವಾಣಿಜ್ಯ ಮಳಿಗೆಗಳನ್ನು ಮತ್ತೆ ಟೆಂಡರ್ ಮೂಲಕ ಬಾಡಿಗೆ ನೀಡಬೇಕು ಹಾಗೂ ಕರ ಸಂಗ್ರಹಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಸದಸ್ಯ ರವೀಂದ್ರರೆಡ್ಡಿ ಶೇರಿ ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪುರಸಭೆಯ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಮಳಿಗೆಗಳ ಟೆಂಡರ್ ಮಾಡುವುದು, ಬೀದಿಬದಿ ವ್ಯಾಪಾರಿಗಳು ಹಾಗೂ ಗೂಡಂಗಡಿಗಳ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಮತ್ತು ಕರ ವಸೂಲಿಯನ್ನೂ ಮಾಡಲಾಗುತ್ತದೆ. ಅದಕ್ಕೆ ಸದಸ್ಯರಿಂದಲೂ ಸಲಹೆ- ಸೂಚನೆಗಳ ಮತ್ತು ಸಹಕಾರದ ಅವಶ್ಯಕತೆಯಿದೆ, ಎಲ್ಲರೂ ಒಗ್ಗೂಡಿ ಈ ವಿಷಯಗಳನ್ನು ಪರಿಷ್ಕರಿಸೋಣ ಎಂದರು.

ಪುರಸಭೆ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ಮಾಡಲು ಮತ್ತು ವಾಹನ ಚಾಲಕರನ್ನು ಹಾಗೂ ಸ್ವಚ್ಛತಾಕರ್ಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುವಂತೆ ಆಶನ್ನ ಬುದ್ಧ ಅವರು ಪ್ರಸ್ತಾಪಿಸಿದ್ದಕ್ಕೆ, ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ತಕ್ಕಷ್ಟು ಜನ ಸ್ಥಳೀಯರನ್ನು ನೇಮಕ ಮಾಡಿಕೊಳ್ಳೋಣ ಎಂದು ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಭರವಸೆ ನೀಡಿದರು.

ಪಟ್ಟಣದ ಆಸ್ತಿಗಳ ಖಾತಾ ನಕಲಿಗೆ ಸಂಬಂಧಿಸಿದ ಪಿಐಡಿ ಶುಲ್ಕವನ್ನು ₹ 200 ನಿಗದಿ, ಪಟ್ಟಣದ ಹೊರ ಪ್ರದರ್ಶನದ ಜಾಹೀರಾತಿಗೆ ದಿನಕ್ಕೆ ₹ 300 ನಿಗದಿ, ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಾಡಿಗೆ ಮತ್ತು ನಿರ್ವಹಣೆಗೆ ಟೆಂಡರ್ ಮಾಡುವುದು, ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ಸಂಬಳ ಪಾವತಿಸುವುದು, ಲಕ್ಷ್ಮೀನಗರ ಬಡಾವಣೆಯ ಸ್ಮಶಾನ ಭೂಮಿಯಲ್ಲಿ ಬೆಳೆದ ಮುಳ್ಳಿನ ಗಿಡಗಳು, ಪೊದೆಯನ್ನು ಕಟಾವು ಮಾಡಿ ಸ್ವಚ್ಛಗೊಳಿಸುವುದು, ಪುರಸಭೆಯ ಕೆಲಸಗಳು ಸಕಾಲಕ್ಕೆ ಸುಗಮವಾಗಿ ನಡೆಯಲು ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸುವುದು, ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣ ಹಾಗೂ ಶಿರಿಡಿ ಸಾಯಿಬಾಬಾ ಮಂದಿರ ನಿರ್ಮಾಣಕ್ಕಾಗಿ ನಿವೇಶನ ಮಂಜೂರು ಮಾಡುವುದು ಹಾಗೂ ಲಕ್ಷ್ಮೀ ನಗರ ಬಡಾವಣೆಯಲ್ಲಿರುವ ಪುರಸಭೆಯ ಹಳೆ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಹೊಸ ಮಳಿಗೆಯನ್ನು ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಯಿತು.

ಪುರಸಭೆಯ ಅಧ್ಯಕ್ಷ ಪಾಪಣ್ಣ ಮನ್ನೆ ಅಧ್ಯಕ್ಷತೆ ವಹಿಸಿದ್ದರು. ಆಧ್ಯಕ್ಷೆ ಭೀಮವ್ವ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಸದಸ್ಯರಾದ ಖಾಜಮೈನೋದ್ದೀನ್, ಬಾಲಪ್ಪ ದಾಸರಿ, ಸಿರಾಜ್, ಕೃಷ್ಣ ಮೇದಾ, ಬಾಬು ತಲಾರಿ, ನರಸಪ್ಪ ಗಡ್ಡಲ್, ಅನ್ವರ್, ಜಯಶ್ರೀ, ಲಕ್ಷ್ಮೀಬಾಯಿ ಚೌದ್ರಿ, ನವಿತಾ ಮನ್ನೆ, ರೇಣುಕಾ ಪಡಿಗೆ, ಪ್ರೀತಿಬಾಯಿ ಜಿತ್ರೆ, ಪಾರ್ವತಮ್ಮ ಲಿಕ್ಕಿ, ಪುಷ್ಪವತಿ, ಪಾರ್ವತಮ್ಮ ಮನ್ನೆ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.